Site icon Vistara News

ಚಾಮರಾಜಪೇಟೆ ಮೈದಾನದಲ್ಲಿ ಧ್ವಜ ಹಾರುವುದು ಶತಃಸಿದ್ಧ: ನಾಗರಿಕರ ಒಕ್ಕೂಟ ಘೋಷಣೆ

Chamarajpet ground pressmeet

ಬೆಂಗಳೂರು: ಚಾಮರಾಜಪೇಟೆ ಮೈದಾನವು ವಕ್ಫ್‌ ಮಂಡಳಿಗೆ ಸೇರಿದ್ದಲ್ಲ ಅದು ಸರ್ಕಾರದ ಅಸ್ತಿ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಘೋಷಿಸಿದ ಬೆನ್ನಲ್ಲೇ ಆಗಸ್ಟ್‌ 15ರಂದು ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದು ಶತಃಸಿದ್ಧ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಘೋಷಣೆ ಮಾಡಿದೆ.

ಬಿಬಿಎಂಪಿ ಆದೇಶದ ಹಿನ್ನೆಲೆಯಲ್ಲಿ ಒಕ್ಕೂಟದ ವತಿಯಿಂದ ಭಾನುವಾರ ಸುದ್ದಿಗೋಷ್ಠಿ ನಡೆಸಲಾಯಿತು. ಸುದ್ದಿಗೋಷ್ಟಿಯಲ್ಲಿ ವಿಶ್ವಸನಾತನ ಪರಿಷತ್, ಚಾಮರಾಜಪೇಟೆ ನಾಗರಿಕರ ಒಕ್ಕೂಟ, ವಂದೇ ಮಾತರಂ ಸಂಘಟನೆ, ಲಹರಿ ವೇಲು ಸೇರಿ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ‌ ಅಧ್ಯಕ್ಷ ರಾಮೇಗೌಡ, ಒಂದು ಹಂತದ ಜಯವನ್ನು ನಾವು ಸಾಧಿಸಿದ್ದೇವೆ. ಬಹಳ ವರ್ಷಗಳಿಂದ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೆವು. ಈ ಕಾರ್ಯದಲ್ಲಿ ಹಲವು ಸಂಘ, ಸಂಸ್ಥೆಗಳು, ಸಂಘಟನೆಗಳ ಒಗ್ಗಟ್ಟಿನ ಸಹಕಾರ ನೀಡಿವೆ. ಅವರೆಲ್ಲರಿಗೂ ಧನ್ಯವಾದ. ರಾಷ್ಟ್ರಧ್ವಜವನ್ನು ಮೈದಾನದಲ್ಲಿ ಹಾರಿಸಲಾಗುತ್ತದೆ.

ಎಲ್ಲಾ ನಾಗರಿಕರು, ಹಿಂದೂ ಸಂಘಟನೆಗಳ ಸಹಕಾರದಿಂದ ಆಗಸ್ಟ್‌ ೧೫ಕ್ಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಈ ಕುರಿತು ಅನುಮತಿ ನೀಡಲು ಮನವಿ ಪತ್ರ ನೀಡಿದ್ದೇವೆ.

ಅನುಮತಿ ಕೊಡುವುದು ಅಥವಾ ಬಿಡುವುದು ಅವರಿಗೆ ಬಿಟ್ಟ ವಿಚಾರ. ಅವರು ಅನುಮತಿ ಕೊಟ್ಟರೂ, ಬಿಟ್ಟರೂ ನಾವು ಅವತ್ತು ಧ್ವಜಾರೋಹಣ ಮಾಡುತ್ತೇವೆ. ಹರಿಯುವ ನೀರಿಗೆ ದೊಣ್ಣೆ ನಾಯಕ ಅಪ್ಪಣೆ ಬೇಡ. ಅದೇ ರೀತಿ ಮೈದಾನದಲ್ಲಿ ಧ್ವಜಾರೋಹಣ ಮಾಡಲು ನಮಗೆ ಸಂವಿಧಾನ ಸ್ವಾತಂತ್ರ್ಯ ನೀಡಿದೆ. ದೇಶದ ನಾಗರಿಕರಾಗಿ ಅದು ನಮ್ಮ ಕರ್ತವ್ಯವೂ ಹೌದು ಎಂದರು.

ಉದ್ಯಮಿ ಲಹರಿ ವೇಲು ಮಾತನಾಡಿ, ಇವತ್ತು ನಮಗೆ ಹಬ್ಬದ ಸಂಭ್ರಮ. ಸತತವಾಗಿ 16 ವರ್ಷಗಳಿಂದ ಈ ಹೋರಾಟ ಮಾಡಿದ್ದೇವೆ. ಗಣೇಶೋತ್ಸವ, ಧ್ವಜಾರೋಹಣ ಮಾಡಲು ಬಹಳ ಹೋರಾಟ ನಡೆಸಿದ್ದೇವೆ. ಮೈದಾನ ಕಂದಾಯ ಇಲಾಖೆಯದ್ದು, ಎಂದು ಬಿಬಿಎಂಪಿ ಆದೇಶ ಮಾಡಿರುವುದು ಸ್ವಾಗತಾರ್ಹ. ನಮ್ಮ ದೇಶದಲ್ಲಿ ನಮ್ಮ ತ್ರಿವರ್ಣ ಧ್ವಜ ಹಾರಿಸಲು ಯಾರ ಅಪ್ಪಣೆ ಬೇಕು? ನಾವೇನು ಪಾಕಿಸ್ತಾನದಲ್ಲಿ ಧ್ವಜ ಹಾರಿಸುತ್ತೇವೆ ಎಂದಿದ್ದೇವೆಯೇ? ಎಂದು ಪ್ರಶ್ನಿಸಿದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ರುಕ್ಮಾಂಗದ ಮಾತನಾಡಿ, ಸತತ ಮೂರು ತಿಂಗಳ ಉಗ್ರ ಹೋರಾಟದ ನಂತರ ಈ ಜಯ ಲಭಿಸಿದೆ. ಇದಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕನ್ನಡ ಪರ ಸಂಘಟನೆಗಳು, ಹಿಂದೂ ಪರ ಸಂಘಟನೆಗಳು ಬೆಂಬಲ ಕೊಟ್ಟಿದ್ದವು. ಯಾರು ಏನೇ ಹೇಳಿದರೂ ಮೈದಾನದಲ್ಲಿ ನಾವು ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದರು.

ಬಿಬಿಎಂಪಿ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ವಕ್ಫ್‌ ಬೋರ್ಡ್‌ ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ರಾಮೇಗೌಡ, ಅವರು ಕಾನೂನು ಹೋರಾಟ ಮಾಡುತ್ತೇವೆ ಎಂದರೆ ಅದಕ್ಕೂ ನಾವು ಸಿದ್ಧವಾಗಿದ್ದೇವೆ. ನ್ಯಾಯಾಲಯ ಕೇಳುವ ಎಲ್ಲ ಸಮರ್ಪಕ ದಾಖಲೆಯನ್ನೂ ನಾವು ಕೋರ್ಟ್‌ಗೆ ಕೊಡುತ್ತೇವೆ. ಇದು ಚಾಮರಾಜಪೇಟೆ ನಾಗರಿಕರ ಆಟದ ಮೈದಾನವಾಗಿಯೇ ಉಳಿಯುತ್ತದೆ ಎಂದರು.

ಪಟಾಕಿ ಸಿಡಿಸಿ ಸಂಭ್ರಮ

ಸುದ್ದಿಗೋಷ್ಠಿಯ ನಂತರದಲ್ಲಿ ಒಕ್ಕೂಟದ ಸದಸ್ಯರು ಮೈದಾನದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲು ಮುಂದಾದರು. ಆದರೆ ಈಗಾಗಲೆ ಭದ್ರತೆ ಒದಗಿಸಿರುವ ಪೊಲೀಸರು ಇದಕ್ಕೆ ನಿರಾಕರಿಸಿದರು. ಕೆಲಕಾಲ ಮಾತುಕತೆ ನಂತರ ಮೈದಾನದದಿಂದ ನೂರು ಮೀಟರ್‌ ದೂರದಲ್ಲಿ ಪಟಾಕಿ ಸಿಡಿಸಿದರು. ಭಾರತ್‌ ಮಾತಾ ಕಿ ಜೈ ಘೋಷಣೆ ಕೂಗಿ ಸಂಭ್ರಮ ಹಂಚಿಕೊಂಡರು.

ಇದನ್ನೂ ಓದಿ | ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಭದ್ರತೆ, ಮತ್ತೆ ಕೋರ್ಟಿಗೆ ಹೋಗಲು ವಕ್ಫ್‌ ಬೋರ್ಡ್‌ ಸಿದ್ಧತೆ

Exit mobile version