ಬೆಂಗಳೂರು: ಪತ್ನಿಗೆ ಪಿಸ್ತೂಲ್ನಿಂದ ಗುಂಡು ನುಗ್ಗಿಸಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದವನು ಈಗ ಅದೇ ಪಿಸ್ತೂಲ್ನಲ್ಲಿ ತನ್ನ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಪ್ರಭಾವಿಗಳ ಹೆಸರೂ ಇದ್ದು, ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಬೆಳ್ಳಂದೂರು ಬಳಿಯ ಅಂಬಲಿಪುರ ನಿವಾಸಿ ಪ್ರದೀಪ್ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡವನು. ಮೊನ್ನೆ ಇಡೀ ಕುಟುಂಬದ ಜೊತೆಗೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ನೆಟ್ಟಿಗೆರೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಈತ ಹೊಸ ವರ್ಷಾಚರಣೆಗಾಗಿ ಬಂದಿದ್ದ. ಸಂಜೆ 5 ಗಂಟೆ ಸುಮಾರಿಗೆ ಪತ್ನಿ ಮುಂದಿನ ಕಾರಿನಲ್ಲಿ ಹೋಗುತ್ತಿದ್ದರು. ಹಿಂದೆ ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ಪ್ರದೀಪ್ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.
ಸಾವಿಗೂ ಮುನ್ನ ಆತ ಬರೆದಿದ್ದ ಡೆತ್ ನೋಟ್‌ನಲ್ಲಿ ಶಾಸಕ ಅರವಿಂದ ಲಿಂಬಾವಳಿ, ಗೋಪಿ.ಕೆ, ಸೋಮಯ್ಯ, ಜಿ.ರಮೇಶ್ ರೆಡ್ಡಿ, ಜಯರಾಮ್ ರೆಡ್ಡಿ, ರಾಘವ್ ಭಟ್ ಹೆಸರು ಉಲ್ಲೇಖಿಸಿದ್ದು ಪ್ರಕರಣ ಗಂಭೀರತೆ ಪಡೆದುಕೊಂಡಿದೆ.
ಇದನ್ನೂ ಓದಿ | ಲಿಂಬಾವಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ವಿರುದ್ಧ ಪತ್ನಿಯಿಂದಲೇ ಕೇಸ್ ದಾಖಲಾಗಿತ್ತು, ಪೊಲೀಸರಿಂದ ಹೆಚ್ಚಿನ ತನಿಖೆ
ʼʼHSR ಲೇಔಟ್ ಸಮೀಪದ ಹರಳೂರಿನಲ್ಲಿ ಕ್ಲಬ್ ತೆರೆಯುವ ಉದ್ದೇಶಕ್ಕೆ ಕೆ. ಗೋಪಿ ಮತ್ತು ಸೋಮಯ್ಯ ಬಳಿ 2018ರಲ್ಲಿ ಚರ್ಚೆ ಮಾಡಿದ್ದೆ. ರೆಸಾರ್ಟ್ ನಡೆಸಲು ಇವರಿಬ್ಬರು ಒಪ್ಪಿಕೊಂಡು ಪ್ರತಿ ತಿಂಗಳು 3 ಲಕ್ಷ ರೂ. ಲಾಭಾಂಶ ಮತ್ತು ಅಲ್ಲಿಯೇ ಕೆಲಸ ಮಾಡಿದರೆ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಸಂಬಳ ಕೊಡುವುದಾಗಿ ಹೇಳಿದ್ದರು. ಅದಕ್ಕೆ ಒಪ್ಪಿಕೊಂಡು 2018ರ ಮೇ ತಿಂಗಳಿಂದ ಡಿಸೆಂಬರ್‌ವರೆಗೆ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಬ್ಯಾಂಕ್‌ಗೆ ಜಮೆ ಮಾಡಿದ್ದೇನೆ. ಮೈಸೂರಿನಲ್ಲಿ ಇರುವ ಮನೆ ಮಾರಾಟ ಮಾಡಿ 40 ಲಕ್ಷ ರೂಪಾಯಿ ನಗದು ರೂಪದಲ್ಲಿ ಈ ಇಬ್ಬರಿಗೆ ನೀಡಿದ್ದೆ. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಲಾಭ ಕೊಡಲಿಲ್ಲ. ಈ ಬಗ್ಗೆ ಮಾತನಾಡಲು ಶಾಸಕರ ಬಳಿಗೆ ಹೋದಾಗ ರಾಜಿ ಸಂಧಾನ ನೆಪದಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿಯಂತೆ 9 ತಿಂಗಳು ನನ್ನ ಬಳಿ ಹಣ ಪಡೆದರು. ಆನಂತರ 90 ಲಕ್ಷ ರೂ. ವಾಪಸ್ ಕೊಡುತ್ತಾರೆ ಎಂದು ಹೇಳಿದರು. ಆದರೆ, ಆ ವೇಳೆಗೆ ನಾನು ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಶಾಸಕ ಲಿಂಬಾವಳಿ ಸಹ ನನಗೆ ಸಹಾಯ ಮಾಡಿಲ್ಲ. ರಮೇಶ್ ರೆಡ್ಡಿ ಬಳಿ 10 ಲಕ್ಷ ರೂ. ಸಾಲ ಪಡೆದಿದ್ದೆ. ಅದರ ಪ್ರತಿಯಾಗಿ ಕೃಷಿ ಜಮೀನು ಮಾರಾಟ ಮಾಡಿ 35 ಲಕ್ಷ ರೂ. ಪಾವತಿ ಮಾಡಿದ್ದೇನೆ. ಆದರೂ ಮತ್ತಷ್ಟು ಹಣ ಸುಲಿಗೆಗೆ ಬೆದರಿಕೆ ಒಡ್ಡುತ್ತಿದ್ದಾರೆ. ರಾಘವ ಭಟ್ ನನ್ನ ಬಳಿ 20 ಲಕ್ಷ ರೂ. ಸಾಲ ಪಡೆದಿದ್ದು, ಇಲ್ಲಿಯವರೆಗೂ ವಾಪಸ್ ಕೊಡದೆ ಮೋಸ ಮಾಡಿದ್ದಾರೆ. ನನಗೆ 2 ಕೋಟಿ 20 ಲಕ್ಷ ಬರಬೇಕಿತ್ತು, ಶಾಸಕರು ರಾಜಿಸಂಧಾನ ಮಾಡಿಸಿ 90 ಲಕ್ಷ ರೂ. ಕೊಡಿಸುವುದಾಗಿ ಹೇಳಿ 10 ಲಕ್ಷದ 9 ಚೆಕ್ ಕೊಡಿಸಿದ್ದರು. ಪ್ರತಿ ತಿಂಗಳು ಅಕೌಂಟ್‌ಗೆ ಜಮೆ ಮಾಡಿಸಿಕೊಳ್ಳುವಂತೆ ಹೇಳಿದ್ದರು. ಕ್ಲಬ್ ಪ್ರಾರಂಭಿಸಲು ಮಾಡಿಕೊಂಡಿದ್ದ ಸಾಲ, ಅದಕ್ಕೆ ಬಡ್ಡಿ ಹಣ ಕಟ್ಟಲು ಪತ್ನಿ ಸಹ ಸಾಲ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಹಣವೂ ಪತ್ನಿ ಮತ್ತು ಮಗಳಿಗೆ ಕೊಡಿಸಬೇಕು.ʼʼ
ಈ ಹಿಂದೆ ಪ್ರದೀಪ್ ಅವರ ಪತ್ನಿ ನಮಿತಾ, ಪ್ರದೀಪ್ ಮೇಲೆ ಹಲ್ಲೆ ಹಾಗು ಕೊಲೆ ಬೆದರಿಕೆ ದೂರನ್ನು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಆತ್ಮಹತ್ಯೆ ಪ್ರಕರಣ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | Suicide Case | ಶಾಸಕ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು, ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ