ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಬಿ. ಗರುಡಾಚಾರ್ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಎರಡು ತಿಂಗಳು ಜೈಲು ಶಿಕ್ಷೆಯನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ತೀರ್ಪು ನೀಡಿದೆ.
2018ರ ಚುನಾವಣೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಗರುಡಾಚಾರ್ ಸ್ಪರ್ಧಿಸಿದ್ದರು. ಈ ವೇಳೆ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸುವಾಗ, ಕ್ರಿಮಿನಲ್ ಮೊಕದ್ದಮೆಗಳು ಸೇರಿ ಅನೇಕ ಮಾಹಿತಿಗಳನ್ನು ಮುಚ್ಚಿಟ್ಟಿರುವ ಆರೋಪ ಸಾಬೀತಾಗಿದೆ.
ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ಗರುಡಾಚಾರ್ ಮುಚ್ಚಿಟ್ಟಿದ್ದರು. ಇದರ ಜತೆಗೆ ಕಂಪನಿಯೊಂದರ ಹುದ್ದೆಯ ಮಾಹಿತಿಯನ್ನೂ ಮರೆಮಾಚಿದ್ದರು. ಈ ಕುರಿತು ಎಚ್.ಜೆ. ಪ್ರಶಾಂತ್ ಎಂಬುವವರು ದೂರು ದಾಖಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿರುವ ನ್ಯಾಯಾಲಯ, ಜನಪ್ರತಿನಿಧಿಗಳ ಕಾಯ್ದೆ ಸೆ.125 ಎ ಅಡಿ ಆರೋಪ ಸಾಬೀತು ಆಗಿದೆ ಎಂದು ತಿಳಿಸಿದೆ. ಈ ತಪ್ಪಿಗಾಗಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್‌ಗೆ 2 ತಿಂಗಳು ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸದ್ಯಕ್ಕೆ ರಿಲೀಫ್ ಆದರೆ ರಾಜಕೀಯ ಹಿನ್ನಡೆ
ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಿದ ನಂತರ ಮತ್ತೆ ನ್ಯಾಯಾಲಯಕ್ಕೆ ಮನವಿ ಮಾಡಿದ ಗರುಡಾಚಾರ್ ಪರ ವಕೀಲರು, ಜಾಮೀನು ಅರ್ಜಿ ಸಲ್ಲಿಸಿದರು. ಘೋಷಣೆಯಾಗಿರುವ ಶಿಕ್ಷೆ 3 ವರ್ಷಕ್ಕಿಂತ ಕಡಿಮೆ ಅವಧಿಯಾದ್ಧರಿಂದಾಗಿ ಹಾಗೂ ಮೇಲ್ಮನವಿ ಸಲ್ಲಿಸಲು ಇನ್ನೂ ಒಂದು ತಿಂಗಳು ಅವಕಾಶ ಇರುವುದರಿಂದ ಜಾಮೀನು ನೀಡಲು ಪರಿಗಣಿಸಬೇಕು ಎಂದು ಕೋರಿದರು. 25 ಸಾವಿರ ರೂಪಾಯಿ ಬಾಂಡ್, ಶ್ಯೂರಿಟಿ ಒದಗಿಸಲು ಸೂಚಿಸಿದ 42ನೇ ಎಸಿಎಂಎಂ ಕೋರ್ಟ್ ನ್ಯಾ. ಜೆ.ಪ್ರೀತ್ ಅವರು, ಜಾಮೀನು ನೀಡಲು ಒಪ್ಪಿಗೆ ನೀಡಿದರು.
ಸದ್ಯಕ್ಕೆ ಜೈಲಿಗೆ ಹೋಗುವುದರಿಂದ ಉದಯ್ ಬಿ. ಗರುಡಾಚಾರ್ ಬಚಾವಾಗಿದ್ದಾರೆ. ಆದರೆ ಇನ್ನೇನು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕೇವಲ ಐದಾರು ತಿಂಗಳೂ ಇರುವಂತೆ ಹೊರಬಿದ್ದಿರುವ ಈ ತೀರ್ಪಿನಿಂದಾಗಿ ರಾಜಕೀಯವಾಗಿ ಹಿನ್ನಡೆ ಆಗುವ ಸಾಧ್ಯತೆಗಳಿವೆ.
ಇದನ್ನೂ ಓದಿ | Ticket Fight | ಚಿಕ್ಕಪೇಟೆ ಕಾಂಗ್ರೆಸ್ ಟಿಕೆಟ್‌ಗೆ ಕೆಜಿಎಫ್ ಬಾಬು, ಆರ್.ವಿ.ದೇವರಾಜ್ ಮಧ್ಯೆ ದೊಡ್ಡ ಫೈಟ್!