Site icon Vistara News

Temple Economics: ದೇವಾಲಯಗಳಿಂದ ನಮ್ಮ ಯುವ ಉದ್ಯಮಿಗಳು ಯಾವ ಪಾಠಗಳನ್ನು ಕಲಿಯಬಹುದು?

What can our young entrepreneurs learn from temples?

#image_title

ಸುರೇಶ್ ನರಸಿಂಹ
ಕೆಲವೇ  ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಹನುಮಂತ ನಗರದ ಬಳಿಯ ಆಂಜನೇಯನ ದೇವಸ್ಥಾನದ ಮುಂದೆ ಅಂದು ಸಾಮಾನ್ಯಕ್ಕಿಂತ ಹೆಚ್ಚಿನ ಜನ ಅದರಲ್ಲೂ ವಿಶೇಷವಾಗಿ  ಬಹಳಷ್ಟು ಯುವಕ ಯುವತಿಯರು ಸೇರಿದ್ದರು.  ಆಗ ನೆನಪಾಯ್ತು ಅಂದು ಫೆಬ್ರವರಿ 14 ಎಂದು. ಅರ್ಚಕರನ್ನು ವಿಚಾರಿಸಲಾಗಿ ಆ ದಿನ ಯುವಪ್ರೇಮಿಗಳಿಗೆ ವಿಶೇಷ ಪೂಜೆಯ ಅವಕಾಶವಿದೆ ಎಂದು ತಿಳಿಯಿತು. ಹುಡುಗರು ಹುಡುಗಿಗೆ ದೇವರ ಹೂವನ್ನು ಕೊಟ್ಟು ಕುಂಕುಮ ಹಚ್ಚುವ ಕಾರ್ಯಕ್ರಮ ವಿಶೇಷ ಪೂಜೆಯ ಭಾಗ. ಆದರೆ ಹನುಮಂತನಿಗೂ ಪ್ರೇಮಿಗಳ ದಿನಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಮೂಡುವುದು ಸಹಜ. ಸೌಗಂಧಿಕಾ ಪುಷ್ಪವನ್ನು ಪಡೆಯುವ ದಾರಿಯಲ್ಲಿ ಭೀಮನಿಗೆ ಸಿಕ್ಕ ಆಂಜನೇಯನ ಆಶೀರ್ವಾದ ಹಾಗೂ ರಾಮ ಮತ್ತು ಸೀತೆಯರು ಒಂದಾಗಲು ಹನುಮಂತ ಮಾಡಿದ ಸಾಹಸದ ವಿಷಯ ಇದರ ಹಿನ್ನಲೆ. ಒಂದು ಪಾಶ್ಚಾತ್ಯ ಆಚರಣೆ, ಬ್ರಹ್ಮಚಾರಿ ಹನುಮಂತ ಮತ್ತು ನಮಗೆ ತಿಳಿದಿರುವ ಅದ್ಭುತ ಪ್ರೇಮ ದಂಪತಿಗಳ ನಡುವಿನ ಆಕರ್ಷಕ ಸಂಪರ್ಕದ ಕೊಂಡಿ ತಾನಾಗಿ ತೆರೆದುಕೊಂದಿದ್ದು ಹೀಗೆ!

ಇಂದು ಮೊದಲಿಗಿಂತ ಹೆಚ್ಚು ಜನರು ಹೊಸ ವರ್ಷ ಅಥವಾ ರಾಷ್ಟ್ರೀಯ ರಜಾದಿನಗಳಲ್ಲಿ (ಅಂತರರಾಷ್ಟ್ರೀಯ ಸಂಸ್ಥೆಗಳು ರಜಾ  ಕೊಡುವುದೇ ಆಗ) ಪ್ರವಾಸ ಕೈಗೊಳ್ಳುತ್ತಾರೆ . ಆ ದಿನಗಳಲ್ಲಿ ಭಾರತೀಯ ದೇವಾಲಯಗಳು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದು ಸಾಮಾನ್ಯ.  ದೇವಾಲಯಗಳಲ್ಲಿ ಅಂದು ವಿಶೇಷ ಆಚರಣೆಗಳು, ಪೂಜೆ ಮತ್ತು ಕಾರ್ಯಕ್ರಮಗಳು ಅಷ್ಟೇ ಸಹಜವೆಂಬಂತೆ ಆಯೋಜಿಸಲಾಗುತ್ತಿದೆ. ಕಳೆದ ವರ್ಷ ಹೊಸ ವರ್ಷದ ಮೊದಲ ದಿನ ಕಾಶಿ ವಿಶ್ವನಾಥ ಧಾಮಕ್ಕೆ ಐದು ಲಕ್ಷಕ್ಕೂ ಅಧಿಕ ಭಕ್ತರು ಸೇರಿದ್ದರು ಎಂದು ವರದಿಯಾಗಿತ್ತು.  ದೇವಾಲಯಗಳು ಯುಗಾದಿಯನ್ನುಆಚಾರಿಸುವಷ್ಟೆ ಸಂಭ್ರಮದಿಂದ ಕ್ರಿಶ್ಚಿಯನ್ ಹೊಸ ವರ್ಷವನ್ನು ಆಚರಿಸುತ್ತಿವೆ. ಹಬ್ಬ ಯಾರದಾದರೇನು? ಆಚರಣೆಗೆ, ಸಂಭ್ರಮಕ್ಕೆ ಒಂದು  ನೆಪವಷ್ಟೆ!

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ನಮ್ಮ ದೇವಾಲಯಗಳು ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ. ಭಾರತೀಯ ದೇವಾಲಯಗಳು ಬದಲಾದ ಕಾಲ ಮತ್ತು ಪರಿಕಲ್ಪನೆಗಳಿಗೆ ಹೊಂದಿಕೊಳ್ಳುವ ಸುದೀರ್ಘ ಇತಿಹಾಸವನ್ನು ಹೊಂದಿವೆ. ಸನಾತನ ಧರ್ಮವನ್ನು ಒಂದು ಸಂಸ್ಕೃತಿ ಮತ್ತು ಜೀವನ ವಿಧಾನವೆಂದು ಪರಿಗಣಿಸಿದರೆ ಇದರ ಅರ್ಥ ಮತ್ತಷ್ಟು ಸ್ಫುಟಗೊಳ್ಳುತ್ತದೆ. ಅಷ್ಟೇ ಅಲ್ಲ ಒಂದು ಸಂಸ್ಥೆ ಹೇಗೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು, ಹೊಸ ಪರಿಕಲ್ಪನೆಗಳಿಗೆ ಹೊಂದಿಕೊಂಡು ತನ್ನ ಪ್ರಸ್ತುತತೆಯನ್ನು ವೃದ್ದಿಸಿಕೊಳ್ಳಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ. ಒಂದು ಸಾಮಾಜಿಕ ಒಕ್ಕೂಟವನ್ನಾಗಲಿ, ಉದ್ಯಮ  ಸಂಸ್ಥೆಯನ್ನಾಗಲಿ, ಸ್ತಾಪಿಸುತ್ತಿರುವ ಉದ್ಯಮಿ, ಕಾರ್ಯಕರ್ತರಿಗೆ ಮಾರ್ಗದರ್ಶಿಯೂ ಹೌದು.  

ಜಗತ್ತಿನ ಅನೇಕ ಸಂಶೋಧಕರು ಭಾರತೀಯ ದೇವಾಲಯಗಳನ್ನು  ಆರ್ಥಿಕ ಪ್ರಭಾವದ ದೃಷ್ಟಿಕೋನದಿಂದ, ವಾಸ್ತುಶಿಲ್ಪದ ದೃಷ್ಟಿಯಿಂದ ವಿಶ್ಲೇಷಿಸಿದ್ದಾರೆ. ಆದರೆ ಉದ್ಯಮಶೀಲತೆಯ, ಆವಿಷ್ಕಾರಗಳ ಮತ್ತು ಹೊಂದಿಕೊಳ್ಳುವಿಕೆಯ ದೃಷ್ಟಿಯಿಂದ ಇನ್ನೂ ಹೆಚ್ಚಿನ ಆಧ್ಯಯನದ  ಅವಕಾಶವಿದೆ. ಈ ಆದ್ಯಯನ ಇಂದಿನ ಉದ್ಯಮಿಗಳಿಗೆ ದೀರ್ಘಕಾಲೀನ ಧೃಡತೆ ಮತ್ತು ಜಾಗತಿಕವಾಗಿ ಹೊಂದಿಕೊಳ್ಳುವ ವಿಷಯಗಳಲ್ಲಿ ಉತ್ತಮ ಮೇಲ್ಪಂಕ್ತಿ ನೀಡಬಲ್ಲದು.  

ಐತಿಹಾಸಿಕವಾಗಿ ಭಾರತದಲ್ಲಿ, ಹೆಚ್ಚಿನ ದೇವಾಲಯದ ಉತ್ಸವಗಳು ಕೃಷಿ ಆಧಾರಿತ ಸಂಕ್ರಾಂತಿ, ಉಗಾದಿ, ದೀಪಾವಳಿಯಂತಹ ಹಬ್ಬಗಳ ಜೊತೆ ಹೊಂದಿಕೊಂಡಿರುವುದು ಸತ್ಯ.  ಆದರೆ ಬೇರೆ ಸ್ಥಳಗಳಿಂದ ಜನರ ವಲಸೆ ಹೆಚ್ಚಾದಂತೆ , ದೇವಾಲಯಗಳು ವಲಸಿಗರ ಆಚರಣೆಗಳನ್ನು ಪ್ರತಿಬಿಂಬಿಸಲು ಪ್ರಾರಂಭಿಸಿದವು. ಇಂದು ಉತ್ತರದ ಅನೇಕ ದೇವಾಲಯಗಳು ಓಣಂ ಅಥವಾ ಪೊಂಗಲ್ ಅನ್ನು ಆಚರಿಸುವುದು, ದಕ್ಷಿಣದ ದೇವಾಲಯಗಳು ಹೋಳಿ ಮತ್ತು ರಕ್ಷಾ ಬಂಧನವನ್ನು ಆಚರಿಸುವುದು ಸಾಮಾನ್ಯ.

ಭಾರತೀಯ ದೇವಾಲಯಗಳಲ್ಲಿ  ಸ್ಥಳೀಯ ಸಂಪ್ರದಾಯ ಅಥವಾ ಜಾನಪದ ದೇವರುಗಳಿಗೆ ಸ್ಥಾನವಿರುವುದು ವಿಶೇಷ. ಬದರಿಯ ಚಿಂಚು ಲಕ್ಷ್ಮಿಯಾಗಲಿ, ಕುಕ್ಕೆಯ ಹೊಸಲಿಗಮ್ಮನಾಗಲಿ, ಧರ್ಮಸ್ಥಳದ ಅಪ್ಪಣ್ಣನಾಗಲಿ, ನಮಗೆ ಮೂಲ ದೇವರಷ್ಟೇ ಪವಿತ್ರ. ದೇವಾಲಯಗಳು ಜನಪದ ನಂಬಿಕೆಗಳೊಂದಿಗೆ ಹೇಗೆ ಬೆಸೆದುಕೊಂಡಿವೆ ಎಂಬುದಕ್ಕೆ ಇವು ಅದ್ಭುತ ಉದಾಹರಣೆಗಳು . ಮೇಲುಕೋಟೆಯಲ್ಲಿ ಚೆಲುವನಾರಾಯಣ  ಸಂಗಾತಿ ಎಂದು ಬೀಬಿ ನಾಚಿಯಾರ್ ಅವರನ್ನು ಇಂದಿಗೂ ಪೂಜಿಸುತ್ತೇವೆ. ಈ ವಿಷಯ ಭಾರತದ ಸರ್ವಧರ್ಮ ಸಮಭಾವದ ಬಗ್ಗೆ ಹೆಮ್ಮೆಪಡುವವರಿಗೆ ಸ್ಫೂರ್ತಿದಾಯಕವಷ್ಟೆ. 

ಕೇವಲ ಸ್ಥಳೀಯ ದೇವರುಗಳಿಗೆ ಹೊಂದಿಕೊಳ್ಳುವುದಷ್ಟೇ ಅಲ್ಲ ಸ್ಥಳೀಯ ಸಾಮಾಜಿಕ ಅಗತ್ಯಗಳಿಗೆ ಹೊಂದಿಕೊಳ್ಳುವಲ್ಲಿ ದೇವಾಲಯಗಳು ನಮ್ಮಲ್ಲಿವೆ . ಕೇರಳದಲ್ಲಿ ಮುತ್ತಪ್ಪನ್ ದೇವಾಲಯದಲ್ಲಿ, ಮೀನು, ಮಾಂಸ ಮತ್ತು ಹೆಂಡ ಸಾಂಪ್ರದಾಯಿಕ ನೈವೇದ್ಯಗಳಾಗಿವೆ. ದಲಿತರ ಅಥವಾ ಅಲ್ಪಸಂಖ್ಯಾತರು ಮಾಡುವ ಯಾವುದಾದರೂ ಆಚರಣೆಯ ನಂತರವೇ ಮೆರವಣಿಗೆ ಪ್ರಾರಂಭಿಸುವ ದೇವಾಲಯಗಳು ಹಲವು, ಹೈದರಾಬಾದ್‌ನಲ್ಲಿರುವ ವೀಸಾ ಪೆರುಮಾಳ್ ದೇವಸ್ಥಾನವು H1B ವೀಸಾಗಳನ್ನು ಪಡೆಯಲು ಬರುವ ಜನರಿಗೆ ಆಗರ. ಪರೀಕ್ಷೆಗಳನ್ನು ಎದುರಿಸಲು ತಮ್ಮ ಸಮೀಪವಿರುವ ಗಣೇಶನ ದೇವಸ್ಥಾನವನ್ನು ಎಂದಿಗೂ ವಿದ್ಯಾರ್ಥಿಗಳು ನಂಬುತ್ತಾರೆ. ಒಟ್ಟಿನಲ್ಲಿ, ನಮ್ಮ ದೇವಾಲಯಗಳು ಆ ಕಾಲದ ಸಾಮಾಜಿಕ ಸ್ಥಿತಿ, ವ್ಯಾವಹಾರಿಕ ಅಗತ್ಯ, ಜನ ಜೀವನದ ನಂಬಿಕೆಯ ಜೊತೆ ಹೊಂದಿಕೊಳ್ಳುವ, ಬೆಸೆದುಕೊಳ್ಳುವ ಪರಂಪರೆಯ ಜ್ವಲಂತ ಸಾಕ್ಷಿಯಾಗಿ ನಿಲ್ಲುತ್ತವೆ.

ಭಾರತದಲ್ಲಿನ ದೇವಾಲಯಗಳು ಈ ಬದಲಾವಣೆ ಮತ್ತು ಹೊಂದಾಣಿಕೆಗಳೊಂದಿಗೆ  ಉಳಿದುಕೊಂಡಿವೆ, ವಿಸ್ತರಿಸಿವೆ ಮತ್ತು ಪ್ರಸ್ತುತವಾಗಿವೆ. ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಆಗಾಧವಾದದ್ದು. ಆಕರ್ಷಕವಾದ ಸಂಗತಿಯೆಂದರೆ, ಈ ಹಲವು ರೂಪಾಂತರಗಳು ಮೊದಲಿಂದಲೂ ಇದ್ದ ಸಂಪ್ರದಾಯ ,ಆಚರಣೆ, ಆಡಳಿತ, ನಿಯಮಗಳು ಮತ್ತು ಪದ್ಧತಿಗಳೊಂದಿಗೆ ಹೊಂದಿಕೊಂಡಿರುವುದು. ಹಾಗಾಗಿಯೇ ಇಂದಿಗೂ ಅನೇಕ ಜನರಿಗೆ ದೇವಾಲಯಗಳು ನೆಮ್ಮದಿ,  ಭರವಸೆ, ಶಾಂತಿ ಮತ್ತು ಮೌಲ್ಯಗಳ ಆಗರ.

ಆದರೆ ಈ ವಿಚಾರ ನಮ್ಮ ಉದ್ಯಮಿಗಳಿಗೆ ನೀಡುವ ತಿಳುವಳಿಕೆ ಇನ್ನೂ ವಿಶೇಷವಾದ್ದದು.  ಗ್ರಾಹಕರು, ನಿಯಮಗಳು ಮತ್ತು ಮಾರುಕಟ್ಟೆಯ ಬದಲಾಗುತ್ತಿರುವ ಅಗತ್ಯಗಳಿಗೆ ಹೊಂದಿಕೊಳ್ಳುವ platformಗಳನ್ನು ರಚಿಸುವಾಗ ನಮ್ಮ ಯುವ ಉದ್ಯಮಿಗಳು ದೇವಸ್ಥಾನಗಳಿಂದ ಕಲಿಯುವುದು ಬಹಳಷ್ಟಿದೆ. 

ಇಂದು ಯಾವುದೇ ಸಂಸ್ಥೆ ಬೆಳೆಯಲು ಹಲವು ಸ್ಥಳಗಳಲ್ಲಿ ವಿಸ್ತಾರಗೊಳ್ಳುವುದು ಅನಿವಾರ್ಯ, ಹಾಗೆಯೇ ಜಗತ್ತಿನ ಎಲ್ಲ ಕಡೆಯಿಂದ ಬೇಕಾದ ಪ್ರತಿಭಾವಂತಾರನ್ನು ಆಕರ್ಷಿಸುವುದು ಅಗತ್ಯ. ಹೀಗೆ ವಿಸ್ತಾರಗೊಂಡಾಗ, ಆ ಜನರಿಗೆ, ಆ ಸ್ಥಳಕ್ಕೆ ಹೊಂದಿಕೊಂಡು ಆ ಸಮಾಜಕ್ಕೆ, ಪರಿಸರಕ್ಕೆ ಉಪಯೋಗವಾಗುವಂತಹ, ಇಷ್ಟವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸುಕೊಳ್ಳುವುದು ಜಾಣತನ. 

ನಮ್ಮ ದೇಗುಲಗಳು ಆ ರೀತಿಯ ಧನಾತ್ಮಕ ಯೋಚನೆಗೆ, ಯೋಜನೆಗೆ ಮೇಲ್ಪಂಕ್ತಿ. ಈ ಹೊಂದಿಕೊಳ್ಳುವ, ವಿಕಾಸನಗೊಳ್ಳುವ ಸಂಸ್ಕೃತಿ ನಮ್ಮ ದೇವಾಲಯಗಳನ್ನು ಮೀರಿ ನಮ್ಮ ಸ್ವಭಾವವನ್ನು ವ್ಯಾಪಿಸಿದೆ, ಈ ಸ್ವಭಾವವೇ ಭಾರತೀಯ ವಾಣಿಜ್ಯೋದ್ಯಮವನ್ನು ಪ್ರವರ್ಧಮಾನಕ್ಕೆ ತರುತ್ತಿದೆ.

ಲೇಖಕರು: ಮ್ಯಾನೇಜಿಂಗ್ ಪಾರ್ಟ್ನರ್, ಕೋ ಕ್ರೀಯೆಟ್ ವೆಂಚರ್ಸ್

Exit mobile version