ಬೆಂಗಳೂರು: ಮತದಾರರ ಮಾಹಿತಿಯನ್ನು (Voter Data) ಅಕ್ರಮವಾಗಿ ಸಂಗ್ರಹ ಮಾಡಿದ ಆರೋಪದಲ್ಲಿ ಈಗಾಗಲೆ ಅನೇಕ ದೂರುಗಳು ದಾಖಲಾಗಿ ಆರು ಜನರ ಬಂಧನವೂ ಆಗಿದ್ದು, ಜೆಡಿಎಸ್ ಪಕ್ಷ ಇದೀಗ ಅಧಿಕೃತವಾಗಿ ಅಖಾಡಕ್ಕೆ ಇಳಿದಿದೆ.
ರಾಜ್ಯ ಜೆಡಿಎಸ್ ವತಿಯಿಂದ ಈ ಕುರಿತು ಚುನಾವಣಾಧಿಕಾರಿಗಗೆ ಬುಧವಾರ ದೂರು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಚುನಾವಣಾಧಿಕಾರಿಗಳಿಗೆ ದೂರು ನೀಡಿ ವಿವರವಾಗಿ ಹೇಳಿದ್ದೇವೆ. ಚಿಲುಮೆ ಸಂಸ್ಥೆ ಯಾರು, ಎಷ್ಟು ಲಕ್ಷ ಹೆಸರು ಡಿಲೀಟ್ ಆಗಿದೆ ಎಂದು ಹೇಳಿದ್ದೇವೆ. ಚುನಾವಣಾ ಆಯೋಗದ ಪ್ರಕಾರ 27 ಲಕ್ಷ ಮತ ಡಿಲೀಟ್ ಆಗಿದೆ. ಜಿಲ್ಲಾ RO ಮೂಲಕ ಪರಿಶೀಲನೆ ನಡೆಸುತ್ತಿದ್ದೇವೆ. ಚುನಾವಣಾ ಅಭ್ಯರ್ಥಿಗೆ ಕೊಡುವ ವೋಟರ್ ಲಿಸ್ಟ್, ROಗೆ ಕೊಡುವ ಲಿಸ್ಟ್ ಎರಡೂ ಕೂಡ ಒಂದೇ ಆಗಿರಬೇಕು. ಜಾತಿ,ಆಮಿಷದ ಹೆಸರಲ್ಲಿ ಭಾಷಣ ಮಾಡಿದರೆ ಅಭ್ಯರ್ಥಿಯ ನಾಮಿನೆಷನ್ ರದ್ದು ಮಾಡಬೇಕೆಂದು ಕೇಳಿದ್ದೇವೆ ಎಂದರು.
ದುಡ್ಡು ಹಂಚುವ ಅಭ್ಯರ್ಥಿ ನಾಮಿನೇಷನ್ ತೆಗೆದುಕೊಳ್ಳಬಾರದು ಎಂದು ಆಯೋಗಕ್ಕೆ ಕೇಳಿದ್ದೇವೆ. ಕೇಂದ್ರ ಚುನಾವಣಾ ಆಯೋಗದ ಜತೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಸರಿಯಾದ ಕ್ರಮದಲ್ಲಿ ಚುನಾವಣೆ ನಡೆಸಿದರೆ ಅಂಬೇಡ್ಕರ್ ಚುನಾವಣಾ ನಡೆಸಿದಂತೆ ಆಗುತ್ತದೆ. ಇಲ್ಲವಾದರೆ ನಾಥೂರಾಮ್ ಗೋಡ್ಸೆ ಚುನಾವಣೆಯಾಗುತ್ತದೆ. ಯಾವ ರೀತಿ ಚುನಾವಣೆ ನಡೆಸಬೇಕು ಎಂಬುದು ಚುನಾವಣಾ ಆಯೋಗಕ್ಕೆ ಬಿಟ್ಟಿದ್ದು ಎಂದು ತಿಳಿಸಿದ್ದೇವೆ ಎಂದು ಹೇಳಿದರು.
ಜೆಡಿಎಸ್ ತಡವಾಗಿ ಈ ವಿಚಾರದಲ್ಲಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಮತದಾರರ ಹೆಸರು ಡಿಲೀಟ್ ಮಾಡಿದ್ದರ ಕುರಿತು ಮೊದಲು ಧ್ವನಿ ಎತ್ತಿದ್ದೇ ನಾವು. ಪ್ರತಿ ಸಭೆಯಲ್ಲಿ ಕೂಡ ನಾವು ಈ ಬಗ್ಗೆ ಧ್ವನಿ ಎತ್ತಿದ್ದೇವೆ. ಚಿಲುಮೆ ಸಂಸ್ಥೆ ಮೂಲಕ ಕಾಂಗ್ರೆಸ್, ಬಿಜೆಪಿ ಇಬ್ಬರೂ ಸೇರಿ ಅಕ್ರಮ ಮಾಡಿದ್ದಾರೆ ಎಂದು ಹೇಳುತ್ತಿದ್ದೇವೆ. ಒಂದೇ ರಸ್ತೆಯಲ್ಲಿರುವ ಪತಿವ್ರತೆಯರು ಅವರು. ಅವರ ಮಾತನ್ನು ನಾವು ನಂಬುವುದಿಲ್ಲ.
ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಮಾತನಾಡಿ, ಪಂಚರತ್ನ ರಥಯಾತ್ರೆ ನಡೆಯುತ್ತಿತ್ತು. ನಾಯಕರೆಲ್ಲ ರಥಯಾತ್ರೆಯಲಿದ್ದರು. ಸಿ.ಎಂ. ಇಬ್ರಾಹಿಂರವರು ಉತ್ತರ ಕರ್ನಾಟಕ ಜಿಲ್ಲಾ ಪ್ರವಾಸದಲ್ಲಿದ್ದರು. ಆದ್ಧರಿಂದ ಇಂದು ದೂರು ನೀಡಿದ್ದೇವೆ. ಆದರೆ ಈ ವಿಚಾರವಾಗಿ ನಾವು ಮೊದಲಿನಿಂದಲೂ ಧ್ವನಿ ಎತ್ತಿದ್ದೇವೆ. ಇದರ ವಿರುದ್ದ ಹೋರಾಟ ಮಾಡುತ್ತೇವೆ ಎಂದರು.
ಸುಮಂಗಲಾ ವಿಚಾರಣೆ
ಚಿಲುಮೆ ಸಂಸ್ಥೆ ವಿರುದ್ಧ ದೂರು ನೀಡಿದ ಸಮನ್ವಯ ಟ್ರಸ್ಟ್ ಮುಖ್ಯಸ್ಥೆಯನ್ನು ಚುನಾವಣಾ ಆಯೋಗ ಬುಧವಾರ ವಿಚಾರಣೆ ನಡೆಸಿತು. ಪ್ರಾದೇಶಿಕ ಆಯುಕ್ತರ ಕಚೇರಿಗೆ ದಾಖಲೆ ಸಮೇತ ಹಾಜರಾದ ಸುಮಂಗಲಾ, ಚಿಲುಮೆ ಸಂಸ್ಥೆಯ ಕುರಿತು ಮಾಹಿತಿ ನೀಡಿದ್ದಾರೆ. ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾನ್ ಅವರು ವಿಚಾರಣೆ ನಡೆಸಿದ್ದಾರೆ. ಚಿಲುಮೆ ಸಂಸ್ಥೆ ಬಗ್ಗೆ ಸೆಪ್ಟೆಂಬರ್ 20ಕ್ಕೆ ಪೊಲೀಸ್ ಆಯುಕ್ತರಿಗೆ, ಬಿಬಿಎಂಪಿ ಹಾಗೂ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದೆ. ಆದರೆ ಯಾರೂ ಕ್ರಮ ಕೈಗೊಳ್ಳಲಿಲ್ಲ. ನಂತರ ನವೆಂಬರ್ 3ಕ್ಕೆ ಚಿಲುಮೆ ಸಂಸ್ಥೆ ಮುಖ್ಯಸ್ಥರ ಜತೆ ಹತ್ತಕ್ಕೂ ಹೆಚ್ಚು ಜನ ನಮ್ಮ ಕಚೇರಿಗೆ ಬಂದು ದೂರು ವಾಪಸ್ ಪಡೆಯಿರಿ ೆಂದು ಧಮ್ಕಿ ಹಾಕಿದರು. ಇದರ ಹಿಂದೆ ದೊಡ್ಡವರ ಕೈವಾಡ ಇದೆ. ದೂರು ವಾಪಸ್ ಒಡೆಯಿರಿ ಎಂದು ಬೆದರಿಕೆ ಹಾಕಿದರು. ಚುನಾವಣಾ ಆಯೋಗಕ್ಕೆ ಮತ್ತು ಬಿಬಿಎಂಪಿ ಆಯುಕ್ತರಿಗೆ ಒತ್ತಾಯ ಪೂರ್ವವಾಗಿ ನನ್ನ ಕೈ ಯಿಂದ ಮೇಲ್ ಮಾಡಿಸಿದ್ದರು ಎಂದು ಸುಮಂಗಲಾ ಹೇಳಿದ್ದಾರೆ.
ಇದನ್ನೂ ಓದಿ | Voter Data | ʼಚಿಲುಮೆʼ ಅಕ್ರಮದ ಆರೋಪಿ, ನಾಪತ್ತೆಯಾಗಿದ್ದ ಲೋಕೇಶ್ ಬಂಧನ