ಬೆಂಗಳೂರು: ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡು ಬಂದು ಕ್ಷಣಾರ್ಧದಲ್ಲಿ ಬೀಗ ಹೊಡೆದು ಸಿಕ್ಕ ಸಿಕ್ಕ ವಸ್ತುಗಳನ್ನ ಕದ್ದು ಮನೆಗಳವು (Theft Case ) ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದ ಬೆಂಗಳೂರಿನ ಕುಖ್ಯಾತ ಮನೆಗಳ್ಳ ಜಂಗ್ಲಿ ಆ್ಯಂಡ್ ಗ್ಯಾಂಗ್ ಅರೆಸ್ಟ್ ಆಗಿದೆ. ಬೆಂಗಳೂರಿನ ಆರ್.ಆರ್. ನಗರ ಪೊಲೀಸರು ಜೈದೀಪು ಅಲಿಯಾಸ್ ಜಂಗ್ಲಿ, ಚಂದನ್ @ ಗುಂಡ, ಸತೀಶ್ @ಬುಡ್ಡ, ದೀಪಕ್ @ದೀಪು ಮತ್ತು ಮಿಥುನ್ @ ಮಿಲ್ಕಿ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 10.18 ಲಕ್ಷ ರೂ. ಮೌಲ್ಯದ 103 ಗ್ರಾಂ ಚಿನ್ನ, 2 ಕೆ.ಜಿ.ಗೂ ಅಧಿಕ ಬೆಳ್ಳಿ, ಮೂರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಗಳವು ಮಾಡಲಿಕ್ಕೆಂದೆ ಬೈಕ್ ಕಳ್ಳತನ ಮಾಡುತ್ತಿದ್ದರು. ಕದ್ದ ಬೈಕ್‌ಗಳಲ್ಲಿ ರೌಂಡ್ಸ್ ಹಾಕಿ ಒಂಟಿ ಮನೆಗಳನ್ನು ಗುರುತಿಸಿ ಕೈಚಳಕ ತೋರಿಸುತ್ತಿದ್ದರು. ಅದರಂತೆ ಕಳೆದ ಸೆಪ್ಟೆಂಬರ್ 17ರಂದು ಆರ್.ಆರ್.ನಗರದ ಗಟ್ಟಿಗೇರೆ ನಿವಾಸದಲ್ಲಿ ಚಂದ್ರಶೇಖರ ಎಂಬುವರ ಮನೆಗೆ ಕನ್ನಹಾಕಿದ್ದರು. ಆರೋಪಿಗಳ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬೆಂಗಳೂರಿನ ಕುಖ್ಯಾತ ಕಳ್ಳ ಎಸ್ಕೇಪ್ ಕಾರ್ತಿಕ್‌ನ ಶಿಷ್ಯನೇ ಈ ಜೈದೀಪು. ಇದೀಗ ಈ ಜಂಗ್ಲಿ ಗ್ಯಾಂಗ್ ಅರೆಸ್ಟ್ ಆಗಿದೆ.
ಚಿನ್ನು ಕದ್ದು ಸ್ನೇಹಿತರಿಗೆ ಮಾರಾಟ
ಚಿನ್ನಾಭರಣ ಕದ್ದು ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದ ಕಳ್ಳರ ಬಂಧನವಾಗಿದೆ. ವಿಲ್ಲಾಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರು ಹಿಂದಿನ ಬಾಗಿಲಿನಿಂದ ಎಂಟ್ರಿ ಕೊಟ್ಟು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ರಾಮ್ ಕುಮಾರ್(23), ಇಸೈರಾಜ್ (27) ಬಂಧಿತ ಆರೋಪಿಗಳು. ಎಲ್ಲಾ ಮನೆಯಲ್ಲಿ ಮಲಗಿರುವ ಸಮಯದಲ್ಲೇ ಖದೀಮರು ಕನ್ನ ಹಾಕುತ್ತಿದ್ದರು. ಬೆಂಗಳೂರಿನ ಬಾಗಲೂರು ವ್ಯಾಪ್ತಿಯ ಕಣ್ಣೂರುಹಳ್ಳಿಯ ವಿಲ್ಲಾದಲ್ಲಿ ಕಳ್ಳರು ಕೈಚಳಕ ತೋರಿದ್ದರು.
ವಿಲ್ಲಾ ಮಾಲೀಕ ರಮೇಶ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದ ಬಾಗಲೂರು ಪೊಲೀಸರು, ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇಬ್ಬರು ಆರೋಪಿಗಳ 252 ಗ್ರಾಂ ಚಿನ್ನಾಭರಣ ಕದ್ದು ಒಂದು ತಿಂಗಳ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಸಿಸಿಟಿವಿ, ಟವರ್ ಲೊಕೇಶನ್ ಟ್ರ್ಯಾಕ್ ಮಾಡಿ ಬಂಧಿಸಲಾಗಿದೆ. ಬಂಧನದ ಬಳಿಕ ಈ ಹಿಂದೆ ಕಳ್ಳತನ ಮಾಡಿದ್ದ ಮತ್ತೊಂದು ಪ್ರಕರಣವು ಬೆಳಕಿಗೆ ಬಂದಿದೆ. ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ಮಾಡಿದ್ದರು. ಬಂಧಿತರಿಂದ ಒಟ್ಟು 30 ಲಕ್ಷ ಮೌಲ್ಯದ 437 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಉಂಡ ಮನೆಗೆ ಕನ್ನ ಹಾಕಿದ್ದ ಖದೀಮ ಬಂಧನ
ಬೆಂಗಳೂರಿನಲ್ಲಿ ಉಂಡ ಮನೆಗೆ ಕನ್ನ ಹಾಕಿದ್ದ ಖತರ್ನಾಕ್ ಖದೀಮನ ಬಂಧನವಾಗಿದೆ. ಸಿದ್ದಾಪುರ ಪೊಲೀಸರಿಂದ ಚಿಕ್ಕಬಳ್ಳಾಪುರ ಮೂಲದ ನಾರಾಯಣಸ್ವಾಮಿ (33) ಎಂಬ ಆರೋಪಿ ಬಂಧನವಾಗಿದೆ. ಸಿದ್ದಾಪುರ ಠಾಣಾ ವ್ಯಾಪ್ತಿಯ ಯರ್ರಿಸ್ವಾಮಿ ಎಂಬ ಚಾಟೆಡ್ ಅಕೌಂಟ್ ಕಚೇರಿ ಹಣ ಕಳವು ಮಾಡಿದ್ದ. ಯರ್ರಿಸ್ವಾಮಿ ಬಳಿ ಕಾರ್ ಡ್ರೈವರ್ ಕಮ್ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ. ಅದೇ ಕಚೇರಿಯಲ್ಲಿ ನಾರಾಯಣಸ್ವಾಮಿ ಹೆಂಡತಿ ಸಹ ಕೆಲಸ ಮಾಡುತ್ತಿದ್ದಳು. ಯರ್ರಿಸ್ವಾಮಿ ಹಣ ಇಟ್ಟಿದ್ದ ಬಗ್ಗೆ ತಿಳಿದು ಸುಮಾರು 10.95 ಲಕ್ಷ ಹಣ ಎಗರಿಸಿದ್ದ. ಹಣ ಕದ್ದು ಕಾರ್ ಖರೀದಿ ಮಾಡಿ ಟ್ರಿಪ್ ಹೊಡೆಯುತ್ತಿದ್ದ.
ಕದ್ದ ಹಣದಲ್ಲಿ ವಿವೊ ಮೊಬೈಲ್ , ಚಿನ್ನದ ಸರ ಹಾಗೂ ಬ್ರಾಸ್ಲೆಟ್ , ಫಾಸ್ಟ್ರಾಕ್ ವಾಚ್ ಹಾಗೂ ಕಾರು ಖರೀದಿ ಮಾಡಿದ್ದ. ಕದ್ದ ಹಣದಲ್ಲೇ ಒಳ ಉಡುಪಿನಿಂದ ಹಿಡಿದು ಅಡಿಯಿಂದ ಮುಡಿವರೆಗೂ ಎಲ್ಲವನ್ನೂ ಖರೀದಿ ಮಾಡಿದ್ದ. ಈ ಕುರಿತು ಯರ್ರಿಸ್ವಾಮಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಿಸಿಟಿವಿ ಪರಿಶೀಲನೆ ವೇಳೆ ನಾರಾಯಣಸ್ವಾಮಿ ಡಸ್ಟ್ ಬಿನ್ ಕವರ್‌ನಲ್ಲಿ ಹಣ ಕದ್ದು ಹೋಗುವುದು ಗೊತ್ತಾಗಿತ್ತು. ಪ್ರಕರಣ ದಾಖಲಿಸಿ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ಮಾಲೀಕ ಕೊಟ್ಟ ಮಾಹಿತಿ ಮೇರೆಗೆ ಆರೋಪಿ ಬಂಧನವಾಗಿದೆ. ಬಂಧಿತನಿಂದ ಚೈನ್ , ಬ್ರಾಸ್ಲೆಟ್ , ವಿವೊ ಮೊಬೈಲ್ , ಕಾರು, ಫಾಸ್ಟ್ರಾಕ್ ವಾಚ್ ಹಾಗೂ 3.5 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ