Site icon Vistara News

Voter Data | ದತ್ತಾಂಶ ಕದ್ದ ಚಿಲುಮೆ ಸಂಸ್ಥೆ ಬ್ಯಾನ್‌: ಕಪ್ಪುಪಟ್ಟಿಗೆ ಸೇರಿಸುವ ಬಿಬಿಎಂಪಿ ಆದೇಶದಲ್ಲಿ ಬಿಜೆಪಿ ಮಾಜಿ ಶಾಸಕನ ಹೆಸರು ಉಲ್ಲೇಖ

voter-data-accused chilume ngo blacklisted by bbmp

ಬೆಂಗಳೂರು: ಮತದಾನ ಜಾಗೃತಿ ಕಾರ್ಯಕ್ಕೆಂದು ಅನುಮತಿ ಪಡೆದು ದತ್ತಾಂಶ (Voter Data) ಕಳ್ಳತನ ಮಾಡುತ್ತಿದೆ ಎಂಬ ಆರೋಪ ಹೊತ್ತಿರುವ ಚಿಲುಮೆ ಸಂಸ್ಥೆಯನ್ನು ಬಿಬಿಎಂಪಿ ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದೆ. ಈ ಕುರಿತು ಬಿಬಿಎಂಪಿ ಆದೇಶ ಹೊರಡಿಸಿದ್ದು, ಆದೇಶದಲ್ಲಿ ಬಿಜೆಪಿ ಮಾಜಿ ಶಾಸಕ ನಂದೀಶ ರೆಡ್ಡಿ ಹೆಸರನ್ನೂ ಉಲ್ಲೇಖಿಸಲಾಗಿದೆ.

ಬಿಬಿಎಂಪಿಯಿಂದ ಆದೇಶ ಪಡೆದದ್ದಕ್ಕೆ ವಿರುಇದ್ಧವಾಗಿ ಸಂಸ್ಥೆ ಕಾರ್ಯನಿರ್ವಹಿಸಿದೆ. ಕೆ.ಆರ್‌. ಪುರಂ ಕ್ಷೇತ್ರದ ಅಭ್ಯರ್ಥಿಯಾಗಿದ್ದ ನಂದೀಶ್‌ ರೆಡ್ಡಿ ಅವರಿಂದ 17.50 ಲಕ್ಷ ರೂ. ದೇಣಿಗೆಯಾಗಿ ಸ್ವೀಕರಿಸಿರುವುದು ಕಂಡುಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆರವರು ಅನುಮತಿ ಪತ್ರದಲ್ಲಿನ ಷರತ್ತುಗಳಿಗೆ ವ್ಯತಿರಿಕ್ತವಾಗಿ ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡಿದ್ದರು. ನೈಜ ಬಿ.ಎಲ್.ಓ.ಗಳೆಂದು ಬಿಂಬಿಸಿಕೊಂಡು ಸಾರ್ವಜನಿಕರನ್ನು ಮೋಸಗೊಳಿಸಿರುತ್ತೀರಿ ಹಾಗೂ ರಾಜಕೀಯ ಪಕ್ಷದವರಿಂದ ದೇಣಿಗೆ ಪಡೆದು, ಪಾಲಿಕೆಯ ಅನುಮತಿ ಪತ್ರದಲ್ಲಿನ ಷರತ್ತುಗಳನ್ನು ಉಲ್ಲಂಘಿಸಿ ವಂಚನೆಯನ್ನು ಮಾಡಿರುವುದು ಕಂಡುಬಂದಿದೆ. ಈ ಸಂಸ್ಥೆಯಾಗಲೀ ಅಥವಾ ಸಂಸ್ಥೆಯಲ್ಲಿನ ನಿರ್ದೇಶಕರಿಂದ ನಡೆಸಲ್ಪಡುತ್ತಿರುವ ಇತರೆ ಯಾವುದೇ ಸಂಸ್ಥೆಗೆ ಪಾಲಿಕೆ ವತಿಯಿಂದ ಉಚಿತವಾದ ಕಾರ್ಯಕ್ರಮಗಳಿಗೆ ಅನುಮತಿ ಮತ್ತು ಪಾಲಿಕೆಯು ಪಡೆದುಕೊಳ್ಳಲು ಸೇವೆ ಮತ್ತು ಸಂಗ್ರಹಣೆ ಟೆಂಡರ್‌ಗಳಲ್ಲಿ ಭಾಗವಹಿಸುವಿಕೆಗೆ ಹಾಗೂ ಇನ್ನಿತರೆ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡದಿರುವ ಕುರಿತು ನೋಠೀಶ ಣೀಡಲಾಗಿತ್ತು. ಆದರೆ ಈವರೆಗೂ ನೋಟಿಸ್‌ಗೆ ಸಂಬಂಧಿಸಿದಂತೆ ಯಾವುದೇ ಸಮಜಾಯಿಷಿ ನೀಡಿರುವುದಿಲ್ಲವಾದ್ದರಿಂದ ನಿರ್ಧಾರ ಮಾಡಲಾಗಿದೆ.

ನೈಜ ಬಿ.ಎಲ್.ಓ ಗಳೆಂದು ಬಿಂಬಿಸಿಕೊಂಡು ಸಾರ್ವಜನಿಕರನ್ನು ಮೋಸಗೊಳಿಸಿರುವುದು ದಾಖಲೆ ಹಾಗೂ ವರದಿಗಳಿಂದ ದೃಢಪಟ್ಟಿರುವುದರಿಂದ, ಈ ಸಂಸ್ಥೆಯಾಗಲೀ, ಸಂಸ್ಥೆಯಲ್ಲಿನ ನಿರ್ದೇಶಕರಿಂದ ಅಥವಾ ಸದರಿ ಸಂಸ್ಥೆಯ ನಿರ್ದೇಶಕರುಗಳು ಸಹಭಾಗಿಯಾಗಿ ನಡೆಸಲ್ಪಡುತ್ತಿರುವ ಇತರೇ ಯಾವುದೇ ಸಂಸ್ಥೆಗೆ ಪಾಲಿಕೆ ವತಿಯಿಂದ ಉಚಿತ ಕಾರ್ಯಕ್ರಮಗಳಿಗೆ ಅನುಮತಿ ಮತ್ತು ಪಾಲಿಕೆಯು ಪಡೆದುಕೊಳ್ಳಲು ಸೇವೆ ಮತ್ತು ಸಂಗ್ರಹಣೆ ಟೆಂಡರ್‌ಗಳಲ್ಲಿ ಭಾಗವಹಿಸುವಿಕೆಗೆ ಹಾಗೂ ಇನ್ನಿತರ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡದಂತೆ ನಿರ್ಬಂಧವನ್ನು ವಿಧಿಸಿ, ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | Voter data | ಚಿಲುಮೆ ಮಾದರಿಯಲ್ಲೇ ವಿಜಯಪುರದಲ್ಲೂ ಗೋಲ್‌ಮಾಲ್‌: ಸಿಕ್ಕಿಬಿದ್ದವನ ಹಿಂದಿದ್ದಾರಾ ಬಿಜೆಪಿ ನಾಯಕ ಯತ್ನಾಳ್‌?

Exit mobile version