ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಬಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಶಿಲ್ಪಾ ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದಾರೆ. ಕೋಲಾರ ಮೂಲದ ಶಿಲ್ಪಾ ಮೊದಲ ವರ್ಷದ ಪಿಜಿ ವ್ಯಾಸಂಗ ಮಾಡುತ್ತಿದ್ದರು. ಅಕ್ಟೋಬರ್ 10ರಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬಿಎಂಟಿಸಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದರು.
ಅಪಘಾತದಲ್ಲಿ ಶಿಲ್ಪಾಳ ಸೊಂಟಕ್ಕೆ ತೀವ್ರ ಹಾನಿಯಾಗಿ ರಕ್ತ ಹೆಚ್ಚು ಹೋಗಿತ್ತು. ಬನ್ನೇರುಘಟ್ಟ ರಸ್ತೆಯ ಫೋರ್ಟೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಲ್ಪಾ ಸಾವು ಬದುಕಿನ ನಡುವೆ ಹೋರಾಟ ನಡೆಸಿದರು. 14ದಿನಗಳ ಚಿಕಿತ್ಸೆ ಫಲಕಾರಿಯಾಗದೆ ಶಿಲ್ಪಾ ಭಾನುವಾರ (ಅ.23) ಮುಂಜಾನೆ 4:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬಳಿಕ ಪೋಷಕರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಿದ್ದಾರೆ. ಕೋಲಾರದ ಬಂಗಾರಪೇಟೆ ಅಂತ್ಯಕ್ರಿಯೆ ನಡೆಯಲಿದೆ.
ಬೆಂಗಳೂರು ವಿವಿ ವಿದ್ಯಾರ್ಥಿನಿ ಶಿಲ್ಪಾ ಸಾವಿನ ಸುದ್ದಿ ಬೇಸರ ತರಿಸಿದೆ ಎಂದು ಸ್ನಾತಕೋತ್ತರ, ಸಂಶೋಧನಾ ಪೀಠದ ಉಪಾಧ್ಯಕ್ಷ ಸತೀಶ್ ಪ್ರತಿಕ್ರಿಯಿಸಿದ್ದಾರೆ. ಆಕೆ ಮೊದಲಿನಂತೆ ಆಗಲಿ ಎಂದು ಪ್ರಾರ್ಥಿಸಿದ್ದೆವು. ಸರ್ಕಾರ ಈ ಬಗ್ಗೆ ಮೀನಾಮೇಷ ಎಣಿಸದೆ ಪರಿಹಾರ ನೀಡಬೇಕು. ವಿದ್ಯಾರ್ಥಿನಿಯ ಮನೆಯವರಿಗೆ ಸರ್ಕಾರಿ ಕೆಲಸ ನೀಡಬೇಕು. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ವಿರುದ್ಧ ವಿದ್ಯಾರ್ಥಿ ಅರುಣ್ ಆಕ್ರೋಶ ಹೊರಹಾಕಿದರು. ಈ ರೀತಿ ಘಟನೆಗಳಿಂದ ವಿಶ್ವ ವಿದ್ಯಾಲಯಕ್ಕೆ ಕೆಟ್ಟ ಹೆಸರು ಬರುತ್ತದೆ. ಸರ್ಕಾರ, ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಸರ್ಕಾರ ಏನೇ ಪರಿಹಾರ ನೀಡಿದರೂ ಜೀವ ಮರಳಿ ಬರುವುದಿಲ್ಲ ಎಂದರು.
ಇದನ್ನೂ ಓದಿ | Courtesy | ಅಪಘಾತದಲ್ಲಿ ಮೃತಪಟ್ಟ ಲೋಕಾಯುಕ್ತ ಎಸ್‌ಪಿ ಮಗಳನ್ನು ಕಮಿಷನರ್ ಸೀಟಲ್ಲಿ ಕೂರಿಸಿ ಗೌರವ