ಬೆಂಗಳೂರು: ಅಸ್ಸಾಂ ಮೂಲದ ಶಂಕಿತ ಉಗ್ರ (Terrorist arrest) ಅಖ್ತರ್ ಹುಸೇನ್ ಸೇರಿದಂತೆ ನಾಲ್ವರು ಕಳೆದ ಒಂದೂವರೆ ವರ್ಷಗಳಿಂದಲೇ ನಗರದಲ್ಲಿ ನೆಲೆಸಿದ್ದರು. ಇವರು ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇದೀಗ ಒಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ಉಳಿದ ಮೂವರ ವಿಚಾರಣೆ ನಡೆಯುತ್ತಿದೆ.
ಕಳೆದ ಎರಡು ವರ್ಷಗಳಿಂದ ಮತ್ತೊಬ್ಬ ಶಂಕಿತ ಉಗ್ರ ತಾಲೀಬ್ ಹುಸೇನ್ ಬೆಂಗಳೂರಿನಲ್ಲಿಯೇ ಅಡಗಿಕೊಂಡಿದ್ದರೂ ರಾಜ್ಯ ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ. ತಾಲೀಬ್ ಹುಸೇನ್ ಬಂಧನವಾಗುತ್ತಿದ್ದಂತೆ ಐಎಸ್‌ಡಿ ಮತ್ತು ಎಟಿಸಿ ಇಲಾಖೆ ತನಿಖೆ ಕೈಗೊಂಡಿತ್ತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೆಂಗಳೂರಿಗೆ ಆಗಮಿಸಿ ತಾಲೀಬ್ ಹುಸೇನ್‌ನನ್ನು ಬಂಧಿಸಿದ್ದರು. ಬೆಂಗಳೂರು ಪೊಲೀಸರ ಕಣ್ತಪ್ಪಿಸಿ ಈ ಕಾರ್ಯಾಚರಣೆ ನಡೆಸಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ತಾಲೀಬ್ ಹುಸೇನ್ ಬಂಧನದ ವೇಳೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೆಂಗಳೂರು ಪೊಲೀಸರಿಗೆ ಎಫ್‌ಐಆರ್ ಪ್ರತಿಯನ್ನು ನೀಡಿದ್ದರು. ಆದರೆ ಅದು ಉರ್ದು ಭಾಷೆಯಲ್ಲಿ ಇದ್ದ ಕಾರಣದಿಂದ ಸಂಪೂರ್ಣ ಮಾಹಿತಿ ಸಿಗಲಿಲ್ಲ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದರು. ಬಳಿಕ ತಾಲೀಬ್ ಹುಸೇನ್ ನೀಡಿದ ಮಾಹಿತಿ ಆಧರಿಸಿ ಈಗ ಅಖ್ತರ್ ಹುಸೇನ್‌ನನ್ನು ಬಂಧಿಸಲಾಗಿದೆ.
ಶಂಕಿತರು ಬೇರೆ ಬೇರೆ ವೃತ್ತಿ ಮಾಡುತ್ತ ಬೆಂಗಳೂರಿನಲ್ಲಿ ಓಡಾಡುತ್ತಿದ್ದರು. ಇವರ ಉಗ್ರ ಚಟುವಟಿಕೆಗಳು ಏನೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸದ್ಯ ಒಬ್ಬ ಶಂಕಿತ ಉಗ್ರನನ್ನು ಮಾತ್ರ ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ | Terrorist Arrest | ಬೆಂಗಳೂರಲ್ಲಿ ಶಂಕಿತ ಉಗ್ರ ವಶಕ್ಕೆ; ಉತ್ತರ ಭಾರತದಿಂದ ಬಂದು ತಲೆಮರೆಸಿಕೊಂಡಿದ್ದ!