ರಮೇಶ ದೊಡ್ಡಪುರ, ಬೆಂಗಳೂರು
ಕರ್ನಾಟಕದ ಮಟ್ಟಿಗೆ, ಅದರಲ್ಲೂ ಬಲಪಂಥೀಯ ಎಂದು ಕರೆಯಲಾಗುವ ಜಗತ್ತಿನ ದೃಷ್ಟಿಕೋನದಲ್ಲಿ ಟಿಪ್ಪುವಿನ ನಿಜಕನಸುಗಳು ಅತ್ಯಂತ ಪ್ರಮುಖ ಕೃತಿ. ಏಕೆಂದರೆ ಇದರ ರಚನೆಕಾರ ಅಡ್ಡಂಡ ಕಾರ್ಯಪ್ಪ (ಮೈಸೂರು ರಂಗಾಯಣ ನಿರ್ದೇಶಕ) ಅವರೇ ಹೇಳಿಕೊಂಡಿರುವಂತೆ ಈ ಕೃತಿಯನ್ನು ಗಿರೀಶ್ ಕಾರ್ನಾಡರ ʼಟಿಪ್ಪುವಿನ ಕನಸುಗಳುʼ ನಾಟಕಕ್ಕೆ ಬರೆದ ಪ್ರತ್ಯುತ್ತರ. ಬೆಂಗಳೂರಿನ ʼಅಯೋಧ್ಯಾ ಪ್ರಕಾಶನʼ ಈ ಪುಸ್ತಕವನ್ನು ಪ್ರಕಟಿಸಿದೆ.
ಎಡ ವಲಯದಲ್ಲಿ ಬರಹದ ಮೂಲಕ ಎತ್ತಿದ ಪ್ರಶ್ನೆಗಳಿಗೆ ಬಲಪಂಥದಿಂದ ಅನೇಕ ಸಂದರ್ಭಗಳಲ್ಲಿ ಪ್ರತಿಭಟನೆ, ಟೀಕೆ, ಪೊಲೀಸ್ ದೂರು, ನಿಷೇಧಿಸಲು ಸರ್ಕಾರದ ಮೇಲೆ ಒತ್ತಾಯ, ಮಸಿ ಬಳಿಯುವುದು ಮಾತ್ರ ಪ್ರಮುಖ ಅಭಿವ್ಯಕ್ತಿಯಾಗಿದೆ ಎಂಬ ಸಾಮಾನ್ಯ ಅಭಿಪ್ರಾಯಕ್ಕೆ ಇದು ವ್ಯತಿರಿಕ್ತವಾಗಿದೆ. (ಈ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅರುಣ್ ಶೌರಿ ಬರೆದ ʼ Worshipping The False Gods’ ಕೃತಿಗೆ ಪ್ರತ್ಯುತ್ತರವಾಗಿ ಮಹಾರಾಷ್ಟ್ರದ ಪತ್ರಕರ್ತ ರಮೇಶ್ ಪತಂಗೆಯವರ, ಚಿಕ್ಕದಾದರೂ ಅತ್ಯಂತ ಮೌಲಿಕವಾದ ಪ್ರಕಟಣೆಯೊಂದನ್ನು ಕಂಡಿದ್ದ ಉದಾಹರಣೆಯಿದೆ).
ಈ ಬಾರಿ ಕನ್ನಡದಲ್ಲಿಯೇ ತುಸು ತಡವಾಗಿಯಾದರೂ, ಅಂದರೆ ಕಾರ್ನಾಡ್ ಕೃತಿ ಪ್ರಕಟವಾದ 25 ವರ್ಷದ ನಂತರವಾದರೂ ಕೃತಿಯ ಮೂಲಕವೇ ಉತ್ತರ ನೀಡುವ ಪ್ರಯತ್ನವನ್ನು ಅಡ್ಡಂಡ ಕಾರ್ಯಪ್ಪ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇದೊಂದು ಪ್ರಮುಖ ಕೃತಿ.
ಸುವರ್ಣ ಮಹೋತ್ಸವದಿಂದ ಅಮೃತಮಹೋತ್ಸವದವರೆಗೆ
ಗಿರೀಶ್ ಕಾರ್ನಾಡರು ಭಾರತದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಬಿಬಿಸಿ ರೇಡಿಯೋದವರು ಕೇಳಿದ ಕಾರಣಕ್ಕೆ ಬರೆದ ನಾಟಕ, ʼಟಿಪೂ ಸುಲ್ತಾನ ಕಂಡ ಕನಸುʼ. ಬಿಬಿಸಿಯವರೇನೂ ಟಿಪ್ಪೂ ಬಗ್ಗೆಯೇ ನಾಟಕ ಬರೆದುಕೊಡಬೇಕು ಎಂದು ಹೇಳಿರಲಿಲ್ಲ. “ನಾಟಕದ ವಸ್ತು ಆಂಗ್ಲ-ಭಾರತೀಯ ಸಂಬಂಧವನ್ನು ಕುರಿತಾದದ್ದಾಗಿರಬೇಕು” ಎಂದಾಗ ಕಾರ್ನಾಡರಿಗೆ ಹೊಳೆದದ್ದು ಟಿಪ್ಪೂ. ಇದಾಗಿ ಎರಡು ವರ್ಷದಲ್ಲಿ ಅಂದರೆ 1999ರಲ್ಲಿ ಆಗಿನ ರಂಗಾಯಣ ನಿರ್ದೇಶಕರಾಗಿದ್ದ ಸಿ. ಬಸವಲಿಂಗಯ್ಯನವರು ಇದನ್ನು ನಿರ್ದೇಶಿಸಿ, ನಾಟಕವನ್ನು ಶ್ರೀರಂಗಪಟ್ಟಣದ ದರಿಯಾ ದೌಲತ್ ಎದುರಿಗೆ ಆಡಿಸಿದರು. ಇದೀಗ ಸ್ವಾತಂತ್ರ್ದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಅದೇ ರಂಗಾಯಣದ ನಿರ್ದೇಶಕರೇ ನಾಟಕವನ್ನು ರಚಿಸಿ, ನಿರ್ದೇಶನವನ್ನೂ ಮಾಡಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ.
ಕಾರ್ನಾಡರ ನಾಟಕವೂ ಟಿಪ್ಪುವಿನ ಸಾವಿನ ಸನ್ನಿವೇಶ, ಆತ ಬರೆದಿಡುತ್ತಿದ್ದ ಕನಸುಗಳ ಪತ್ರ, ಅದೇ ಇತಿಹಾಸಕಾರ ಕಾಲಿನ್ ಮೆಕೆಂಜಿ, ದಿವಾನ್ ಪೂರ್ಣಯ್ಯ ಅವರ ಸುತ್ತಲೇ ಸುತ್ತುತ್ತದೆ. ಕಾರ್ಯಪ್ಪ ಅವರ ನಾಟಕವೂ ಬಹುತೇಕ ಇದೇ ಅಂಶಗಳ ಸುತ್ತ ತಿರುಗುತ್ತದೆ. ಒಂದೇ ವ್ಯತ್ಯಾಸ ಎಂದರೆ ಕಾರ್ನಾಡರ ರಚನೆಯ ಬಣ್ಣವನ್ನು ಬದಲಾಯಿಸುವುದು. ಎಲ್ಲೆಲ್ಲಿ ಕಾರ್ನಾಡರು ಟಿಪ್ಪುವನ್ನು ಹೊಗಳಿದ್ದಾರೆಯೋ ಅಂಥದ್ದೇ ಸನ್ನಿವೇಶದಲ್ಲಿ ಟಿಪ್ಪುವನ್ನು ತೆಗಳುವುದು. ಉದಾಹರಣೆಗೆ ಕ್ಯಾಪ್ಟನ್ ಮಾರ್ಕ್ ಮಿಲ್ಸ್ಕ್ ಮಾತನಾಡುತ್ತ “ಟಿಪೂ ಸೈನಿಕರು ಉಳಿದ ಇಂಡಿಯನ್ ಅರಸರ ಸೈನಿಕರ ಹಾಗಲ್ಲ, ಸೋತಿದ್ದೇವೆ ಅಂತ ಗೊತ್ತಾದ ಮೇಲೂ ಹೋರಾಟ ನಿಲ್ಲಿಸಲ್ಲ” ಎನ್ನುತ್ತಾನೆ.
ಕಾರ್ನಾಡರು ಹೇಳಿದ ಇದೊಂದು ಡೈಲಾಗ್‌ಗೆ ಪರ್ಯಾಯವಾಗಿ ಕಾರ್ಯಪ್ಪ ಕನಿಷ್ಟ 5 ಕಡೆ ವ್ಯತಿರಿಕ್ತ ಸನ್ನಿವೇಶ, ಡೈಲಾಗ್ ಬರೆದಿದ್ದಾರೆ.
- ಇಬ್ಬರು ಬ್ರಿಟಿಷ್ ಸೈನಿಕರು ಆಗಮಿಸಿ, “ಸಾಹೇಬರೇ, ಈ ಇಬ್ಬರೂ ಕೋಟೆಯ ದಕ್ಷಿಣ ದ್ವಾರದ ಸಂದಿಯಲ್ಲಿ ಅವಿತು ಕುಳಿತಿದ್ದರುʼ ಎಂದು ಟಿಪ್ಪುವಿನ ಸೈನಿಕರನ್ನು ಕರೆತರುತ್ತಾರೆ. (ಪುಟ 18)
- ಟಿಪ್ಪುವಿನ ಅಂತಿಮ ಸಭೆಯ ಸಂದರ್ಭದಲ್ಲಿ ʼಟಿಪ್ಪುವಿನ ಸೈನಿಕರು ಭಯದಿಂದ ಓಡಿಹೋಗುತ್ತಿರುವʼ ಸನ್ನಿವೇಶವಿದೆ.(ಪುಟ 94)
- ʼನಮ್ಮ ಮುಸ್ಲಿಂ ಸೈನಿಕರು ಕೋಟೆಯ ಒಳಗಡೆಯೇ ಭಯದಿಂದ ಓಡಾಡುತ್ತಿದ್ದಾರೆ ಹುಜೂರ್..” ಎಂದು ಟಿಪ್ಪುವಿಗೆ ಉಮರ್ ಹೇಳುತ್ತಾನೆ.(ಪುಟ 95)
- ಕೀರ್ಮಾನಿ ಮಾತನಾಡುತ್ತ “ಕೋಟೆಯ ಒಳಗಡೆ ಭೀತಿಯಿಂದ ಓಡುತ್ತಿರುವ ನಮ್ಮ ಮುಸ್ಲಿಂ ಸೈನಿಕರು…” ಎಂಬ ಸಂಭಾಷಣೆಯಿದೆ. (ಪುಟ(107)
- ಉರಿಗೌಡ ಹಾಗೂ ನಂಜೇಗೌಡ ಸೇರಿ ಟಿಪ್ಪುವನ್ನು ಕೊಂದ ನಂತರ ನಡೆದ ಬ್ರಿಟಿಷ್-ಮರಾಠ ದಾಳಿಯಲ್ಲಿ ʼಟಿಪ್ಪು ಸೈನಿಕರು ಮಿಡತೆಗಳಂತೆ ಸತ್ತು ಬೀಳುತ್ತಾರೆʼ ಎಂದು ಹೇಳಿದ್ದಾರೆ. (ಪುಟ 115)
ಟಿಪ್ಪುವಿನ ಸೈನಿಕರನ್ನು ಹೇಡಿಗಳು ಎಂದು ಹೇಳುವ ಒಂದೇ ಅವಕಾಶವನ್ನೂ ಕಾರ್ಯಪ್ಪ ಬಿಟ್ಟಿಲ್ಲ.
ಕೃತಿಗಳಲ್ಲಿನ ಕೆಲವು ಸಮಾನ ಅಂಶಗಳು
ಯುದ್ಧವನ್ನು ಗೆಲ್ಲುವುದು ಮಾತ್ರ ಕಷ್ಟವಲ್ಲ, ನಂತರ ರಾಜ್ಯ ನಡೆಸುವುದೂ ಕಷ್ಟ ಎನ್ನುವಂತಹ, ನನ್ನ ಕನಸುಗಳು ಅಪೂರ್ಣವಾಗಿವೆ ಎನ್ನುವಂತಹ ಸಮಾನ ಸಂಭಾಷಣೆಗಳು ಕಾರ್ನಾಡ್ ಹಾಗೂ ಕಾರ್ಯಪ್ಪ ಕೃತಿಗಳಲ್ಲಿವೆ. ಎರಡರಲ್ಲೂ ಬಳಸಿರುವ ಪದಗಳು, ವಾಕ್ಯ ರಚನೆ ಬೇರೆಯಾದರೂ ಅರ್ಥ ಒಂದೇ ರೀತಿ ಧ್ವನಿಸುತ್ತದೆ.
ಸನ್ನಿವೇಶ ಒಂದೇ, ದೃಷ್ಟಿ ಬೇರೆ
ಹೆಣಗಳ ರಾಶಿಯಲ್ಲಿ ಟಿಪ್ಪುವಿನ ದೇಹವು ಸಿಗುತ್ತದೆ. ತಕ್ಷಣವೇ ದೂರದಿಂದ ಅನೇಕ ಹೆಣ್ಣು ದನಿಗಳು ಹಲುಬಲಾರಂಭಿಸಿದ್ದು ಕೇಳುತ್ತದೆ. ಆರ್ತವಾಗಿ ಮೊರೆಯಿಡುತ್ತ ಬಾಯಿ ಬಡಿದುಕೊಳ್ಳುವ ಹೆಂಗಸರ ರೋದನ ದೂರದಿಂದ ತೇಲಿ ಬರುತ್ತದೆ ಎಂದು ಕಾರ್ನಾಡರು ಬರೆಯುತ್ತಾರೆ.
ಇದೇ ಸನ್ನಿವೇಶನವನ್ನು ಕಾರ್ಯಪ್ಪನವರು ಹೇಗೆ ಬರೆದಿದ್ದಾರೆ ನೋಡೋಣ: ಟಿಪ್ಪುವಿನ ದೇಹ ಸಿಕ್ಕಾಗ ರಾಣಿವಾಸದಲ್ಲಿ ಕೋಲಾಹಲ ಎದ್ದಿದೆ. ಮಹಿಳೆಯರ ಕೂಗು, ಆಕ್ರಂದನ ಕೇಳಿ ಬರುತ್ತದೆ. ಅದೇನು ಕೋಲಾಹಲ ಎಂದು ಇತಿಹಾಸಕಾರ ಕೀರ್ಮಾನಿ ಕೇಳುತ್ತಾನೆ. ಅದಕ್ಕೆ ಪೂರ್ಣಯ್ಯ ನೀಡುವ ಉತ್ತರ: “ರಾಣಿ ವಾಸಕ್ಕೂ ಸತ್ಯದ ಅರಿವಾಗಿದೆ. ವಿಜಯದ ಸಂಕೇತವೆಂದು ಎಳೆದು ತಂದ ಮತಾಂತರಗೊಂಡ ಹೆಣ್ಣುಮಕ್ಕಳು, ಮುಖ ಮುಚ್ಚಿಕೊಂಡ ಆ ಸುಂದರಿಯರು ಹೊರಗಿನ ಫಿರಂಗಿ ಶಬ್ದಕ್ಕೆ ಬೆಚ್ಚಿ ಬಿದ್ದು ಕೋಲಾಹಲವೆದ್ದಿದೆ. ಅವರನ್ನು ಸಂತೈಸಲು ಯಾರೂ ಇಲ್ಲ”.
ಟಿಪ್ಪೂ ಮೃತಪಟ್ಟಿದ್ದಕ್ಕೆ ರಾಣಿ ನಿವಾಸದಲ್ಲಿ ಆಕ್ರಂದನ ಇತ್ತು ಎಂದು ಕಾರ್ನಾಡರು ಬರೆದರೆ, ಅದೇ ಸನ್ನಿವೇಶನವನ್ನು ಮತಾಂತರಗೊಂಡ ಹೆಂಗಸರ ಕಡೆಗೆ ಬಹಳ ನಾಜೂಕಿನಿಂದ ತಿರುಗಿಸಿದ್ದಾರೆ ಕಾರ್ಯಪ್ಪ. ಫಿರಂಗಿ ಶಬ್ದಕ್ಕೆ ಬೆಚ್ಚಿದ್ದಾರೆಯೇ ವಿನಃ ಟಿಪ್ಪುವಿನ ಸಾವಿನ ದುಃಖ ಅಲ್ಲ ಎಂಬ ಸಂದೇಶ ನೀಡುತ್ತಾರೆ.
ಕರ್ನಾಟಕದ ಕಾಶ್ಮೀರ್ ಫೈಲ್ಸ್?
ಯಾವ ರೀತಿಯಲ್ಲಿ ನೋಡಿದರೂ ಟಿಪ್ಪು ನಿಜ ಕನಸುಗಳು ನಾಟಕವನ್ನು ಕರ್ನಾಟಕದ ಕಾಶ್ಮೀರ್ ಫೈಲ್ಸ್ ಎಂದು ಹೇಳಲು ಅಡ್ಡಿಯಿಲ್ಲ. ಏಕೆಂದರೆ,
- ಕಾಶ್ಮೀರ ಕಣಿವೆಯಲ್ಲಿ ನಡೆದು ಹೋಗಿದ್ದ ರಕ್ತಸಿಕ್ತ ಇತಿಹಾಸವನ್ನು ತೆರೆದಿಡುವ ಪ್ರಯತ್ನವನ್ನು ಆ ಸಿನಿಮಾ ಮಾಡಿತ್ತು.
- ಕಾಶ್ಮೀರದಂತಹ ಹತ್ಯಾಕಾಂಡವನ್ನು ನಾಗರಿಕ ಸಮಾಜದಲ್ಲಿ ಸಮರ್ಥನೆ ಮಾಡಿಕೊಳ್ಳುವ ಪ್ರಚಾರದ (ಪ್ರೊಪಗಂಡಾ) ಹಿಂದೆ ಕಮ್ಯುನಿಸ್ಟರು, ನಗರ ನಕ್ಸಲರು ಇದ್ದರು ಎನ್ನುವುದನ್ನು ಆ ಸಿನಿಮಾ ಚಿತ್ರಿಸಿತ್ತು.
- ಕಲಾತ್ಮಕತೆ, ಮನರಂಜನೆಯ ಹೊರತಾಗಿ, ಅದಕ್ಕಿಂತಲೂ ಮಿಗಿಲಾಗಿ ʼಸತ್ಯʼವನ್ನು ತಿಳಿಸುವ ಘೋಷಿತ ʼಅಜೆಂಡಾʼವನ್ನು ಕಾಶ್ಮೀರ್ ಫೈಲ್ಸ್ ಹೊಂದಿತ್ತು.
ಹಾಗೆಯೇ ಟಿಪ್ಪುವಿನ ನಿಜ ಕನಸುಗಳು ನಾಟಕವು,
- ಕರ್ನಾಟಕದ ವಿವಿಧ ಭಾಗಗಳಲ್ಲಿ ಟಿಪ್ಪು ನಡೆಸಿದ ಕ್ರೌರ್ಯಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದೆ.
- ಟಿಪ್ಪುವಿನ ನಡೆಗಳನ್ನು ಸಮರ್ಥನೆ ಮಾಡಲು ಹಾಗೂ ನಾಗರಿಕರಲ್ಲಿ ಭ್ರಮೆಗಳನ್ನು ಸೃಷ್ಟಿಸಲು ಸುತ್ತಮುತ್ತ ಇತಿಹಾಸಕಾರರು ಇದ್ದಾರೆ, ಹಿಂದುಗಳು ತನ್ನ ವಿರುದ್ಧ ಭುಗಿಲೇಳದಂತೆ ತಡೆಯಲು ಪೂರ್ಣಯ್ಯ ಸೇರಿ ಕೆಲವರನ್ನು ಆಸ್ಥಾನದಲ್ಲಿ ನೇಮಿಸಿಕೊಂಡಿದ್ದಾನೆ (ಪ್ರೊಪಗಂಡಾ).
- ಟಿಪ್ಪು ನಿಜ ಕನಸುಗಳು ನಾಟಕವೂ ಮನರಂಜನೆ, ಕಲಾತ್ಮಕತೆಗಿಂತಲೂ ಮಿಗಿಲಾಗಿ ʼಸತ್ಯʼವನ್ನು ತಿಳಿಸುವ ಘೋಷಿತ ʼಅಜೆಂಡಾʼವನ್ನು ಹೊಂದಿದೆ.
- ಕಾಶ್ಮೀರ್ ಫೈಲ್ಸ್ಗೆ ದೊರೆತಂತೆಯೇ ಟಿಪ್ಪು ನಿಜ ಕನಸುಗಳು ನಾಟಕದ ಕೃತಿ ಹಾಗೂ ನಾಟಕ ಪ್ರದರ್ಶನಕ್ಕೂ ಅದ್ಭುತ ಜನಸ್ಪಂದನ ಸಿಗುತ್ತಿದೆ. (ನ್ಯಾಯಾಲಯ ತೀರ್ಪಿನ ಹಿನ್ನೆಲೆಯಲ್ಲಿ ಪುಸ್ತಕ ಮಾರಾಟಕ್ಕೆ ಸದ್ಯಕ್ಕೆ ತಡೆಯಿದೆ).
- ಕಾಶ್ಮೀರ್ ಫೈಲ್ಸ್ ಸಿನಿಮಾ ಹೊರತಾಗಿ ಕಥೆಯನ್ನು ಸಾರ್ವಜನಿಕರಿಗೆ ಹೇಳಲು ವಿವೇಕ್ ಅಗ್ನಿಹೋತ್ರಿ ಇದ್ದರೆ ಇಲ್ಲಿ ಅಡ್ಡಂಡ ಕಾರ್ಯಪ್ಪ ಇದ್ದಾರೆ.
- ಸಂಭಾಷಣೆಗಳು ಕೆಲವು ಕಡೆಗಳಲ್ಲಿ ಸುದೀರ್ಘವಾಗಿವೆ. ಕಾಶ್ಮೀರ್ ಫೈಲ್ಸ್ನಲ್ಲಿ ಆಡಿಟೋರಿಯಂನಲ್ಲಿ ಸುದೀರ್ಘವಾಗಿ ಮಾತನಾಡುತ್ತಾನಲ್ಲ ಹಾಗೆ. (ಓದಲು ಸುದೀರ್ಘವಾಗಿದ್ದರೂ ನಾಟಕದಲ್ಲಿ ಅದನ್ನು ಬೋರ್ ಆಗದಂತೆ ನಟರು ಹೇಳುವ ಅವಕಾಶವಿರುತ್ತದೆ).
ಹೀಗೆ ಅನೇಕ ದೃಷ್ಟಿಕೋನದಲ್ಲಿ ಕಾಶ್ಮೀರ್ ಫೈಲ್ಸ್‌ನೊಂದಿಗೆ ಹೋಲಿಕೆ ಮಾಡಬಹುದು. ಟಿಪೂ ಕುರಿತು ಕಾರ್ನಾಡರು ಬರೆದ ನಾಟಕ ಅಜೆಂಡಾವನ್ನು ಹೊಂದಿರಲಿಲ್ಲ ಎಂದಲ್ಲ. ಅದು ಅದಾಗಲೇ ಮುಖ್ಯವಾಹಿನಿಯಲ್ಲಿ ಸ್ಥಾಪಿತವಾದ ದೃಷ್ಟಿಕೋನವನ್ನೇ ಹೊಂದಿತ್ತು. ಟಿಪ್ಪೂ ಕುರಿತು ಇರುವ ಸದಭಿಪ್ರಾಯವನ್ನು ಮತ್ತಷ್ಟು ಮುಂದುವರಿಸುವ ಮಾರ್ಗವಾಗಿತ್ತು. ಆದರೆ ಅಡ್ಡಂಡ ಕಾರ್ಯಪ್ಪ ಅವರದ್ದು, ಸದ್ಯ ಮುಖ್ಯವಾಹಿನಿಯ ಇತಿಹಾಸ ಎನ್ನಲಾಗುವ ಜಗತ್ತಿನ ನಂಬಿಕೆಯನ್ನು ಪ್ರಶ್ನಿಸುವ ʼಅಜೆಂಡಾʼವನ್ನು ಹೊಂದಿದೆ.
ಟಿಪ್ಪುವಿನ ಕುರಿತ ಭಾವನೆ
ಮೇಲುಕೋಟೆಯಲ್ಲಿ 700 ಅಯ್ಯಂಗಾರರನ್ನು ಕೊಲ್ಲಿಸಿದ್ದು, ದೇವಾಟ್‌ಪರಂಬು ನರಮೇಧ ಸೇರಿ ವಿವಿಧ ಸಂದರ್ಭಗಳಲ್ಲಿ ಟಿಪ್ಪು ಕ್ರೂರತೆಯನ್ನು ಬಿಂಬಿಸುವ ಸನ್ನಿವೇಶಗಳಿವೆ. ಆದರೆ ಒಟ್ಟಾರೆ ನಾಟಕವನ್ನು ಓದಿ ಮುಗಿಸಿದ ನಂತರ:
1. ಟಿಪ್ಪುವಿನ ಕ್ರೌರ್ಯದ ಮುಖ ಅಷ್ಟಾಗಿ ಉಳಿಯುವುದಿಲ್ಲ. ಟಿಪ್ಪುವು ಪತ್ನಿಯನ್ನು ಗಾಢವಾಗಿ ಪ್ರೀತಿಸುವ ಉತ್ತಮ ಗಂಡ, ಮಕ್ಕಳನ್ನು ಅಪಾರವಾಗಿ ಪ್ರೀತಿಸುವ ಉತ್ತಮ ಅಪ್ಪ ಎಂಬ ಭಾವನೆ ಮೂಡುತ್ತದೆ. ರುಕಿಯಾ ಬಾನು ನಿಧನಳಾದದ್ದನ್ನು ಕೇಳಿದ ಕೂಡಲೆ, “ಓ ! ಬೇಗಂ, ನನ್ನ ಕಿವಿಗಳು ಕಿವುಡಾಗಬಾರದೇ? ನೀನು ನನ್ನ ಶಕ್ತಿಯಾಗಿದ್ದೆ…ʼ ಎಂದು ಕುಸಿದು ಕುಳಿತುಕೊಳ್ಳುತ್ತಾನೆ ಎಂಬ ಉದಾಹರಣೆ ನೋಡಬಹುದು. ಮತ್ತೆ, ರಾಣಿಯ ಒತ್ತಾಯದ ಮೇರೆಗೇ ನಂಜನಗೂಡು, ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣ ದೇವಸ್ಥಾನಗಳನ್ನು ನಾಶ ಮಾಡುವುದಿಲ್ಲ ಎಂದು ಮಾತು ಕೊಡುತ್ತಾನೆ ಎನ್ನುವುದನ್ನೂ ನೋಡಬಹುದು. ಟಿಪ್ಪುವು ಹಿಂದು ಧರ್ಮವನ್ನು ಗೌರವಿಸುತ್ತಿದ್ದನಾದ್ದರಿಂದ ದೇವಸ್ಥಾನಗಳನ್ನು ನಾಶ ಮಾಡಿಲ್ಲ ಎಂಬ ವಾದಕ್ಕೆ ಪರ್ಯಾಯವಾಗಿ ಈ ಸಂಭಾಷಣೆಯನ್ನು ನೀಡಲಾಗಿದೆ. ಆದರೆ ಈ ಸನ್ನಿವೇಶಗಳನ್ನು ʼಓದಿದಾಗʼ ಟಿಪ್ಪುವು ಪತ್ನಿಯ ಕುರಿತು ಹೊಂದಿದ್ದ ಪ್ರೀತಿ, ಗೌರವ ಭಾವನೆಯೇ ಎದ್ದು ತೋರುತ್ತದೆ.
2. ಟಿಪ್ಪುವು ಅಂತಿಮ ಕ್ಷಣದಲ್ಲಿ ಅನೇಕ ಬಾರಿ ಗೊಂದಲಕ್ಕೆ ಒಳಗಾಗುತ್ತಾನೆ. ತನ್ನವರು ಯಾರು, ಒಳಗಿದ್ದೇ ಚೂರಿ ಇರಿಯುವವರಾರು ಎಂದು ಆಗಾಗ ತೊಳಲಾಡುತ್ತಾನೆ. ತಾನು ಬದುಕಬೇಕೆಂದರೆ ಹೋಮ ಹವನ ಮಾಡಿ ಎಂದ ಬ್ರಾಹ್ಮಣರ ಮಾತನ್ನು ಒಪ್ಪುತ್ತಾನೆ. ತನ್ನ ತಲೆಯೊಂದು ಉಳಿದಿದ್ದರೆ ಆಮೇಲೆ ಶತ್ರುಗಳನ್ನು ಮಟ್ಟ ಹಾಕಬಹುದು ಎನ್ನುತ್ತಾನೆ. ಇಂತಹ ಅನೇಕ ಸನ್ನಿವೇಶಗಳ ನಂತರ ನಾಟಕ ಮುಕ್ತಾಯವಾಗುತ್ತದೆ.
ಅಡ್ಡಂಡ ಕಾರ್ಯಪ್ಪ ಅವರು ಟಿಪ್ಪುವಿನ ಕುರಿತು ಮಾತನಾಡುವುದನ್ನು ಸುಮಾರು 2016ರಿಂದಲೂ ಕೇಳಿದ್ದೇವೆ. “ಟಿಪ್ಪುವಿನ ಹೆಸರನ್ನು ನಮ್ಮ ಮನೆಯ ನಾಯಿಗೆ ಇಡುತ್ತೇವೆʼ ಎನ್ನುವುದನ್ನು ಬಹುತೇಕ ಸಾವಿರಾರು ಬಾರಿ ಅವರು ಹೇಳಿರಬಹುದು. ಭಾಷಣದಲ್ಲಿ ಹೇಳುವಂತೆ ಟಿಪ್ಪು ಒಬ್ಬ ಕ್ರೂರ, ಮತಾಂಧ ಎನ್ನುವ ಭಾವನೆ ಅಷ್ಟಾಗಿ ನಾಟಕವನ್ನು ಓದಿದಾಗ ಮೂಡುವುದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಆತನೊಬ್ಬ ವೈಯಕ್ತಿಕ ಸ್ವಾರ್ಥಿ, ಮಹತ್ವಾಕಾಂಕ್ಷಿ, ತನ್ನ ಅನುಕೂಲಕ್ಕೆ ಇಸ್ಲಾಂ ಅನ್ನು ಗುರಾಣಿಯಾಗಿ ಬಳಸಿಕೊಂಡವ, ಅವಕಾಶವಾದಿ, ಹೆದರಿಕೆ ಉಳ್ಳವ, ಗೊಂದಲದ ಗೂಡಾದ ವ್ಯಕ್ತಿಯಾಗಿ ಈ ನಾಟಕದಲ್ಲಿ ಕಾಣುತ್ತಾನೆ.
ಭಾರತೀಯರಾದ ನಮಗೆ, ಟಿಪ್ಪುವಿಗಿಂತಲೂ ಹೆಚ್ಚಾಗಿ, ಇಡೀ ಭಾರತವನ್ನು ಇನ್ನೂರು ವರ್ಷ ಗುಲಾಮಗಿರಿಯಲ್ಲಿರಿಸಿದ್ದ ಬ್ರಿಟಿಷರ ಮೇಲೆಯೇ ಹೆಚ್ಚು ಕೋಪ. ಅಂತಹ ಬ್ರಿಟಿಷರನ್ನು ಈ ನಾಟಕದ ಅನೇಕ ಸನ್ನಿವೇಶದಲ್ಲಿ ಟಿಪ್ಪು ತೆಗಳುವಾಗ, ಅವರಿಗೆ ಮೋಸ ಮಾಡಲು ಯತ್ನಿಸುವಾಗ, ಅವರೊಂದಿಗಿನ ಒಪ್ಪಂದವನ್ನು ಮುರಿಯುವಾಗ, ತನ್ನ ಮಕ್ಕಳನ್ನು ಒತ್ತೆಯಿಡುವ ಸನ್ನಿವೇಶದಲ್ಲಿ ಟಿಪ್ಪುವಿನ ಕುರಿತು ಮೃದು ಭಾವನೆಯೇ ಮೂಡುತ್ತದೆ. ಇದನ್ನು ನಾಟಕಕಾರರು ಉದ್ದೇಶಪೂರ್ವಕವಾಗಿ ಚಿತ್ರಿಸಿದ್ದಾರೆಯೋ ಅಥವಾ ನಾಟಕ ರಚನೆಯಾಗುತ್ತ ಸಾಗಿದಂತೆ ಈ ರೂಪ ಪಡೆದಿದೆಯೋ ಗೊತ್ತಿಲ್ಲ.
ಟಿಪ್ಪುವಿನ ಸಹಾಯಕ್ಕೆ ಬರುವ ಶೃಂಗೇರಿ ಶ್ರೀಗಳ ಆಶೀರ್ವಾದ ಪತ್ರ, ಬ್ರಿಟಿಷರ ಪರವಾಗಿ ನಿಲ್ಲುವ ಮರಾಠರು, ಟ್ರಾವಂಕೋರ್ ರಾಜ್ಯದ ಕುರಿತು ಬೇರೆಯದೇ ಭಾವನೆ ಮೂಡುತ್ತದೆ.
ಟಿಪ್ಪು ನಿಜ ಕನಸುಗಳು ಕೃತಿಯ ಮುನ್ನುಡಿಯಲ್ಲಿ ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು ಹೇಳಿದಂತೆ, “ನಾಟಕವನ್ನು ಓದಿಯೇ, ನೋಡಿಯೇ ಅನುಭವಿಸಬೇಕು”. ಸದ್ಯ ನಾಟಕವನ್ನು ಓದಿದಾಗ ಇಂತಹ ಅಭಿಪ್ರಾಯ ಮೂಡಿದೆ, ನಾಟಕವನ್ನು ನೋಡಿದಾಗ ಈ ಭಾವನೆ ಹೀಗೆಯೇ ಇರುತ್ತದೆಯೇ ಅಥವಾ ಬದಲಾಗುತ್ತದೆಯೇ ಕಾದುನೋಡಬೇಕಿದೆ.