ಬೆಂಗಳೂರು: ರಾಜಧಾನಿಯ ನಡುವೆ ಜನವಸತಿ ಪ್ರದೇಶದಲ್ಲಿಯೇ ಸುಮಾರು ಆರು ತಿಂಗಳಿಂದ ಕೊಳೆಯುತ್ತಿದ್ದ ಅಜ್ಞಾತ ಮಹಿಳೆಯೊಬ್ಬರ ಶವದ ಅವಶೇಷಗಳು ಪತ್ತೆಯಾಗಿವೆ.
ಹುಳಿಮಾವು ಬಳಿಯ ಅಕ್ಷಯನಗರದ ಬಳಿ ಶವ ಪತ್ತೆಯಾಗಿದ್ದು, ಶವ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಮರವೊಂದರ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಅವಶೇಷಗಳು ಪತ್ತೆಯಾಗಿವೆ. ಶವದ ಅವಶೇಷ ನೋಡಿ ಆತ್ಮಹತ್ಯೆ ಮಾಡಿಕೊಂಡು ಆರು ತಿಂಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಮಲಯಾಳಂ ಚಲನಚಿತ್ರ ʼಕೋಲ್ಡ್ ಕೇಸ್ʼ ಮಾದರಿಯಲ್ಲಿ ತಲೆ ಬುರುಡೆಯೊಂದು ಮೊದಲಿಗೆ ಪತ್ತೆಯಾಗಿದೆ. ನಿನ್ನೆ ಪೊಲೀಸರು ಮೂತ್ರ ವಿಸರ್ಜನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಇದೊಂದು ಮಹಿಳೆ ಶವ ಎಂಬುದು ದೃಢವಾಗಿದೆ.
ಸುತ್ತಮುತ್ತ ಕಟ್ಟಡಗಳ ನಡುವೆ ಖಾಲಿ ನಿವೇಶನ ಒಂದರ ಪೊದೆಗಳ ನಡುವೆ ಇರುವ ಮರದಲ್ಲಿ ಶವ ಪತ್ತೆಯಾಗಿದೆ. ಶವದ ಬಳಿ ಮಹಿಳೆಯರು ಬಳಸುವ ಚಪ್ಪಲಿಗಳು ಕಂಡುಬಂದಿವೆ. ಜನ ಓಡಾಡುವ ಪ್ರದೇಶದಲ್ಲಿಯೇ ಇದ್ದರೂ, ಆರು ತಿಂಗಾಳಾದರೂ ಶವ ಯಾರಿಗೂ ಕಂಡುಬಾರದೇ ಇದ್ದುದು ಆಶ್ಚರ್ಯ ಮೂಡಿಸಿದೆ.
ಹುಳಿಮಾವು ಠಾಣೆ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯ ಆರು ತಿಂಗಳ ಹಿಂದಿನ ಮಿಸ್ಸಿಂಗ್ ಕೇಸ್‌ಗಳ ಹಿಂದೆ ಬಿದ್ದಿದ್ದಾರೆ. ಏಳು ತಿಂಗಳ ಹಿಂದೆ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆಯೊಬ್ಬಳ ನಾಪತ್ತೆ ಪ್ರಕರಣ ದಾಖಲಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ವೈದ್ಯಕೀಯ ಪರೀಕ್ಷೆಗಳಿಂದ ಇದಕ್ಕೆ ಉತ್ತರ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Baby death | ಫುಟ್‌ಪಾತ್ ಮೇಲೆ ಹೆರಿಗೆ, ಮಗು ಸಾವು, ತಾಯಿ ನಾಪತ್ತೆ