ಬೆಂಗಳೂರು: ಬೆಂಗಳೂರಿನ ಗಾಂಧಿಬಜಾರ್‌ನಲ್ಲಿರುವ ಪ್ರಸಿದ್ಧ ಹೋಟೆಲ್ ʼವಿದ್ಯಾರ್ಥಿ ಭವನʼ ಮಲ್ಲೇಶ್ವರಕ್ಕೂ ಬರಲಿದೆ. ಅನೇಕ ದಿನಗಳಿಂದ ಕೇಳಿಬರುತ್ತಿದ್ದ ಈ ಸುದ್ದಿಗೆ ಈಗ ಸ್ಪಷ್ಟ ರೂಪ ಲಭಿಸಿದೆ. 1943ರಲ್ಲಿ ಆರಂಭವಾಗಿ ಅನೇಕ ಕವಿಗಳು, ಸಾಹಿತಿಗಳು, ಹೋರಾಟಗಾರರು, ರಾಜಕಾರಣಿಗಳು ಹಾಗೂ ಜನಸಾಮಾನ್ಯರ ಮೆಚ್ಚಿನ ತಾಣವಾಗಿ ಗಾಂಧಿಬಜಾರ್‌ನಲ್ಲಿ ನೆಲೆನಿಂತಿರುವ ವಿದ್ಯಾರ್ಥಿ ಭವನ 75 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ, ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಬಡಾವಣೆ ಮಲ್ಲೇಶ್ವರದಲ್ಲೂ ವಿದ್ಯಾರ್ಥಿ ಭವನವನ್ನು ನೋಡಬಹುದಾಗಿದೆ. ಆದರೆ ಮಲ್ಲೇಶ್ವರಕ್ಕೆ ರುಚಿಕರವಾದ ದೋಸೆ, ಇಡ್ಲಿ ಮೂಲಕ ಬರುತ್ತಿಲ್ಲ. ಬದಲಿಗೆ ಕತೆ ನಾಟಕ ರೂಪದಲ್ಲಿ ಜನರ ಮುಂದೆ ಬರಲಿದೆ.
ಇತ್ತೀಚೆಗೆ ವಿದ್ಯಾರ್ಥಿ ಭವನ ಹೋಟೆಲ್‌ನ ಮತ್ತೊಂದು ಬ್ರಾಂಚ್ ಮಲ್ಲೇಶ್ವರದಲ್ಲೂ ತೆರೆಯಲಿದೆ ಎಂದು ತಿಳಿದುಬಂದಿತ್ತು. ಈ ಕುರಿತು ಜನರಲ್ಲಿ ಹಲವು ಕುತೂಹಲ ಮೂಡಿತ್ತು ಹಾಗೂ ಸಾರ್ವಜನಿಕರಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಆದರೆ ಈ ಬಗ್ಗೆ ವಿದ್ಯಾರ್ಥಿ ಭವನ ಹೋಟೆಲ್ ಮಾಲೀಕ ಅರುನ್ ಅಡಿಗ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕಳೆದ 8 ದಶಕಗಳಿಂದ ನಾಡಿನ ಜನರಿಗೆ ರುಚಿರುಚಿಯಾದ ದೋಸೆಯನ್ನು ಉಣಬಡಿಸುತ್ತಿರುವ ವಿದ್ಯಾರ್ಥಿ ಭವನ ಹೋಟೆಲ್‌ನ ಕಥೆಯನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ. ಈ ವಿದ್ಯಾರ್ಥಿ ಭವನದ ನಾಟಕವನ್ನು ಖ್ಯಾತ ನಾಟಕ ರಚನಾಕಾರ ರಾಜೇಂದ್ರ ಕಾರಂತರು ರಚಿಸಿದ್ದಾರೆ. ಹಾಗೂ ಇದನ್ನು ಅರ್ಜುನ್ ಕಬ್ಬಿಣ ನಿರ್ದೇಶಿಸಿದ್ದಾರೆ. ಮೇ 6 ರಿಂದ 8ರವರೆಗೆ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಪೋಸ್ಟರ್‌ನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹಾಗೂ ಹಿರಿಯ ರಂಗಕರ್ಮಿ ಕಪ್ಪಣ್ಣ ಅನಾವರಣಗೊಳಿಸಿದರು.
ವಿದ್ಯಾರ್ಥಿ ಭವನ ಹೋಟೆಲ್ ಕಳೆದ 79 ವರ್ಷಗಳಿಂದ ರುಚಿಯಾದ ದೋಸೆಗೆ ಮನೆಮಾತಾಗಿದ್ದು ಸಾಕಷ್ಟು ಅವಿಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ಅನೇಕ ಕವಿಗಳು, ಸಾಹಿತಗಳು, ಚಿತ್ರರಂಗದವರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ. ವಿದ್ಯಾರ್ಥಿ ಭವನದ ಆವರಣದಲ್ಲಿ ಈ ರೀತಿಯ ನೂರಾರು ಕಥೆಗಳಿವೆ. ಇವುಗಳನ್ನು ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಈ ನಾಟಕ ಪ್ರದರ್ಶಿಲಾಗುತ್ತಿದೆ ಎಮದು ವಿದ್ಯಾರ್ಥಿ ಭವನದ ತಂಡ ತಿಳಿಸಿದೆ.
ಪ್ರದರ್ಶನದ ವೇಳಾಪಟ್ಟಿ:
- ಮೇ 6, ಶುಕ್ರವಾರ – ಸಂಜೆ 6 ಗಂಟೆ
- ಮೇ 7, ಶನಿವಾರ- ಸಂಜೆ 6 ಗಂಟೆ
- ಮೇ 8, ಭಾನುವಾರ- ಬೆಳಿಗ್ಗೆ 11:30ಕ್ಕೆ ಹಾಗೂ ಸಂಜೆ 6 ಗಂಟೆಗೆ (ಒಟ್ಟು 2 ಪ್ರದರ್ಶನ)
ಸ್ಥಳ: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರ.
ಆಸಕ್ತರು ಬುಕ್ ಮೈ ಶೋ ಮೂಲಕ ಮುಂಚಿತವಾಗಿ ಟಿಕೆಟ್ ಪಡೆಯಬಹುದು ಅಥವಾ ವಿದ್ಯಾರ್ಥಿ ಭವನದ ಕೌಂಟರ್‌ನಲ್ಲಿ ಕೂಡ ಟಿಕೆಟ್ ಪಡೆಯಬಹುದು.
ಇದನ್ನೂ ಓದಿ: ಆರ್. ರಾಜು, ಸುಭಾಷ್ ಚಂದ್ರ ಸೇರಿ ಆರು ಕಲಾವಿದರಿಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ