ಬೆಂಗಳೂರು: ಇವರಿಗೆ ಪೊಲೀಸರೆಂದರೆ ಭಯವೇ ಇಲ್ಲ. ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ಕಳ್ಳತನ ಮಾಡುವುದರಲ್ಲಿ ಇವರು ನಿಸ್ಸೀಮರಾಗಿದ್ದರು! (Crime ) ಆದರೆ ಕೊನೆಗೂ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನಲ್ಲಿ ನಾಲ್ಕು ಸಲ ಕಳ್ಳತನ ಮಾಡಿ, ಪೊಲೀಸರಿಂದ ಏನೂ ಮಾಡಲು ಸಾಧ್ಯವಾಗದು ಎಂಬ ಭಂಡತನ ತೋರಿದ್ದವರು ಈಗ ಕಂಬಿ ಎಣಿಸುತ್ತಿದ್ದಾರೆ. ಐದನೇ ಬಾರಿಯ ಕೃತ್ಯ ಆರೋಪಿಗಳನ್ನು ಜೈಲಿಗಟ್ಟುವಂತೆ ಮಾಡಿದೆ.
ಈ ಖದೀಮರ ತಂಡ ಊರಿನಿಂದ ಬಂದು ಕೃತ್ಯ ಎಸಗಿ ಮತ್ತೆ ಪರಾರಿಯಾಗುತ್ತಿತ್ತು. ತಂಡದಲ್ಲಿ ಒಬ್ಬ ಖಾಸಗಿ ಆಹಾರ ವಿತರಕ ಕಂಪನಿಯ ಡೆಲಿವರಿ ಸಿಬ್ಬಂದಿ ಆಗಿದ್ದರೆ, ಮತ್ತೊಬ್ಬ ವಿದ್ಯಾರ್ಥಿಯಾಗಿದ್ದ. ಈ ಗ್ಯಾಂಗ್‌ನಲ್ಲಿದ್ದ ಸುರೇಶ್ ಹಾಗು ಹರೀಶ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರೂ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದರು. ಸರಗಳ್ಳತನ ಮಾಡಿ ಬೇರೆ ಊರಿಗೆ ವಿದ್ಯಾರ್ಥಿ ಹರೀಶ್ ಪರಾರಿಯಾಗುತ್ತಿದ್ದ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪಕ್ಕದಲ್ಲೇ ಆರೋಪಿಗಳು ಸರಗಳ್ಳತನ ಮಾಡುತ್ತಿದ್ದರು. ಗಿರಿನಗರ ,ಚೆನ್ನಮ್ಮನಕೆರೆ ಅಚ್ಚುಕಟ್ಟು ,ನಾಗೇಂದ್ರ ಬ್ಲಾಕ್ ಸೇರಿ ಐದು ಕಡೆ ಕಳ್ಳತನ ಮಾಡಿದ್ದರು.
ಹರೀಶ್ ಹಾಗು ಸುರೇಶ್ ಇಬ್ಬರೂ ಕುಷ್ಟಗಿ ಮೂಲದವರು. ಸರಗಳ್ಳತನ ಮಾಡಿದ ಬಳಿಕ ಹರೀಶ್, ಕೊಪ್ಪಳಕ್ಕೆ ಪರಾರಿಯಾಗುತ್ತಿದ್ದ. ಸುರೇಶ್ ಬೆಂಗಳೂರಿನಲ್ಲೇ ಇದ್ದು, ಡೆಲಿವರಿ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಗಳು ಸರಗಳ್ಳತನ ಮಾಡಿದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದರು. ಸಿಸಿಟಿವಿ ಹಾಗು ಕೆಲವು ತಂತ್ರಜ್ಞಾನಗಳ ಆಧಾರದಲ್ಲಿ ಆರೋಪಿಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.