Site icon Vistara News

Waste Disposal: ಕಸ ವಿಲೇವಾರಿ ಇನ್ನು ಬಿಬಿಎಂಪಿ ಕೆಲಸ ಅಲ್ಲ! ಅದಕ್ಕಾಗಿಯೇ ಬರುತ್ತಿದೆ ಹೊಸ ಸಂಸ್ಥೆ

bbmp waste disposal

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಸ ವಿಲೇವಾರಿ (waste disposal) ಸಮಸ್ಯೆ ಬೃಹತ್‌ ಆಗಿ ಬೆಳೆದು ನಿಂತಿದೆ. ಬಿಬಿಎಂಪಿಯಲ್ಲಿ (BBMP) ಸಾಕಷ್ಟು ಎಂಜಿನಿಯರ್‌ಗಳು (Engineers) ಇದಕ್ಕಾಗಿಯೇ ಇದ್ದರೂ ಇದನ್ನು ನಿರ್ವಹಿಸುವುದು ಸವಾಲೇ ಆಗಿದೆ. ಹೀಗಾಗಿ, ರಾಜ್ಯ ಸರ್ಕಾರದಿಂದ ಕಸ ವಿಲೇವಾರಿಗೆ ಇದೇ ಜೂನ್‌ 1ರಿಂದ ಹೊಸ ಯೋಜನೆ ಜಾರಿಯಾಗುತ್ತಿದೆ.

ನಗರದಲ್ಲಿ ಕಸದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಜಾರಿಯಾಗುತ್ತಿದ್ದು, ಕಸ ವಿಲೇವಾರಿಗಾಗಿಯೇ (garbage disposal) ಒಂದು ಕಂಪನಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ. “ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ” ಹೆಸರಿನ ಈ ಕಂಪನಿ ಘನತ್ಯಾಜ್ಯ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಿದ್ದು, ಇನ್ನು ಮುಂದೆ ನಗರದಲ್ಲಿ ಕಸದ ಸಮಸ್ಯೆ ಕಂಡುಬಂದರೆ ಅದನ್ನು ಈ ಕಂಪನಿಯ ಮುಂದೆ ಪ್ರಶ್ನಿಸಬೇಕಾಗಲಿದೆ.

ರಾಜ್ಯ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ಜಂಟಿಯಾಗಿ ಈ ಸಂಸ್ಥೆಯನ್ನು ನಿರ್ಮಾಣ ಮಾಡಿವೆ. ಇನ್ನು ಮುಂದೆ ಈ ಕಂಪನಿಯಿಂದಲೇ ಕಸ ಸಂಗ್ರಹಣೆ, ಸಾಗಾಣಿಕೆ ಹಾಗೂ ಹಾಗೂ ವಿಲೇವಾರಿ ಕಾರ್ಯ ನಡೆಯಲಿದೆ. ಜೂನ್ 1ರಿಂದ ಮನೆಮನೆಯಿಂದ ಅಟೋದಲ್ಲಿ ಕಸ ಸಂಗ್ರಹಣೆ, ಸಂಗ್ರಹಿಸಿದ ಕಸವನ್ನು ಟಿಪ್ಪರ್ ಲಾರಿಗಳ ಮೂಲಕ ಕಸದ ಸಂಸ್ಕರಣಾ ಘಟಕ ಅಥವಾ ಕ್ಯಾರಿಗಳಿಗೆ ಸಾಗಿಸುವುದು ಈ ಸಂಸ್ಥೆಯ ಹೊಣೆ.

ಬಿಬಿಎಂಪಿ ಅಡಿಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುತ್ತಿರುವ ಅಟೋ, ಟಿಪ್ಪರ್, ಕಾಂಪ್ಯಾಕ್ಟರ್ ಚಾಲಕರು, ಸಹಾಯಕರು ಕಂಪನಿ ವ್ಯಾಪ್ತಿಗೆ ಬರಲಿದ್ದಾರೆ. ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ವಾರ್ಡ್‌ ಮಟ್ಟದ ಎಂಜಿನಿಯರ್‌ಗಳು, ಸಿಬ್ಬಂದಿಗಳು ಹಾಗೂ ಮಾರ್ಷಲ್‌ಗಳು ಕಂಪನಿ ಅಧೀನಕ್ಕೆ ಬರಲಿದ್ದಾರೆ. ಈ ಅಧಿಕಾರಿಗಳ, ಸಿಬ್ಬಂದಿಗಳ ವೇತನವನ್ನು ಕಂಪನಿಯೇ ಪಾವತಿ ಮಾಡಲಿದೆ.

ನಗರದಲ್ಲಿ ಇರುವ 7 ಕಸ ಸಂಸ್ಕರಣಾ ಘಟಕಗಳು ಕಂಪನಿ ವ್ಯಾಪ್ತಿಗೆ ಬರಲಿವೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಪ್ರತಿ ವರ್ಷ ಕಂಪನಿಗೆ ಅಂತ ಅನುದಾನ ನೀಡಲಿವೆ. ಪೌರ ಕಾರ್ಮಿಕರು, ಗುತ್ತಿಗೆ ಪೌರಕಾರ್ಮಿಕರು ಬಿಬಿಎಂಪಿ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇವರಿಗೆ ಬಿಬಿಎಂಪಿಯಿಂದ ವೇತನ ದೊರೆಯಲಿದೆ. ಪೌರಕಾರ್ಮಿಕರು ಕೇವಲ ಕಸ ಗುಡಿಸುವುದು, ಸಾರ್ವಜನಿಕ ಸ್ಥಳಗಳನ್ನು ಕ್ಲೀನ್ ಮಾಡುವುದು ಮಾಡಲಿದ್ದಾರೆ.

ಘನತ್ಯಾಜ್ಯ ಇಲಾಖೆಯನ್ನು ಆರೋಗ್ಯ ಇಲಾಖೆ ಜೊತೆ ವಿಲೀನ ಮಾಡಿ ಅದೇಶ ಹೊರಡಿಸಲಾಗಿದ್ದು, ಇನ್ನು ಮುಂದೆ ಆರೋಗ್ಯ ಮತ್ತು ನೈರ್ಮಲ್ಯ ಇಲಾಖೆ ಎಂದು ಕರೆಯಲಾಗುತ್ತದೆ. ಈ ಬದಲಾವಣೆಗಳಿಂದ ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ಇರವುದಿಲ್ಲವೇ, ಗಾರ್ಬೆಜ್ ಸಿಟಿ ಗಾರ್ಡನ್ ಸಿಟಿ ಆಗಲಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಕಾದು ನೋಡಬೇಕಿದೆ.

ಜನರಹಿತ ಪ್ರದೇಶಗಳಿಗೆ ಕಸ ವಿಲೇವಾರಿ ಘಟಕಗಳ ಸ್ಥಳಾಂತರ: ಡಿಕೆಶಿ

ಜನ ಸಾಮಾನ್ಯರ ತೊಂದರೆ ನಿವಾರಣೆಗೆ ಯಶವಂತಪುರ ವಿಧಾನಸಭೆ ಕ್ಷೇತ್ರದ 5, ಬ್ಯಾಟರಾಯನಪುರದ 2, ದಾಸರಹಳ್ಳಿ, ಆನೇಕಲ್, ಮಹದೇವಪುರ ಕ್ಷೇತ್ರದಲ್ಲಿನ ಕಸ ವಿಲೇವಾರಿ ಘಟಕಗಳನ್ನು (Waste Disposal Unit) ಬೆಂಗಳೂರಿನ ಹೊರಭಾಗದಲ್ಲಿ ಜನರಹಿತ ಬೆಟ್ಟ ಗುಡ್ಡ ಪ್ರದೇಶಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಈ ಹಿಂದೆ ತಿಳಿಸಿದ್ದರು.

ಬೆಂಗಳೂರು ಅಪಾರವಾಗಿ ಬೆಳೆದ ಪರಿಣಾಮ ಕಸ ವಿಲೇವಾರಿ ಘಟಕಗಳು ನಗರದ ಹೃದಯ ಭಾಗಕ್ಕೆ ಬಂದಿವೆ. ಈ ಘಟಕಗಳ ಸುತ್ತಮುತ್ತ ನಾಲ್ಕೈದು ಕಿ.ಮೀ. ವರೆಗೆ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಬ್ಯಾಟರಾಯಣಪುರ ಶಾಸಕ, ಸಚಿವ ಕೃಷ್ಣಬೈರೇಗೌಡ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮತ್ತಿತರರು ಕಸ ವಿಲೇವಾರಿ ಘಟಕ ಸ್ಥಳಾಂತರದ ವಿಚಾರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ನಾನು ಕೂಡ ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದೆ. ಮುಂದಿನ ದಿನಗಳಲ್ಲಿ ಜನರಿಗೆ ಕಸದ ವಾಸನೆ ಬರಬಾರದು ಎಂಬ ಉದ್ದೇಶದಿಂದ ನಗರದ ಹೊರವಲಯಕ್ಕೆ ಈ ಘಟಕಗಳ ಸ್ಥಳಾಂತರಕ್ಕೆ ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Bengaluru News: ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್

Exit mobile version