Site icon Vistara News

Theft case : ಆನ್‌ಲೈನ್‌ ಬೆಟ್ಟಿಂಗ್‌ ಗೀಳು; ಅಣ್ಣನ ಮದುವೆಗೆ ತಂದಿದ್ದ ಚಿನ್ನ ಕದ್ದು ಸಿಕ್ಕಿಬಿದ್ದ ತಮ್ಮ!

theft case

ಬೆಂಗಳೂರು: ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಚಿನ್ನ ಕದ್ದ (Theft case) ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆದಿತ್ಯ ಎಂಬಾತನಿಂದ 100 ಗ್ರಾಂ ಬೆಳ್ಳಿ, 102 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆದಿತ್ಯ ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಜೂಜಾಡಿ ಹಣ ಸೋತಿದ್ದ. ಸಾಲ ತೀರಿಸಲಿಕ್ಕೆ ತನ್ನ ಮನೆಯಲ್ಲೇ ಕಳವು ಮಾಡಿದ್ದ. ಆದಿತ್ಯಾ ಕುಟುಂಬಸ್ಥರು ಮೊದಲ ಮಗನ ಮದುವೆಗೆ ಚಿನ್ನ ಖರೀದಿಸಿ ಇಟ್ಟಿದ್ದರು. ಸಾಲಗಾರರ ಕಾಟಕ್ಕೆ ಬೇಸತ್ತ ಆದಿತ್ಯಾ ಅಣ್ಣನಿಗೆ ಖರೀದಿಸಿದ್ದ ಚಿನ್ನವನ್ನು ಕದ್ದು ಮಳ್ಳನಂತೆ ಸುಮ್ಮನೆ ಇದ್ದ. ಬಳಿಕ ಆದಿತ್ಯಾ ತಾಯಿ ಚಿನ್ನ ಕಳ್ಳತನ ಸಂಬಂಧ ದೂರು ನೀಡಿದ್ದರು. ಪೊಲೀಸರ ವಿಚಾರಣೆ ವೇಳೆ ಮಗನೇ ಮನೆಗಳವು ಮಾಡಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ಖದೀಮರು

ಬೆಂಗಳೂರಿನ ಹನುಂತನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ರವಿ, ಅರುಣ್, ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರ ಬಂಧನದಿಂದ 4 ಪ್ರಕರಣ ಬೆಳಕಿಗೆ ಬಂದಿದೆ. ಬೈಕ್‌ನಲ್ಲಿ ಲೈಟ್ ಆಫ್ ಆಗಿರುವ ಮನೆಗಳ ರೆಕ್ಕಿ ಮಾಡುತ್ತಿದ್ದರು. ಬಳಿಕ ಕಾಲಿಂಗ್ ಬೆಲ್ ಒತ್ತುತ್ತಿದ್ದರು. ಡೋರ್ ಓಪನ್ ಮಾಡದೇ ಇದ್ದಾಗ, ಬಾಗಿಲು ಒಡೆಯುತ್ತಿದ್ದರು. ಮನೆಯಲ್ಲಿದ್ದ ಚಿನ್ನಾಭರಣ ಲೂಟಿ ಮಾಡಿ ಎಸ್ಕೇಪ್ ಆಗುತ್ತಿದ್ದರು. ಸಿಸಿಟಿವಿ ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 480 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ಒಂಟಿ ಮನೆ ಟಾರ್ಗೆಟ್‌

ಬ್ಯಾಡರಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳವು ಮಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸಿದ್ದಾರೆ. 20 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ರಿಯಾನ್ @ ನಾಗರಾಜ್ ಬಂಧಿತ ಆರೋಪಿ ಆಗಿದ್ದಾನೆ. ಬಂಧಿತನಿಂದ 09 ಮನೆಗಳವು ಪ್ರಕರಣ ಬೆಳಕಿಗೆ ಬಂದಿದೆ. ಸಿದ್ದಾಪುರ ನಿವಾಸಿ ಆಗಿರುವ ಆರೋಪಿ ರಿಯಾನ್ ಟಿವಿ ಡಿಶ್ ರಿಪೇರಿ ಮಾಡುವ ನೆಪದಲ್ಲಿ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ.

ವೈಟ್ ಫೀಲ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳಿಯನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಪಿಂಕಿದೇವಿ ಬಂಧಿತ ಆರೋಪಿಯಾಗಿದ್ದಾಳೆ. ಬಂಧಿತಳಿಂದ 54 ಲಕ್ಷ ಮೌಲ್ಯದ 570 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಸಾಫ್ಟ್ ವೇರ್ ಉದ್ಯೋಗಿ ಮನೆಯಲ್ಲಿ ಕೆಲಸಕ್ಕಿದ್ದ ಪಿಂಕಿದೇವಿ ಮನೆಗಳವು ಮಾಡಿದ್ದಳು. ಬಳಿಕ ಬಿಹಾರಕ್ಕೆ ತೆರಳಿದ್ದ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.

ಇದನ್ನೂ ಓದಿ: Physical Abuse : ಅತ್ಯಾಚಾರ ಎಸಗಿದ ಕಾಮುಕನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ!

ಒರಿಸ್ಸಾದಿಂದ ಮಂಗಳೂರಿಗೆ ಗಾಂಜಾ ಸಾಗಾಟ

ಮಂಗಳೂರು: ಒರಿಸ್ಸಾದಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಒರಿಸ್ಸಾದ ಗಜಪತಿ ಜಿಲ್ಲೆಯ ಬುಲುಬಿರೊ (24), ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ದಿಲ್ ದಾರ್ ಆಲಿ (28) ಬಂಧಿತ ಆರೋಪಿ ಆಗಿದ್ದಾರೆ.

ಬಂಧಿತರಿಂದ 2.6 ಲಕ್ಷ ಮೌಲ್ಯದ 8.65 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಒರಿಸ್ಸಾದಿಂದ ರೈಲಿನಲ್ಲಿ ಬೆಂಗಳೂರಿಗೆ ಅಲ್ಲಿಂದ ಬಸ್‌ನಲ್ಲಿ ಮಂಗಳೂರು, ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು. ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಅಡಿಕೆ ತೂಕದಲ್ಲಿ ಮೋಸ ಹಾಕಿದವನಿಗೆ 20 ಲಕ್ಷ ರೂ. ದಂಡ ಹಾಕಿದ ಗ್ರಾಮಸ್ಥರು

ಶಿವಮೊಗ್ಗದಲ್ಲಿ ರಾಶಿ ಅಡಿಕೆ ತೂಕದಲ್ಲಿ ಮೋಸ ಮಾಡಿದ ವ್ಯಾಪಾರಿಗೆ ಗ್ರಾಮಸ್ಥರು 20 ಲಕ್ಷ ರೂ. ದಂಡ ಹಾಕಿದ್ದಾರೆ. ರೈತರಿಂದ ಅಡಿಕೆ ಖರೀದಿಸುವಾಗ ‌ಪ್ರತಿ ಕ್ವಿಂಟಾಲ್‌ಗೆ 3 ಕೆ.ಜಿ ಅಡಿಕೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ರೈತರಿಗೆ ವಂಚಿಸುತ್ತಿದ್ದ ವ್ಯಾಪಾರಿಗೆ ತಕ್ಕ ಪಾಠ ಕಲಿಸಿದ ಭದ್ರಾವತಿ ತಾಲೂಕಿನ ಅರಹತೊಳಲಿ ಗ್ರಾಮಸ್ಥರು, ಸಮಿತಿಯಿಂದ ಬರೋಬ್ಬರಿ 20 ಲಕ್ಷ ರೂ. ದಂಡ ಹಾಕಿದ್ದಾರೆ. ರೈತರ ಮನೆ ಬಾಗಿಲಲ್ಲಿ ರಾಶಿ ಅಡಿಕೆ ತೂಕದಲ್ಲಿ ವರ್ತಕನಿಂದ ಮೋಸ ನಡೆದಿದೆ. ಅಡಿಕೆ ವರ್ತಕ ತಟ್ಟೆಹಳ್ಳಿ ದಿಲೀಪ ಎಂಬಾತನಿಂದ ಮೋಸವಾಗಿದೆ.
ಗಣಕೀಕೃತ ತಕ್ಕಡಿಯಲ್ಲಿ ಬೆಳೆಗಾರರಿಗೆ ಗಮನಕ್ಕೆ ಬಾರದಂತೆ ಒಂದು ಕ್ವಿಂಟಾಲ್‌ಗೆ 3 ಕೆ.ಜಿ ಮೋಸಮಾಡಿದ್ದು, ಗ್ರಾಮದ ದೇವಾಲಯಕ್ಕೆ 20 ಲಕ್ಷರೂ. ದಂಡ ಕಟ್ಟಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಘಟನೆ ನಡೆದಿದೆ.

ಸೈರನ್ ಒಡೆದು ಎಟಿಎಂ‌ನಲ್ಲಿ ಲಾಕ್‌ಆದ ವ್ಯಕ್ತಿ

ಉತ್ತರಕನ್ನಡ ಜಿಲ್ಲೆಯ ಕಾರವಾರದ ಅಂಬೇಡ್ಕರ್ ವೃತ್ತದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂ‌ಗೆ ಬೆಳಗಿನ ಜಾವ 3 ಗಂಟೆಗೆ ನುಗ್ಗಿದ ವ್ಯಕ್ತಿಯೊಬ್ಬ ಸೈರನ್‌ ಒಡೆದು ಹಾಕಿದ್ದ. ಈ ವೇಳೆ ಎಟಿಎಂ ಬಾಗಿಲು ಆಟೋಮೆಟಿಕ್ ಆಗಿ ಲಾಕ್ ಆಗಿತ್ತು. 5 ಗಂಟೆ ವೇಳೆಗೆ ವ್ಯಕ್ತಿ ಲಾಕ್ ಆಗಿದ್ದನ್ನ ಗಮನಿಸಿದ ಸಮೀಪದ ಎಸ್‌ಬಿಐ ಎಟಿಎಂನ ಸೆಕ್ಯುರಿಟಿ ಗಾರ್ಡ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಮಾನಸಿಕ ಅಸ್ವಸ್ಥನಂತೆ ಇರುವ ಹಾಸನ ಮೂಲದ ವ್ಯಕ್ತಿಯಿಂದ ಎಟಿಎಂ ಯಂತ್ರಕ್ಕೆ ಯಾವುದೇ ಹಾನಿಯಾಗಿಲ್ಲ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version