ಬೆಂಗಳೂರು: ಕ್ರೈಂಗಳು ಹೆಚ್ಚುತ್ತಿರುವ ಬೆನ್ನಲ್ಲೆ ಕಾರ್ಯಾಚರಣೆಗಿಳಿದಿದ್ದ ಬೆಂಗಳೂರು ನಗರ ಪೊಲೀಸರು ಖರ್ತನಾಕ್ ಕಳ್ಳರ ಹೆಡೆಮುರಿ ಕಟ್ಟಿ ಜೈಲಿಗೆ ಕಳಿಸಿದ್ದಾರೆ. ಕುಮಾರಸ್ವಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಜಿ ಕಳ್ಳರನ್ನು (Theft Case) ಬಂಧಿಸಿದ್ದಾರೆ. ಬೆಳಗ್ಗೆ ಎದ್ದು ನಾವೆಲ್ಲಾ ಕೆಲಸಕ್ಕೆ ಹೋದಂತೆ ಇವರು ಪಿಜಿಗಳಲ್ಲಿ ಕಳ್ಳತನ ಮಾಡಲು ಹೊರಡುತ್ತಿದ್ದರು. ಪಿಜಿಗಳಲ್ಲಿ ಕದಿಯಲು ಸಾಧ್ಯವಾಗದೆ ಇದ್ದರೆ ಬ್ಯಾಚುಲರ್ ರೂಂಗಳನ್ನು ಹುಡುಕುತ್ತಿದ್ದರು. ಬ್ಯಾಚುಲರ್ಸ್ ಪಾಟ್ ಅಥವಾ ಮ್ಯಾಟ್ ಕೆಳಗೆ ಇಡುತ್ತಿದ್ದ ಕೀಗಳನ್ನು ಗಮನಿಸಿ ಆ ರೂಂಗೆ ಕನ್ನ ಹಾಕುತ್ತಿದ್ದರು. ಹೀಗೆ ಲ್ಯಾಪ್ ಟ್ಯಾಪ್, ಮೊಬೈಲ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಒಟ್ಟು 23 ಲಕ್ಷ ಮೌಲ್ಯದ 28 ಮೊಬೈಲ್‌ಗಳು, 34 ಲ್ಯಾಪ್ ಟ್ಯಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ ಗ್ಲಾಸ್ ಒಡೆದು ಲ್ಯಾಪ್ ಟಾಪ್ ಕದಿಯುತ್ತಿದ್ದ ಅಣ್ಣ-ತಮ್ಮ
ಇದೂ ಕೂಡ ಲ್ಯಾಪ್ ಟ್ಯಾಪ್ ಕಳ್ಳತನದ ಕೇಸ್‌ಗಳೇ . ಆದರೆ ಇವರು ಸ್ಥಳೀಯರಲ್ಲ . ಸ್ಕೂಟಿ ಮೂಲಕ ತಮಿಳುನಾಡಿನ ಸೇಲಂನಿಂದ ಬರುತ್ತಿದ್ದ ಅಣ್ಣ-ತಮ್ಮ ಲ್ಯಾಪ್ ಟ್ಯಾಪ್ ಕಳ್ಳತನ ಮಾಡಿ ನಂತರ ಅದೇ ಸ್ಕೂಟಿಯಲ್ಲಿ ಎಸ್ಕೇಪ್ ಆಗುತ್ತಿದ್ದರು. ತಮಿಳುನಾಡಿನಲ್ಲಿ ಅರ್ಧ ಬೆಲೆಗೆ ಲ್ಯಾಪ್ ಟಾಪ್ ಮಾರಾಟ ಮಾಡುತ್ತಿದ್ದರು. ಗಂಗಯ್ಯ ಹಾಗು ಸದಾನಾಯ್ಡು ಎಂಬ ಒಡಹುಟ್ಟಿದವರೇ ಕಳ್ಳರು.
ಹಿಂದೊಮ್ಮೆ ಈ ಸಹೋದರರು ಗ್ಯಾಂಗ್ ಕಟ್ಟಿಕೊಂಡು ಲ್ಯಾಪ್ ಟ್ಯಾಪ್ ಕದಿಯುತ್ತಿದ್ದರು. ಒಂದು ಬಾರಿ ಬಂಧನವಾದ ಬಳಿಕ ಆ ಗ್ಯಾಂಗ್ ಸಹವಾಸ ಬಿಟ್ಟು ಹೊರ ಬಂದು ಇಬ್ಬರೇ ಕಳ್ಳತನ ಮಾಡುತ್ತಿದ್ದರು. ಸದ್ಯ ಖಚಿತ ಮಾಹಿತಿ ಮೇರೆಗೆ ಸದಾನಾಯ್ಡುವನ್ನ ತಮಿಳುನಾಡಿನಲ್ಲಿ ಬಂಧನ ಮಾಡಲಾಗಿದ್ದು, ಗಂಗಯ್ಯನಿಗಾಗಿ ಹುಡುಕಾಟ ಮುಂದುವರೆದಿದೆ.
ಚಿನ್ನ ಪಾಲಿಶ್ ನೆಪದಲ್ಲಿ ಕನ್ನ
ಹಲಸೂರು ಗೇಟ್ ಪೊಲೀಸರು ಅಂಕುರ್ ಕುಮಾರ್ ಡುಂಗರ್ ವಾಲ ಎಂಬ ಆರೋಪಿಯನ್ನು ಬಂಧನ ಮಾಡಿದ್ದಾರೆ. ಈತ ಮೂಲತಃ ರಾಜಸ್ಥಾನ ನಿವಾಸಿಯಾಗಿದ್ದು, ಚಿನ್ನದ ಪಾಲಿಶ್ ಕೆಲಸ ಮಾಡುತ್ತಿದ್ದ. ಹಲಸೂರ ಗೇಟ್ ನಿವಾಸಿಯಾಗಿರುವ ಅಂಕುರ್ ಅಲ್ಲಿಯೇ ಇದ್ದ ಜ್ಯೂವೆಲರಿ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಹಣದಾಸೆಗೆ ಬಿದ್ದವನು ಚಿನ್ನದ ಗಟ್ಟಿ ಕಳ್ಳತನ ಮಾಡಲು ಮುಂದಾಗಿದ್ದ. ಈ ಹಿನ್ನೆಲೆಯಲ್ಲಿ ಚಿನ್ನದ ಅಂಗಡಿಗಳಿಗೆ ಹೋಗಿ ಚಿನ್ನವನ್ನು ಪಾಲೀಶ್ ಮಾಡಿಕೊಡುವುದಾಗಿ ಚಿನ್ನದ ಗಟ್ಟಿ ಪಡೆದು ಎಸ್ಕೇಪ್ ಆಗಿದ್ದ. ನಗರ್ತ ಪೇಟೆಯ ಚಿನ್ನದ ವ್ಯಾಪಾರಿ ನೀಡಿದ ದೂರಿನ ಅನ್ವಯವಾಗಿ ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ 10 ಲಕ್ಷ ಮೌಲ್ಯದ 387 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಕುಮಾರಸ್ವಾಮಿ , ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ