ಬೆಂಗಳೂರು: ವಾಹನ ಸವಾರರನ್ನು ಅಡ್ಡಗಟ್ಟಿ ಆರ್‌ಸಿ ಕೊಡಿ, ಇನ್ಷೂರೆನ್ಸ್ ಕೊಡಿ, ಡಿಎಲ್ ಕೊಡಿ ಎಂದು ಕೇಳುವ ಸಂಚಾರಿ ಪೊಲೀಸರ ವಾಹನವೇ ಕಾನೂನು ಪಾಲನೆ ಮಾಡುತ್ತಿಲ್ಲ. ಇಂಥದ್ದೊಂದು ಪೇಚಿಗೆ ಬೆಂಗಳೂರು ಸಂಚಾರಿ ಪೊಲೀಸರು ಸಿಲುಕಿದ್ದು, ಟ್ವಿಟರ್‌ನಲ್ಲಿ ಗೇಲಿ ಮಾಡಲಾಗುತ್ತಿದೆ.
ರಾಘವೇಂದ್ರ ಬೆಂಗಳೂರಿಗ ಎಂಬವರು ಟ್ವಿಟರ್‌ನಲ್ಲಿ ಒಂದು ಫೋಟೊ ಹಾಕಿದ್ದಾರೆ. ತಾವು ರಸ್ತೆಯಲ್ಲಿ ಸಾಗುತ್ತಿರುವಾಗ ಸಂಚಾರಿ ಪೊಲೀಸರ ವಾಹನವೊಂದರ ಫೋಟೊ ತೆಗೆದು ಆ ವಾಹನದ ಸಂಖ್ಯೆಯನ್ನು ಪರಿಶೀಲಿಸಿದ್ದಾರೆ. ವಾಹನದ ಇನ್ಷೂರೆನ್ಸ್ 2019ರಲ್ಲೇ ಲ್ಯಾಪ್ಸ್ ಆಗಿರುವುದು ಪತ್ತೆಯಾಗಿದೆ.
ಇದನ್ನು ಟ್ವೀಟ್ ಮಾಡಿರುವ ರಾಘವೇಂದ್ರ, ಡಿಸಿಪಿ ಸರ್ ನಿಮ್ಮ ವಾಹನದ ಇನ್ಷೂರೆನ್ಸ್ 2019ರ ಮೇ 16ರಂದೇ ಲ್ಯಾಪ್ಸ್ ಆಗಿದೆ ಎಂದು ಕೇಂದ್ರ ಸರ್ಕಾರದ ವೆಬ್‌ಸೈಟ್ ತೋರಿಸುತ್ತಿದೆ. ನಿಮ್ಮ ಸುರಕ್ಷತೆ ನಮಗೆ ಬಹುಮುಖ್ಯ ಎಂದಿದ್ದಾರೆ. ಇದಕ್ಕೆ ಬೆಂಗಳೂರು ಸಿಟಿ ಪೊಲೀಸ್, ಬೆಂಗಳೂರು ಕಮಿಷನರ್ ಪ್ರಧಾನಿ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಂತಾದವರನ್ನು ಟ್ಯಾಗ್ ಮಾಡಿದ್ದಾರೆ.
ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ಸಂಚಾರಿ ಪೊಲೀಸ್ ಟ್ವಿಟರ್ ಖಾತೆ, ಪರಿಶೀಲಿಸುವುದಾಗಿ ತಿಳಿಸಿದೆ. ಆದರೆ ಟ್ವಿಟಿಗರು ಇಷ್ಟಕ್ಕೇ ಸುಮ್ಮನಾಗಿಲ್ಲ. ಇದೇ ವಾಹನದ ಮತ್ತೂ ವಿವರಗಳನ್ನು ಕಲೆ ಹಾಕಿದ್ದಾರೆ.
ಅರ್ಜುನ ಎನ್ನುವವರು ಈ ವಾಹನದ ನಂಬರ್ ಆಧಾರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ, ಕಾಫಿ ಬೋರ್ಡ್ ಜಂಕ್ಷನ್‌ನಲ್ಲಿ 2021ರ ಫೆಬ್ರವರಿ 23ರಂದು ಸಿಗ್ನಲ್ ಜಂಪ್ ಮಾಡಿರುವ ದಾಖಲೆ ಕಂಡುಬಂದಿದೆ.
ಪೊಲೀಸರ ವಾಹನ ಮಾತ್ರ ಹಾಗೆಯೇ ಓಡಾಡುತ್ತಿದೆ. ಸಾಮಾನ್ಯ ಜನರ ವಾಹನವಾಗಿದ್ದರೆ ಪೊಲೀಸರು ಲೋಕ್ ಅದಾಲತ್ ನೋಟಿಸ್ ಕಳಿಸುತ್ತಿದ್ದರು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | Traffic Rules | ಆಂಬ್ಯುಲೆನ್ಸ್ ಸೈರನ್ ಹಾಕಿ ಕಾರು ಡ್ರೈವ್; ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ದಂಡ!