Site icon Vistara News

Wall collapse : ಕಾಂಪೌಂಡ್ ಗೋಡೆ ಕುಸಿದು ಕೂಲಿ ಕಾರ್ಮಿಕ ಸಾವು; ಮತ್ತೊಬ್ಬ ಗಂಭೀರ

Wall Collapse

ಆನೇಕಲ್: ಕಾಂಪೌಂಡ್ ಗೋಡೆ ಕುಸಿದು (Wall collapse) ಬಿದ್ದು ಕೂಲಿ ಕಾರ್ಮಿಕನೊರ್ವ ಮೃತಪಟ್ಟರೆ, ಮತ್ತೋರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಿನ್ನೆ ಗುರುವಾರ ಘಟನೆ ನಡೆದಿದೆ. ರಾಯಚೂರಿನ ದೇವದುರ್ಗ ಮೂಲದ ಪರಶುರಾಮ್ (24) ಮೃತ ದುರ್ದೈವಿ.

ಪೈಪ್ ಲೈನ್ ಹಾಕಲು ಮಣ್ಣು ತೆಗೆಯುತ್ತಿದ್ದ ವೇಳೆ ಕಾಂಪೌಂಡ್ ಗೋಡೆ ಕುಸಿದಿದೆ. ಕಾಂಪೌಂಡ್ ಗೋಡೆ ಪಕ್ಕದಲ್ಲಿಯೇ ಗುಂಡಿ ತೆಗೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ರಾಯಚೂರು ಮೂಲದ ಐದಾರು ಮಂದಿ ಮಣ್ಣು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕಾರ್ಮಿಕ ಮೇಲೆಯೇ ಗೋಡೆ ಕುಸಿದಿದೆ. ಹೊಟ್ಟೆಪಾಡಿಗೆ ದೂರದ ರಾಯಚೂರಿನಿಂದ ಬಂದಿದ್ದ ಪರಶುರಾಮ್‌ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾನೆ.

ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನಿವೇಶನ ಮಾಲೀಕ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಕಾರ್ಮಿಕ ಬಲಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈಗಾಗಲೇ ಎರಡು ಕಡೆ ಕಾಂಪೌಂಡ್ ಕುಸಿದು ಬಿದ್ದಿತ್ತು. ಆದರೂ ಶಿಥಿಲಗೊಂಡಿದ್ದ ಕಾಂಪೌಂಡ್ ತೆರವುಗೊಳಿಸದೇ ಕಾಮಗಾರಿ ನಡೆಸಿದ್ದಾರೆ. ಯಮಸ್ವರೂಪಿ ಕಾಂಪೌಂಡ್ ಪಕ್ಕದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾಂಪೌಂಡ್ ಪಕ್ಕದಲ್ಲಿಯೇ ಜೆಸಿಬಿ ಮೂಲಕ ಗುಂಡಿ ತೆಗೆದಿದ್ದ. ಗುಂಡಿ ಸಮತಟ್ಟು ವೇಳೆ ಆರು ಅಡಿ ಎತ್ತರದ ಹಾಲೋಬ್ಲಾಕ್ ಕಾಂಪೌಂಡ್ ಕುಸಿದಿದೆ.

ಈ ವೇಳೆ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ಕಾಂಪೌಂಡ್ ಗೋಡೆ ಬಿದ್ದಿದೆ. ಏಕಾಏಕಿ ಕಾಂಪೌಂಡ್ ಕುಸಿದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ, ಓರ್ವ ಮಹಿಳೆ ಸೇರಿದಂತೆ ಇಬ್ಬರು ಕಾರ್ಮಿಕರಿಗೆ ಗಾಯವಾಗಿದೆ. ಕಾಂಪೌಂಡ್ ಕುಸಿದಾಗ ಮಾಲೀಕ‌ ಅಥವಾ ಗುತ್ತಿಗೆದಾರ ಸ್ಥಳದಲ್ಲಿ ಇರಲಿಲ್ಲ. ಕೂಡಲೇ ಸಮೀಪದ ಕಾರ್ಖಾನೆಯವರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಆದರೆ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಗಿ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version