ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ವಿವಾದಿತ ಈದ್ಗಾ ಮೈದಾನ ವಿಚಾರವಾಗಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್ ಹೇಳಿಕೆ ನೀಡಿದ್ದು, ಈದ್ಗಾ ಮೈದಾನ ಬಿಬಿಎಂಪಿಯ ಸ್ವತ್ತು ಅನ್ನುವುದಕ್ಕೆ ಸಾಕ್ಷ್ಯಾಧಾರಗಳಿವೆ ಎಂದಿದ್ದಾರೆ.
ವಕ್ಫ್ ಬೋರ್ಡ್ ಮೈದಾನವನ್ನು ತಮ್ಮ ಸ್ವತ್ತು ಎಂದು ಹೇಳಿಕೊಳ್ಳುತ್ತಿದೆ. ಆದರೆ ಅದನ್ನು ಖಾತ್ರಿಪಡಿಸಲು ಇರುವ ದಾಖಲೆಗಳನ್ನು ಒದಗಿಸಿಲ್ಲ. ಒಂದು ವಾರದೊಳಗೆ ದಾಖಲೆ ಸಮೇತ ಬಿಬಿಎಂಪಿಗೆ ಮಾಹಿತಿ ಸಲ್ಲಿಸಬೇಕು. ಈ ವಿಚಾರವಾಗಿ 3 ದಿನಗಳ ಹಿಂದಷ್ಟೇ ನೋಟೀಸ್ ನೀಡಲಾಗಿದೆ. ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರು ನೋಟೀಸ್ ನೀಡಿದ್ದಾರೆ. ನೋಟೀಸ್‌ನ ಸೂಚನೆಯಂತೆ ವಕ್ಫ್ ಬೋರ್ಡ್‌ಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ ಎಂದಿದ್ದಾರೆ.
ಆದರೆ ಬಿಬಿಎಂಪಿಗೆ ದಾಖಲೆ ನೀಡುವುದಿಲ್ಲ, ಅಥವಾ ಯಾಕೆ ನೀಡಬೇಕು ಎಂಬ ಪ್ರಶ್ನೆಯನ್ನು ವಕ್ಫ್ ಬೋರ್ಡ್ ಎತ್ತಿದೆ. ಈ ರೀತಿ ಪ್ರಶ್ನೆ ಮಾಡುವುದು ಸೂಕ್ತವಲ್ಲ, ಈ ಸಂದರ್ಭದಲ್ಲಿ ಆ ರೀತಿ ಮಾಡಲೂಬಾರದು. ಎಲ್ಲೇ ಐಟಿ ದಾಳಿ ನಡೆಸಿದಾಗಲೂ ಐಟಿ ಅಧಿಕಾರಿಗಳು ದಾಖಲೆ ಕೇಳುತ್ತಾರೆ. ಆಗ ನನ್ನ ಖಾಸಗಿ ದಾಖಲೆಯನ್ನು ನಿಮಗ್ಯಾಕೆ ನೀಡಬೇಕು ಅಂತ ಪ್ರಶ್ನೆ ಮಾಡಲಾಗುತ್ತ್ತಾತದೆಯೇ? ಪ್ರಶ್ನೆ ಮಾಡಿದರೆ ಐಟಿ ಅಧಿಕಾರಿಗಳು ಸುಮ್ಮನಿರುತ್ತಾರಾ? ಮೈದಾನ ನಮ್ಮ ಸ್ವತ್ತು ಅನ್ನುವುದಕ್ಕೆ ನಮ್ಮ ಬಳಿ ದಾಖಲೆ ಇದೆ. ಆ ಕಾರಣದಿಂದಲೇ ಅವರಿಗೂ ನೋಟೀಸ್ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಈದ್ಗಾ ಮೈದಾನ ವಿವಾದ: ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೋರಿ ಬಿಬಿಎಂಪಿಗೆ ಪತ್ರ