ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವೀರಪ್ಪನ್ ಸಹಚರ ಮೀಸೆ ಮಾದಯ್ಯ ಮೃತಪಟ್ಟಿದ್ದಾನೆ.
ಕಳೆದ 34 ವರ್ಷದಿಂದ ವೀರಪ್ಪನ್ ಸಹಚರನಾದ ಮೀಸೆ ಮಾದಯ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಕೆಲ ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಈತನನ್ನು ದಾಖಲು ಮಾಡಲಾಗಿತ್ತು. ಈತನಿಗೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯಾಗಿತ್ತು.
ವೀರಪ್ಪನ್‌ನ ಇನ್ನುಳಿದ ಸಹಚರರಾದ ಸೈಮನ್, ಬಿಲವೇಂದ್ರನ್, ಮೀಸೆ ಮಥಾಯನ್ ಜೈಲಿನಲ್ಲಿರುವಾಗಲೇ ಸಾವನ್ನಪ್ಪಿದ್ದರು. ಮೀಸೆ ಮಾದಯ್ಯ ಕೂಡ ಹೀಗೇ ಮೃತಪಟ್ಟಿದ್ದಾನೆ. ಸದ್ಯ ವಿಕ್ಟೋರಿಯಾ ಶವಾಗಾರದಲ್ಲಿ ಮೀಸೆ ಮಾದಯ್ಯನ ಶವ ಇದೆ. ಜೈಲು ಅಧಿಕಾರಿಗಳು ಶವ ವಿಲೇವಾರಿಗೆ ಕಾಳಜಿ ವಹಿಸುತ್ತಿಲ್ಲ ಎಂದು ಮತ್ತೊಬ್ಬ ವೀರಪ್ಪನ್ ಸಹಚರ ಆರೋಪಿಸಿದ್ದಾನೆ.
ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಸಾವು
ವಿಜಯನಗರ: ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಹೊಸಪೇಟೆಯ ಹೊರವಲಯದ ನ್ಯಾಷನಲ್ ಶಾಲೆಯ ಎದುರು ಘಟನೆ ನಡೆದಿದೆ.
ಅಂದಾಜು 45 ವರ್ಷದ ಅನಾಮಧೇಯ ವ್ಯಕ್ತಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದು, ಹೊಸಪೇಟೆಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯ ವಿಳಾಸ, ಗುರುತು ಹಾಗೂ ಆತ್ಮಹತ್ಯೆಗೆ ನಿಖರ ಕಾರಣಕ್ಕಾಗಿ ಪೊಲೀಸರು ಹುಡುಕುತ್ತಿದ್ದಾರೆ.