ಬೆಂಗಳೂರು: ಬೆಂಗಳೂರಿನ ಐಡೆಂಟಿಟಿ ಎಂಬಂತೆ ಗುರುತಿಸಿಕೊಂಡಿರುವ ಜನಪ್ರಿಯ ಫುಡ್ ಜಾಯಿಂಟ್ ಗಾಂಧಿ ಬಜಾರ್‌ನ ವಿದ್ಯಾರ್ಥಿ ಭವನ (Vidyarthi Bhavan). ರಾಜಧಾನಿಗೆ ಬಂದವರು ಒಮ್ಮೆಯಾದರೂ ವಿದ್ಯಾರ್ಥಿ ಭವನಕ್ಕೆ ಹೋಗದೆ ಇರುವುದಿಲ್ಲ. ಇಂಥ ಆಕರ್ಷಕ ಹೋಟೆಲ್ ಈಗ ಹೊಸ ರೂಪ ಪಡೆದುಕೊಂಡಿದೆ. ತನ್ನ ಪಾರಂಪರಿಕ ಶೈಲಿಯೊಂದಿಗೆ ಗಮನ ಸೆಳೆಯುತ್ತಿರುವ ಈ ರೆಸ್ಟೋರೆಂಟ್ ಈಗ ಹೊಸ ವಿನ್ಯಾಸಗಳೊಂದಿಗೆ ಗಮನ ಸೆಳೆಯುತ್ತಿದೆ.
ವಿದ್ಯಾರ್ಥಿ ಭವನಕ್ಕೆ ದೊಡ್ಡ ಇತಿಹಾಸವೇ ಇದೆ. 1943ರಲ್ಲಿ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ (Gandhi Bazar in Basavanagudi) ಆರಂಭಗೊಂಡ ಈ ಹೋಟೆಲ್ 80 ವರ್ಷಗಳ ಬಳಿಕವೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇದಕ್ಕೆ ಕಾರಣ ಅಲ್ಲಿನ ರುಚಿಕರ ಮಸಾಲೆ ದೋಸೆ (Vidyarthi Bhavan Masala dosa) ಮತ್ತು ಘಮಘಮಿಸುವ ಫಿಲ್ಟರ್ ಕಾಫಿ (Vidyarthi Bhavan).
ಉಡುಪಿಯ ವೆಂಕಟರಮಣ ಉರಾಳರು ಸ್ಥಾಪಿಸಿದ ಈ ಹೋಟೆಲ್‌ಗೆ ವಿದ್ಯಾರ್ಥಿ ಭವನ ಎಂಬ ಹೆಸರು ಬರುವುದಕ್ಕೂ ಒಂದು ಒಂದು ಕಥೆ ಇದೆ. ಮೊದಲು ಈ ಹೋಟೆಲ್‌ಗೆ ಹೆಸರು ಇರಲಿಲ್ಲ. ಈ ಭಾಗದಲ್ಲಿ ಶಾಲೆ ಮತ್ತು ಕಾಲೇಜುಗಳು ಇದ್ದಿದ್ದರಿಂದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಈ ಹೋಟೆಲ್ ಆರಂಭಿಸಲಾಗಿತ್ತು. ಹೀಗಾಗಿ ವಿದ್ಯಾರ್ಥಿ ಭವನ ಎಂಬ ಹೆಸರು ಇಡಲಾಯಿತು. ಅಲ್ಪ ಕಾಲದಲ್ಲೇ ಜನಪ್ರಿಯತೆಯನ್ನು ಗಳಿಸಿದ ವಿದ್ಯಾರ್ಥಿ ಭವನವನ್ನು ಮುಂದೆ ವೆಂಕಟರಮಣ ಉರಾಳರ ತಮ್ಮ ಪರಮೇಶ್ವರ ಉರಾಳ ಅವರು ಮುಂದುವರಿಸಿದರು.
ಮುಚ್ಚುವ ಹೋಟೆಲ್‌ಗೆ ಜೀವದಾನ ನೀಡಿದ್ದು ನಾರಾಯಣಮೂರ್ತಿ!
ನಿಜವೆಂದರೆ, ಈ ಹೋಟೆಲ್ ಇವತ್ತು ಕೂಡಾ ಉಳಿದಿದೆ ಎಂದರೆ ಅದಕ್ಕೆ ಕಾರಣ ಇನ್ಫೋಸಿಸ್ ಸ್ಥಾಪಕರಾದ ನಾರಾಯಣ ಮೂರ್ತಿ ಅವರು ಎಂದು ಹೇಳಲಾಗುತ್ತಿದೆ. ಪರಮೇಶ್ವರ ಉರಾಳರು 1970ರಲ್ಲಿ ಈ ಹೋಟೆಲನ್ನು ಕುಂದಾಪುರದ ರಾಮಕೃಷ್ಣ ಅಡಿಗರಿಗೆ ಮಾರಾಟ ಮಾಡಿದ್ದರು. ಮುಂದೆ ಹಲವು ವರ್ಷ ಇದು ಚೆನ್ನಾಗಿಯೇ ನಡೆಯಿತು. ಆದರೆ, ರಾಮಕೃಷ್ಣ ಅಡಿಗರಿಗೆ ವಯಸ್ಸಾದಾಗ ಅದನ್ನು ನೋಡಿಕೊಳ್ಳುವುದು ಕಷ್ಟವಾಯಿತು. ಅವರ ಮಕ್ಕಳು ಒಳ್ಳೆಯ ಉದ್ಯೋಗದಲ್ಲಿದ್ದರು. ಹೀಗಾಗಿ ಈ ಹೋಟೆಲ್‌ನ್ನು ಪಡೆದು ಒಂದು ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಿಸುವುದು ಉತ್ತಮ ಎಂಬ ಅಭಿಪ್ರಾಯ ಬಂತು. ಆಗ ಅದು ಇನ್ಫೋಸಿಸ್‌ನ ನಾರಾಯಣ ಮೂರ್ತಿ ಅವರ ಕಿವಿಗೆ ಬಿತ್ತು. ನಾರಾಯಣ ಮೂರ್ತಿ ಅವರು ರಾಮಕೃಷ್ಣ ಅಡಿಗರ ಮಗ ಅರುಣ್ ಅಡಿಗರ ಜತೆ ಮಾತನಾಡಿ ಹೋಟೆಲ್ ಉದ್ಯಮ ಮುಂದುವರಿಸುವಂತೆ ಸಲಹೆ ನೀಡಿದರು ಎನ್ನಲಾಗಿದೆ. ಅದರಂತೆ ಅರುಣ್ ಅವರು ತಮ್ಮ ಉದ್ಯೋಗ ಬಿಟ್ಟು ವಿದ್ಯಾರ್ಥಿ ಭವನವನ್ನು ನೋಡಿಕೊಳ್ಳುತ್ತಿದ್ದಾರೆ. ಹೊಸ ಹೊಸ ಅನ್ವೇಷಣೆಗಳ ಮೂಲಕ ಜನಮನ ಗೆಲ್ಲುತ್ತಿದ್ದಾರೆ.
ವಿದ್ಯಾರ್ಥಿ ಭವನದಲ್ಲಿ ಕ್ಯೂನಲ್ಲಿ ನಿಲ್ಲುವುದೇ ಖುಷಿ!
ನಿಜವೆಂದರೆ ವಿದ್ಯಾರ್ಥಿ ಭವನ ಒಂದು ಸಣ್ಣ ಹೋಟೆಲ್. ನೀವು ಅಲ್ಲಿ ಒಂದು ದೋಸೆ ತಿನ್ನಬೇಕು ಎಂದರೆ ಅರ್ಧ ಗಂಟೆಯಾದರೂ ಕಾಯಬೇಕು. ಆದರೆ, ಜನರು ಕಾಯುವಿಕೆಯಲ್ಲೇ ಖುಷಿಪಡುತ್ತಾರೆ. ಅದೆಷ್ಟೋ ಸಾಹಿತಿಗಳು, ಸಿನಿಮಾ ನಟ-ನಟಿಯರು, ರಾಜಕಾರಣಿಗಳಿಗೆ ಇದೊಂದು ಫೇವರಿಟ್ ತಾಣವಾಗಿ ಮಾರ್ಪಟ್ಟಿದೆ. ಕೆಲವರಿಗೆ ಅಲ್ಲಿಗೆ ಹೋಗಿ ಒಂದು ಫೋಟೊ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದೇ ಘನತೆಯ ಸಂಕೇತ.
ಇಲ್ಲಿ ತುಪ್ಪ, ದೋಸೆ, ಮಸಾಲೆ ದೋಸೆಯಲ್ಲದೆ, ಇಡ್ಲಿ, ಖಾರಾಬಾತ್, ಪೂರಿ ಸಾಗು, ರವೆ ವಡೆ, ಕೇಸರಿ ಬಾತ್ ಕೂಡಾ ಭಾರಿ ಫೇಮಸ್. ಇಲ್ಲಿನ ಫುಡ್‌ಗೆ ಯಾವುದೇ ಕೃತಕ ವಸ್ತುಗಳನ್ನು ಬೆರೆಸುವುದಿಲ್ಲ. ಬೆಣ್ಣೆಯೂ ಶುದ್ಧ, ತುಪ್ಪವೂ ಶುದ್ಧ. ಬೆಣ್ಣೆಯನ್ನು ಹಳ್ಳಿಯ ಭಾಗದಿಂದಲೇ ತರಿಸಲಾಗುತ್ತದೆ. ಹೀಗಾಗಿ ನೀವು ಇಲ್ಲಿ ದೋಸೆ ತಿಂದರೆ ಕೈ ತೊಳೆದರೂ ಪರಿಮಳ ಹಾಗೇ ಇರುತ್ತದೆ.
ಈ ಹೋಟೆಲ್‌ನಲ್ಲಿ ಸರ್ವ್ ಮಾಡುವವರು ಒಮ್ಮೆಗೇ 14 ತಟ್ಟೆಗಳನ್ನು ಹಿಡಿದುಕೊಂಡು ಬಂದು ಸರ್ವ್ ಮಾಡುವುದು ವಿಶೇಷ. ಅದರ ವಿಡಿಯೋಗಳು ಗಮನ ಸೆಳೆದಿವೆ. ಈ ವಿಡಿಯೊವನ್ನು ಸ್ವತಃ ಉದ್ಯಮಿ ಆನಂದ ಮಹೀಂದ್ರಾ ಅವರೇ ಹಂಚಿಕೊಂಡಿದ್ದರಿಂದ ವಿದ್ಯಾರ್ಥಿ ಭವನ ದೇಶಾದ್ಯಂತ ಮಿರಮಿರ ಮಿಂಚಿತ್ತು.
ಈಗ ನಡೆದಿರುವ ಬದಲಾವಣೆ ಏನು?
ಮೊದಲು ಇಲ್ಲಿ ಅಲ್ಲೇ ತಿನ್ನುವವರಿಗೆ ಮತ್ತು ಪಾರ್ಸೆಲ್‌ಗೆ ಒಂದೇ ಕೌಂಟರ್ ಇತ್ತು. ಈಗ ಪಾರ್ಸೆಲ್‌ಗೆ ಪ್ರತ್ಯೇಕ ಕೌಂಟರ್ ಮಾಡಲಾಗಿದೆ. ಹೀಗಾಗಿ ಕಾಯುವಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
ಹೋಟೆಲ್‌ನಲ್ಲಿರುವ ಹೊಸ ಆಕರ್ಷಣೆ ಏನೆಂದರೆ, ಹೋಟೆಲ್‌ನ ಪ್ರವೇಶ ದ್ವಾರದ ಪಕ್ಕದ ಗೋಡೆಯಲ್ಲಿ ಬರೆಯಲಾಗಿರುವ ಆಕರ್ಷಕ ಚಿತ್ರಗಳು. ಕಳೆದ ಕೆಲವು ದಿನಗಳಿಂದ ಟೀಮ್ ಇನ್‌ಕ್ರೇಜ್ ಎಂಬ ತಂಡ ಹೋಟೆಲ್‌ನ ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸುತ್ತಿತ್ತು, ಅದೀಗ ಪೂರ್ಣಗೊಂಡಿದೆ.
ಈ ಚಿತ್ರಗಳು ಪೂರ್ಣಗೊಂಡಾಗ ಅಲ್ಲಿ ಇಡೀ ಬಸವನ ಗುಡಿಯೇ ಅರಳಿಕೊಂಡಿದೆ. ಬಸವನ ಗುಡಿಯ ಚಾರಿತ್ರಿಕ ಚೆಲುವು, ಈಗಿನ ಬಣ್ಣ, ಬ್ಯೂಗಲ್ ರಾಕ್ ಬೆಟ್ಟ.. ಹೀಗೆ ಎಲ್ಲವನ್ನೂ ಒಳಗೊಂಡ ದೃಶ್ಯಗಳು ರೇಖಾಚಿತ್ರಗಳಲ್ಲಿ ಜೀವ ತಳೆದಿದೆ. ಇಲ್ಲಿ ಬುಲ್ ಟೆಂಪಲ್‌ನ ದೊಡ್ಡ ಗಣೇಶ ಇದ್ದಾನೆ, ಕೆಂಪೇಗೌಡರಿದ್ದಾರೆ, ಕಡಲೆ ಪರಿಷೆ ಸೇರಿದಂತೆ ಸಾಂಸ್ಕೃತಿಕ ಅಸ್ಮಿತೆಗಳಿವೆ.
ಈ ಹೋಟೆಲ್‌ಗೆ ಬಂದು ಹೋದ ದ.ರಾ. ಬೇಂದ್ರೆ, ನಿಸಾರ್ ಅಹಮದ್ ಸೇರಿದಂತೆ ಹಲವು ಸಾಹಿತಿಗಳ ಚಿತ್ರಗಳಿವೆ.
ನಿಮ್ಮ ಪ್ರತಿಭೆ ಮತ್ತು ಶ್ರದ್ಧೆಗಳು ಹೋಟೆಲ್‌ಗೆ ಹೊಸ ಲವಲವಿಕೆಯನ್ನು ತಂದುಕೊಟ್ಟಿವೆ. ನಮ್ಮ ಪುಟ್ಟ ಜಾಗವನ್ನು ನೀವು ಸಮೃದ್ಧಗೊಳಿಸಿದ್ದೀರಿ. ಆ ಮೂಲಕ ಎಲ್ಲರನ್ನೂ ಇಲ್ಲಿಗೆ ಬರುವಂತೆ ಪ್ರೇರೇಪಿಸುತ್ತಿದ್ದೀರಿ ಎಂದು ವಿದ್ಯಾರ್ಥಿ ಭವನದ ಫೇಸ್‌ಬುಕ್‌ನಲ್ಲಿ ಬರೆಯಲಾಗಿದೆ.
ಇದನ್ನು ಓದಿ: ಒಲಿಂಪಿಕ್ಸ್‌ಗೆ ಸೇರಿಸಿ: ವಿದ್ಯಾರ್ಥಿ ಭವನದ ವೇಯ್ಟರ್ ಬಗ್ಗೆ ಆನಂದ್ ಮಹೀಂದ್ರ ಟ್ವೀಟ್
ಹಾಗಿದ್ದರೆ ಅಲ್ಲಿಗೆ ಯಾವಾಗ ಹೋಗಬೇಕು?
ಇಷ್ಟೆಲ್ಲ ಕೇಳಿದ ಮೇಲೆ ನಿಮಗೆ ಅಲ್ಲಿಗೊಮ್ಮೆ ಹೋಗಿ ಚಿತ್ರಗಳನ್ನು ನೋಡಬೇಕು, ಒಂದು ದೋಸೆ, ಫಿಲ್ಟರ್ ಕಾಫಿ ಕುಡಿಯಬೇಕು ಅನಿಸಿದರೆ ಖಂಡಿತವಾಗಿಯೂ ಹೋಗಿ. ಹೋಗುವ ಮುನ್ನ ಸಮಯ ನೋಡಿಕೊಳ್ಳಿ.
ಸೋಮವಾರದಿಂದ ಗುರುವಾರ: ಬೆಳಗ್ಗೆ 6.30 ರಿಂದ 11.30, ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ
ಶುಕ್ರವಾರ ವಾರದ ರಜಾ ದಿನ
ಶನಿವಾರ ಮತ್ತು ಭಾನುವಾರ: ಬೆಳಗ್ಗೆ 6.30ರಿಂದ 12, ಮಧ್ಯಾಹ್ನ 1.30ರಿಂದ ರಾತ್ರಿ 8
ಅಂದ ಹಾಗೆ ಮಲ್ಲೇಶ್ವರದಲ್ಲೂ ಹೊಸ ಬ್ರಾಂಚ್ ಓಪನ್ ಆಗಿದೆ.