Site icon Vistara News

ಚಾಮರಾಜಪೇಟೆ ಮೈದಾನ ಜಟಾಪಟಿ: ಕೋರ್ಟ್‌ ಕಟಕಟೆ ಏರುವ ಸಾಧ್ಯತೆ

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದ ಇನ್ನೂ ಮುಂದುವರಿದಿದೆ. ಹಿಂದೂಪರ ಸಂಘಟನೆಗಳಿಂದ ಈ ಜಾಗದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಅವಕಾಶ ಕೋರಿ ಬಿಬಿಎಂಪಿಗೆ ಮನವಿ ಮಾಡಲಾಗಿದ್ದು, ಮಂಗಳವಾರ ಮದ್ಯಾಹ್ನದೊಳಗೆ ನಿರ್ಧಾರ ಕೈಗೊಳ್ಳುವಂತೆ ಗಡುವು ನೀಡಿದ್ದಾರೆ. ಇಲ್ಲವಾದರೆ ಕೋರ್ಟ್‌ ಮೊರೆ ಹೋಗುವುದಾಗಿ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಎಸ್. ಭಾಸ್ಕರನ್ ಹೇಳಿಕೆ ನೀಡಿದ್ದಾರೆ.

ಚಾಮರಾಜಪೇಟೆ ಮೈದಾನ ಕೇವಲ ಮುಸ್ಲಿಮರ ಜಾಗವಲ್ಲ, ಅದು ಸಾರ್ವಜನಿಕರ ಸ್ವತ್ತು ಎಂಬುದರ ಕುರಿತು ವಿವಾದ ನಡೆದಿತ್ತು. ಆಗ ಬಿಬಿಎಂಪಿ ವಿಶೇಷ ಆಯುಕ್ತರಾದ ಹರೀಶ್‌ ಕುಮಾರ್‌ ಮಾತನಾಡಿ ಸ್ಪಷ್ಟನೆ ನೀಡಿದ್ದರು. ʼಈ ಆಸ್ತಿಯು ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತರ ವ್ಯಾಪ್ತಿಗೆ ಒಳಪಡುತ್ತದೆ. ಅವರ ಜತೆಗೆ ಮಾತನಾಡಿ ನಾನು ವಿವರ ಪಡೆದಿದ್ದೇನೆ. ಅವರು ಹೇಳಿದಂತೆ ಈ ಆಸ್ತಿ ಬಿಬಿಎಂಪಿಗೆ ಸೇರಿದ್ದು. ಇದು ಆಟದ ಮೈದಾನ. ಈ ಮೈದಾನದ ಕುರಿತು ನ್ಯಾಯಾಲಯದ ಆದೇಶವೊಂದಿದೆ. ಅದರಂತೆ, ವರ್ಷಕ್ಕೆ ಎರಡು ಬಾರಿ ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಬೇಕು. ಉಳಿದಂತೆ ವಲಯ ಆಯುಕ್ತರ ಅನುಮತಿ ಪಡೆದು ಯಾವುದೇ ಕಾರ್ಯಕ್ರಮಗಳಿಗೆ ಮೈದಾನವನ್ನು ಬಳಕೆ ಮಾಡಬಹುದುʼ ಎಂದು ಹೇಳಿದ್ದರು. ಈ ಮೂಲಕ ವಿವಾದ ಬಹುತೇಕ ಬಗೆಹರಿದಿತ್ತು.

ಈ ಬೆನ್ನಲ್ಲೇ ಆಗಸ್ಟ್ 14 ಮತ್ತು 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲು ವಿಶ್ವ ಸನಾತನ ಪರಿಷತ್ ಅನುಮತಿ ಕೇಳಿತ್ತು. ಜೂನ್ 7ರಂದು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಆದರೆ, ಮನವಿ ನೀಡಿ ಒಂದು ವಾರ ಕಳೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿಶ್ವ ಸನಾತನ ಪರಿಷತ್‌ ಆಕ್ರೋಶ ವ್ಯಕ್ತಪಡಿಸಿದೆ.

ಬಿಬಿಎಂಪಿ ಅನುಮತಿ ನೀಡದಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದೂರು ನೀಡುತ್ತೇವೆ ಎಂದು ವಿಶ್ವ ಸನಾತನ ಪರಿಷತ್‌ನ ಅಧ್ಯಕ್ಷ ಎಸ್. ಭಾಸ್ಕರನ್ ತಿಳಿಸಿದ್ದಾರೆ. ಅವಶ್ಯಕತೆ ಇದ್ದರೆ ಕೋರ್ಟ್‌ಗೆ ಕೂಡ ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಒಂದು ವಾರದಿಂದ ಸಿಎಂ ರಾಜ್ಯಸಭೆ, MLC ಚುನಾವಣೆ ಕಾರ್ಯಗಳಲ್ಲಿ ವ್ಯಸ್ಥರಿದ್ದಾರೆ ಹಾಗಾಗಿ ಭೇಟಿ ತಡವಾಗುತ್ತಿದೆ. ಇನ್ನು ಎರಡು ದಿನಗಳಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ನೀಡುತ್ತೇವೆ ಎಂದು ಬಾಸ್ಕರನ್‌ ಹೇಳಿದ್ದಾರೆ.

ಬಿಬಿಎಂಪಿ ಆಸ್ತಿ ಎಂದ ಮೇಲೆ ಎಲ್ಲರಿಗೂ ಅನುಮತಿ ಕೊಡಬೇಕು. ಚಾಮರಾಜಪೇಟೆ ಮೈದಾನ ಸರ್ಕಾರದ ಆಸ್ತಿಯೇ ಹೊರತು ಮುಸಲ್ಮಾನರದ್ದಲ್ಲ. ರಾಷ್ಟ್ರದ ಮೇಲೆ ಪ್ರೀತಿ ಇದ್ದರೆ ಅವರೂ ಧ್ವಜಾರೋಹಣದಲ್ಲಿ ಪಾಲ್ಗೊಳ್ಳಲಿ ಎಂದು ಭಾಸ್ಕರನ್‌ ಹೇಳಿದ್ದಾರೆ.

ಅನುಮತಿ ಕಷ್ಟ ಎಂದ ಅಧಿಕಾರಿ

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್, ʼಹಿಂದೂಪರ ಸಂಘಟನೆಗಳ ಮನವಿಗೆ ಅನುಮತಿ ಸಿಗುವುದು ಕಷ್ಟʼ ಎಂದು ಹೇಳಿದ್ದಾರೆ. ʼನಮ್ಮ ದಾಖಲೆಗಳಲ್ಲಿ ಬಿಬಿಎಂಪಿ ಆಟದ ಮೈದಾನ ಎಂದು ಇದೆ. ಆಟ ಆಡಲು ಯಾವುದೇ ಅಭ್ಯಂತರ ಇಲ್ಲ, ಆದರೆ ಸಂಘಟನೆಗಳು ಸ್ವಾತಂತ್ರ್ಯ ದಿನೋತ್ಸವ ಹಾಗೂ ಯೋಗಾ ದಿನಾಚರಣೆಗೆ ಅನುಮತಿ ಕೇಳಿದ್ದಾರೆ. ಚಾಮರಾಜಪೇಟೆ ಮೈದಾನ ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ವಕ್ಫ್‌ ಬೋರ್ಡ್‌ನಿಂದಲೂ ನಮಗೆ ಪತ್ರ ಬಂದಿದೆ. ಇದನ್ನು ಪರಿಶೀಲನೆ ಮಾಡಲು ಮುಖ್ಯ ಕಚೇರಿಗೆ ಕಳುಹಿಸಿದ್ದೇನೆʼ ಎಂದು ಶ್ರೀನಿವಾಸ್ ಹೇಳಿದ್ದಾರೆ.

ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನ ಸರ್ವ ಜನಾಂಗದ ಸ್ವತ್ತು!

Exit mobile version