ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಯಲಹಂಕ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರಗತಿ ಪರಿಶೀಲನೆ ನಡೆಸಿದರು.
ಯಲಹಂಕ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಯಲಹಂಕ ಕೆರೆಯು 292 ಎಕರೆ ಪ್ರದೇಶದಲ್ಲಿದ್ದು, ಕೆರೆಯಲ್ಲಿ ಹೂಳನ್ನು ತೆರವುಗೊಳಿಸಿ, ಬಂಡ್, ಜೌಗು ಪ್ರದೇಶ, ಇನ್‌ಲೆಟ್-ಔಟ್‌ಲೆಟ್, ಕೆರೆಗೆ ಕೊಳಚೆ ನೀರು ಸೇರದಿರುವ ಹಾಗೆ ತಿರುವುಗಾಲುವೆ ನಿರ್ಮಾಣ, ಭದ್ರತಾ ಸಿಬ್ಬಂದಿಯ ಕೊಠಡಿ, ಸೈಕಲ್ ಟ್ರ್ಯಾಕ್, ವಿಹಾರಕ್ಕೆ ಬರುವವರಿಗೆ ವಿರಾಮದ ಸ್ಥಳ ಹಾಗೂ ಕೆರೆಯ ಸುತ್ತಲು ಫೆನ್ಸಿಂಗ್ ಅಳವಡಿಕೆ ಮಾಡಲಾಗಿದೆ.
ಮಳೆಗಾಲದ ವೇಳೆ ಸ್ಥಳೀಯ ಪ್ರದೇಶದಲ್ಲಿ ಜಲಾವೃತವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ರಾಜಕಾಲುವೆಗಳ ದುರಸ್ಥಿ ಕಾರ್ಯ ಮಾಡಲಾಗಿದೆ. ಅಲ್ಲದೆ ಯೋಜನಾ ವಿಭಾಗದಿಂದ 1 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಆವರಣದಲ್ಲಿರುವ ಕಲ್ಯಾಣಿಯನ್ನು ಅಭಿವೃದ್ಧಿ ಪಡಿಸಿ ಸುಂದರೀಕರಣಗೊಳಿಸಲಾಗಿದೆ.
ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಪರಿಶೀಲನೆ
2021ರ ನವೆಂಬರ್ನಲ್ಲಿ ಜೋರು ಮಳೆಯಾದ ಪರಿಣಾಮ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಜಲಾವೃತಗೊಂಡು ಸಾಕಷ್ಟು ಸಮಸ್ಯೆಯಾಗಿತ್ತು. ಇದೀಗ ಆ ಭಾಗದಲ್ಲಿ ಜಲಾವೃತವಾಗದೆ ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ ಸರಾಗವಾಗಿ ನೀರು ಹರಿದು ಹೋಗುವಂತೆ ರಾಜಕಾಲುವೆಗಳ ಅಗಲೀಕರಣ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ.
ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನಲ್ಲಿ ಹಾದುಹೋಗುವ ರಾಜುಲುವೆಯನ್ನು 8 ಅಡಿಯಿಂದ 10 ಅಡಿಗೆ ಅಗಲ ಮಾಡಿದ್ದು, ಸದರಿ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಕೆಳಗೆ ಹಾದುಹೋಗುವ ರಾಜಕಾಲುವೆಯ ವೆಂಟ್ ಭಾಗ ಚಿಕ್ಕದಾಗಿದ್ದು, ಅದನ್ನು ಅಗಲ ಮಾಡಿ ಪುಶಿಂಗ್ ಬಾಕ್ಸ್ ಅಳವಡಿಸಲು ಯೋಜನೆ ರೂಪಿಸಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಜಲಾವೃತ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಯುಕ್ತರು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಭವನ ಪರಿಶೀಲನೆ
ಯಲಹಂಕ ನ್ಯೂ ಟೌನ್ ವಾರ್ಡ್ ವ್ಯಾಪ್ತಿಯಲ್ಲಿ ₹10.50 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಿದ್ದು, 438 ಹಾಸನಗಳ ಸಾಮರ್ಥ್ಯದ ಆಡಿಟೋರಿಯಂ, ಬೇಸ್ಮೆಂಟ್ ಹಾಗೂ ಭವನ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಅಡಿಟೋರಿಯಂ ಮೇಲ್ಬಾಗದಲ್ಲಿ ಒಂದು ಸಭಾಂಗಣವಿದೆ. ಸುಮಾರು 700 ಆಸನಗಳ ವ್ಯವಸ್ಥೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ಮುಖ್ಯ ರಸ್ತೆ, ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣದ ಬಳಿಯ ರಸ್ತೆ ಬದಿಯ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಮೊಬಿ ಪಾರ್ಕ್‌ಗೆ ಮೂರು ವರ್ಷ ಟೆಂಡರ್ ನೀಡಲಾಗಿದ್ದು, ವಾರ್ಷಿಕ ₹13 ಲಕ್ಷ ಪಾಲಿಕೆಗೆ ಪಾವತಿ ಮಾಡಿದ್ದಾರೆ. ಈ ಸ್ಥಳದಲ್ಲಿ 100 ಕಾರ್, 200 ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುವ ವ್ಯವಸ್ಥೆಯಿದ್ದು, ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕೊಡದಿರಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೈಕಲ್ ಟ್ರ್ಯಾಕ್ ಹಾಗೂ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ:
ಸಂದೀಪ್ ಉನ್ನಿಕೃಷ್ಣನ್ ಮುಖ್ಯ ರಸ್ತೆ ಬದಿ ₹2.5 ಕೋಟಿ ವೆಚ್ಚದಲ್ಲಿ 1 ಕಿ.ಮೀ ಮೀಟರ್ ಉದ್ದದಲ್ಲಿ ವಿನೂತನ ಮಾದರಿಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಮೊದಲ ಹಂತದಲ್ಲಿ 500 ಮೀಟರ್ ಸೈಕಲ್ ಟ್ರ್ಯಾಕ್ ಪೂರ್ಣಗೊಂಡಿದ್ದು, ಬಳಕೆಗೆ ಅನುವು ಮಾಡಿಕೊಡಲಾಗಿದೆ. ಬಾಕಿ 500 ಮೀಟರ್ ಟ್ರ್ಯಾಕ್ ಕೆಲಸ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮುಖ್ಯ ಆಯುಕ್ತರು ಸೂಚನೆ ನೀಡಿದರು.
1.95 ಕಿ.ಮೀ ಉದ್ದದ ಯಲಹಂಕ ನ್ಯೂ ಟೌನ್ ಮುಖ್ಯ ರಸ್ತೆಯನ್ನು (ಶೇಷಾದ್ರಿಪುರಂ ಕಾಲೇಜು ಮುಖ್ಯ ರಸ್ತೆಯಿಂದ ಅರೋಮಾ ಬೇಕರಿಯವರೆಗೆ) ₹13 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರತಿಯಲ್ಲಿದ್ದು, ಈಗಾಗಲೇ 70% ಕಾಮಗಾರಿ ಪೂರ್ಣಗೊಂಡಿದೆ. ಜಲಮಂಡಳಿ ವತಿಯಿಂದ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ರಸ್ತೆ ಬದಿ ಡಕ್ಟ್ ಅಳವಡಿಕೆ, ಚರಂಡಿ ಕಾಮಗಾರಿ, ಪಾದಚಾರಿ ಮಾರ್ಗ ಅಭಿವೃದ್ಧಿ ಪ್ರಗತಿಯಲ್ಲಿದೆ.
ಈ ಪೈಕಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಾಗಿದೆ. 70 ಎಕರೆ ಪ್ರದೇಶದಲ್ಲಿ ಅಟ್ಟೂರು ಕೆರೆಯಿದ್ದು, ಕೆರೆಗೆ ಶುದ್ಧ ನೀರು ಬಿಡುವ ಸಲುವಾಗಿ ಜಲಮಂಡಳಿ ವತಿಯಿಂದ 7 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿ ಪ್ಲಾಂಟ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗೆ ಶುದ್ಧ ನೀರು ಹೊರಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜೆಎಸ್‌ಸಿಎಎಸ್‌ಆರ್ ಪರಿಶೀಲನೆ
2021ರ ನವೆಂಬರ್ನಲ್ಲಿ ಜೋರು ಮಳೆಯಾದ ಪರಿಣಾಮ Jawaharlal Nehru Centre For Advanced Scientific Research ಆವರಣಕ್ಕೆ ನೀರು ನುಗ್ಗಿ ಸಾಕಷ್ಟು ಉಪಕರಣಗಳು ಹಾಳಾಗಿದ್ದವು. ಈ ಸಂಬಂಧ ಜಕ್ಕೂರು ಕೆರೆಯಿಂದ ಬರುವ ನೀರು ಸರಾಗವಾಗಿ ರಾಚೇನಹಳ್ಳಿ ಕೆರೆಗೆ ಸೇರಲು ಪರ್ಯಾಯ ರಾಜಕಾಲುವೆ ನಿರ್ಮಾಣ ಮಾಡಬೇಕು. ಜೊತೆಗೆ ಸೀವೇಜ್ ನೀರು ಕೆರೆಗೆ ಸೇರದಂತೆ ಜಲಮಂಡಳಿ ವತಿಯಿಂದ ಪ್ರತ್ಯೇಕ ಪೈಪ್ ಕಾಮಗಾರಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಆಯುಕ್ತರು ತಿಳಿಸಿದರು.
ಡಾಂಬರು ಮಿಶ್ರಣ ಘಟಕ ಪರಿಶೀಲನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಕಣ್ಣೂರು ಬಳಿ ಪಾಲಿಕೆಯ 4.5 ಎಕರೆ ಜಾಗದಲ್ಲಿ ಸುಮಾರು 7.5 ಕೋಟಿ ರೂ. ವೆಚ್ಚದಲ್ಲಿ ಡಾಂಬರು ಮಿಶ್ರಣ ಘಟಕ (Batch Mix Plant)ವನ್ನು ಸ್ಥಾಪಿಸಲಾಗಿದೆ. ಒಂದು ಗಂಟೆಗೆ 100/120 TPH (Tonnes Per Hour) ಸಾಮರ್ಥ್ಯವುಳ್ಳ ಡಾಂಬರನ್ನು ತಯಾರಿಸಬಹುದಾಗಿದ್ದು, ದಿನಕ್ಕೆ 30 ರಿಂದ 40 ಟ್ರಕ್ ಡಾಂಬರನ್ನು ತಯಾರಿಸಬಹುದಾಗಿದೆ.
ಡಾಂಬರು ಮಿಶ್ರಣ ಘಟಕವು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಡಾಂಬರು ಮಿಶ್ರಣಕ್ಕೆ ಕಚ್ಚಾ ವಸ್ತುಗಳಾದ ಜಲ್ಲಿ, ಜಲ್ಲಿಪುಡಿ, ಬಿಟಮಿನ್ ಅನ್ನು ಡಾಂಬರು ಮಿಶ್ರಣಕ್ಕೆ ಅಗತ್ಯ ಪ್ರಮಾಣದಲ್ಲಿ ಪಡೆಯಲಿದೆ ಎಂದು ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರ ಪ್ರಹ್ಲಾದ್ ಮಾಹಿತಿ ನೀಡಿದರು.
ಈ ವೇಳೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಪಾಲಿಕೆಯ ಬ್ಯಾಚ್ ಮಿಕ್ಸ್ ಪ್ಲಾಂಟ್‌ನಿಂದ ಅವಶ್ಯಕತೆಗೆ ತಕ್ಕಂತೆ ಡಾಂಬರನ್ನು ಉತ್ಪಾದಿಸಿ ತ್ವರಿತಗತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಡಾಬಂರಿನ ಮಿಶ್ರಣದಲ್ಲಿ ಬಿಟಮಿನ್ ಪ್ರಮಾಣವನ್ನು ಪರಿಶೀಲಿಸಿದಾಗ ವಿನ್ಯಾಸದ ಪ್ರಕಾದ ಶೇ. 5.4 ರಿಂದ 6.1 ರವರೆಗೆ ಇರುಬೇಕು. ಪರೀಕ್ಷೆ ಮಾಡಿದಾಗ ಶೇ. 5.8 ಇದ್ದುದನ್ನು ಗಮನಿಸಿ ಇದೇ ರೀತಿ ಗುಣಮಟ್ಟ ಕಾಪಾಡಿಕೊಳ್ಳ ಬೇಕು ಎಂದು ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದರು.
ಇದನ್ನೂ ಓದಿ: ವಾರದಲ್ಲೆ ಎಲ್ಲ ಗುಂಡಿಗಳನ್ನು ಮುಚ್ಚುವ ಭರವಸೆ ನೀಡಿದ ತುಷಾರ್ ಗಿರಿನಾಥ್