Site icon Vistara News

ವಿಸ್ತಾರ ಸಂಪಾದಕೀಯ: ಕ್ರಿಕೆಟ್ ವರ್ಲ್ಡ್‌ ಕಪ್‌ನಲ್ಲಿ ಭಾರತದ ಅಜೇಯ ಓಟ; ಟ್ರೋಫಿ ಗೆಲ್ಲಲು ಎರಡೇ ಹೆಜ್ಜೆ ಬಾಕಿ

World Cup Cricket 2023 Indian team

ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ (ICC World Cup 2023) ರೌಂಡ್ ರಾಬಿನ್‌ ಲೀಗ್‌ನ ಕೊನೆಯ ಪಂದ್ಯದಲ್ಲಿ ನೆದರ್ಲ್ಯಾಂಡ್ ವಿರುದ್ಧ ಭಾರತವು ಗೆಲ್ಲುವ ಮೂಲಕ, ಅಜೇಯವಾಗಿ ಉಳಿದು ವಿಶಿಷ್ಟ ಸಾಧನೆಯನ್ನು ಮಾಡಿದೆ. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅರ್ಧ ಶತಕಗಳನ್ನು ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕರ್ನಾಟಕದವರೇ ಆದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಕೆ ಎಲ್ ರಾಹುಲ್ ಅವರು ಶತಕಗಳನ್ನು ಸಿಡಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದರು. ಭಾರತವು ವಿಶ್ವ ಕಪ್‌ಗೆ ಮುತ್ತಿಕ್ಕಲು ಇನ್ನು ಎರಡು ಮೆಟ್ಟಿಲು ಮಾತ್ರ ಬಾಕಿ ಇದೆ. ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನಿಯಾಗಿರುವ ಭಾರತವು, ನಾಲ್ಕನೇ ತಂಡವಾಗಿ ನಾಕೌಟ್ ಹಂತ ತಲುಪಿರುವ ನ್ಯೂಜಿಲೆಂಡ್ ವಿರುದ್ಧ ನವೆಂಬರ್ 15ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಆಡಲಿದೆ. 2019ರ ವಿಶ್ವ ಕಪ್ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿ ಫೈನಲ್‌ನಲ್ಲಿ ಭಾರತವು ಸೋಲು ಕಂಡಿತ್ತು. ಹಾಗಾಗಿ, ಒಂದು ರೀತಿಯಲ್ಲಿ ಇದು ಸೇಡಿನ ಪಂದ್ಯವೂ ಹೌದು. ಅಧಿಕಾರಯುತವಾಗಿ ಗೆಲವು ಸಾಧಿಸುತ್ತ ಬಂದಿರುವ ಭಾರತೀಯ ತಂಡವು, ಫೈನಲ್ ಪಂದ್ಯವನ್ನು ಗೆದ್ದು, ಮೂರನೇ ಬಾರಿಗೆ ವಿಶ್ವ ಕಪ್ ಎತ್ತಿಹಿಡಿಯಲಿ ಎಂಬುದು ಭಾರತೀಯ ಕ್ರೀಡಾಭಿಮಾನಿಗಳ ಆಸೆ ಮತ್ತು ಹಾರೈಕೆ(Vistara Editorial).

ಈ ಕೂಟದಲ್ಲಿ ಹತ್ತು ತಂಡಗಳು ಭಾಗವಹಿಸಿದ್ದು, ಮೊದಲ ಹಂತದಲ್ಲಿ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪ್ರತೀ ತಂಡವೂ ಪ್ರತೀ ತಂಡವನ್ನು ಎದುರಿಸಿದವು. ನವೆಂಬರ್ 19ರತನಕ ಒಟ್ಟು 48 ಪಂದ್ಯಗಳು ನಡೆಯಲಿವೆ. ಬೆಂಗಳೂರು ಸೇರಿದಂತೆ ಒಟ್ಟು ಹತ್ತು ಕ್ರಿಕೆಟ್ ತಾಣಗಳು ಈ ಐತಿಹಾಸಿಕ ಪಂದ್ಯಗಳಿಗೆ ಸಾಕ್ಷಿಯಾಗಿವೆ. ಅದರಲ್ಲಿಯೂ ಅಹಮದಾಬಾದಿನ ಅತ್ಯಂತ ವೈಭವದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭದ ಪಂದ್ಯ ನಡೆದರೆ, ಫೈನಲ್ ಪಂದ್ಯ ಕೂಡ ಅಲ್ಲಿಯೇ ನಡೆಯಲಿದೆ. ಭಾರತ, ಪಾಕ್ ನಡುವಿನ ಪಂದ್ಯ ಇಲ್ಲಿಯೇ ನಡೆದಿದೆ. 1,35,000 ಪ್ರೇಕ್ಷಕರು ತುಂಬಿ ತುಳುಕುವ ಜಗತ್ತಿನ ಅತೀ ದೊಡ್ಡ ಸ್ಟೇಡಿಯಂ ಇದು. ಜಗತ್ತಿನಲ್ಲಿ ಅತೀ ಹೆಚ್ಚು ಕ್ರಿಕೆಟ್ ಅಭಿಮಾನಿಗಳು ಇರುವ ದೇಶ ಅದು ಭಾರತ. ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್, ಜಗತ್ತಿನಾದ್ಯಂತದ ಕ್ರಿಕೆಟ್‌ ಆಟಗಾರರನ್ನು ಐಪಿಎಲ್‌ ಹೆಸರಿನಲ್ಲಿ ಸಾಕುತ್ತಿರುವ ದೇಶ ಎಂದರೆ ಭಾರತ. ಇಲ್ಲಿ ಕ್ರಿಕೆಟ್‌ಗಾಗಿ ಹುಟ್ಟುವ ಹಣ ಅಷ್ಟಿಷ್ಟಲ್ಲ. ದೊಡ್ಡ ಮೊತ್ತದ ಹಣ ಇದ್ದಾಗ ವೈಭವ, ಅದ್ಧೂರಿತನ, ನಿರೀಕ್ಷೆಗಳು ಸಾಕಷ್ಟು ಇರುತ್ತವೆ. ಈ ನಿರೀಕ್ಷೆಗಳನ್ನು ಈಡೇರಿಸುವ ಸಮಯ ಭಾರತೀಯ ಕ್ರಿಕೆಟ್ ತಂಡಕ್ಕೆ ಈಗ ಎದುರಾಗಿದೆ.

ಇಡೀ ಜಗತ್ತಿನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಅತ್ಯಂತ ಶ್ರೀಮಂತ ಕ್ರೀಡಾ ಮಂಡಳಿ ಎನಿಸಿಕೊಂಡಿದೆ. ಅದಕ್ಕೆ ತಕ್ಕಂತೆ ಭಾರತೀಯ ಕ್ರಿಕೆಟ್ ತಂಡ ಕೂಡ ಅಂತಾರಾಷ್ಟ್ರೀಯ ಮಟ್ಟವಾಗಿ ಅದೇ ಚಾರ್ಮ್ ಉಳಿಸಿಕೊಂಡಿದೆ. ಆದರೆ, ಐಸಿಸಿ ಟ್ರೋಫಿಗಳನ್ನು ಮಾತ್ರ ಗೆಲ್ಲುವಲ್ಲಿ ಹಿಂದೆ ಬೀಳುತ್ತಲೇ ಇದೆ. 1983ರಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ವರ್ಲ್ಡ್ ಕಪ್ ಗೆದ್ದ ಭಾರತವು, ಮತ್ತೆ ಅಂಥದ್ದೇ ಸಾಧನೆಯನ್ನು ಮಾಡಲು 2011ರವರೆಗೂ ಕಾಯಬೇಕಾಯಿತು! ಇದರ ನಡುವೆ ಚೊಚ್ಚಲ ಟಿ20 ಕ್ರಿಕೆಟ್ ವರ್ಲ್ಡ್ ಕಪ್ ಅನ್ನು ಭಾರತೀಯ ತಂಡವು 2007ರಲ್ಲಿ ತನ್ನ ಮುಡಿಗೇರಿಸಿಕೊಂಡಿತು. ಆ ಬಳಿಕ, ಮತ್ತೆ ಟಿ20 ಕಪ್ ಗೆಲ್ಲಲು ಈವರೆಗೂ ಸಾಧ್ಯವಾಗಿಲ್ಲ! ತೀರಾ ಇತ್ತೀಚಿಗೆ ಅಂದರೆ 2013ರಲ್ಲಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ತಂಡವು ಟ್ರೋಫಿ ಗೆದ್ದಿತ್ತು. ಆ ಬಳಿಕದಿಂದ ನಡೆದ ಹಲವಾರು ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲಲು ವಿಫಲಗೊಂಡಿತು. ಹೀಗಾಗಿ 10 ವರ್ಷವಾದರೂ ಭಾರತ ತಂಡದ ಐಸಿಸಿ ಟ್ರೋಫಿಯ ಬರ ನೀಗುತ್ತಲೇ ಇಲ್ಲ. ಈ ಎಲ್ಲ ಕಾರಣಕ್ಕಾಗಿ ತವರು ನೆಲದಲ್ಲೇ ನಡೆಯುತ್ತಿರುವ ಈ ವಿಶ್ವ ಕಪ್ ಪಂದ್ಯಾವಳಿ ಭಾರೀ ಮಹತ್ವವನ್ನು ಪಡೆದುಕೊಂಡಿದೆ.

ಭಾರತೀಯರ ನಿರೀಕ್ಷೆಯಂತೆ ನಮ್ಮ ಕ್ರಿಕೆಟ್ ತಂಡವು ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ನಾಯಕನಾಗಿ ರೋಹಿತ್ ಶರ್ಮಾ ಯಶಸ್ವಿಯಾಗುತ್ತಿದ್ದಾರೆ; ಬ್ಯಾಟರ್‌ಗಳು ಮತ್ತು ಬೌಲಿಂಗ್‌ ಯುನಿಟ್ ತಮ್ಮ ಪಾಲಿನ ಕೆಲಸವನ್ನು ಅಚ್ಚಕಟ್ಟಾಗಿ ಮಾಡುತ್ತಿದೆ. ಒಂದು ತಂಡವಾಗಿ ಭಾರತವು ಈವರೆಗೆ ಅದ್ಭುತ ಪ್ರದರ್ಶನವನ್ನು ತೋರುತ್ತಿದೆ. ಇದೇ ಪ್ರದರ್ಶನವನ್ನು ಫೈನಲ್‌ ಪಂದ್ಯಕ್ಕೂ ತೆಗೆದುಕೊಂಡು ಹೋದರೆ, ಭಾರತವು ಮತ್ತೊಂದು ವಿಶ್ವಕಪ್ ಎತ್ತಿ ಹಿಡಿಯುವ ಕ್ಷಣ ನಮ್ಮದಾಗಲಿದೆ. ಭಾರತೀಯ ತಂಡವು ಸೆಮಿ ಫೈನಲ್ ಗೆದ್ದು, ಫೈನಲ್ ಜಯಸಲಿ ಎಂದು ಕೋಟ್ಯಂತರ ಭಾರತೀಯ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅವರ ಪ್ರಾರ್ಥನೆ ಫಲಿಸಲಿ; ಕ್ರಿಕೆಟ್ ಗೆಲ್ಲಲಿ; ಮೂರನೇ ಬಾರಿಗೆ ವರ್ಲ್ಡ್ ಕಪ್ ನಮ್ಮದಾಗಲಿ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಇಂದೇ ಆಗೋಣ ನಾವು ವೋಕಲ್‌ ಫಾರ್‌ ಲೋಕಲ್‌

Exit mobile version