ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ವಿಚಾರದಲ್ಲಿ ಬಿಬಿಎಂಪಿ ಪರಿಸ್ಥಿತಿ, ಒಂದು ರೀತಿಯಲ್ಲಿ ಕಣ್ಣಾಮುಚ್ಚಾಲೆಯಂತಾಗಿದೆ. ಈಗಾಗಲೆ ಅನೇಕ ದಿನಗಳಿಂದ ವಿವಾದಕ್ಕೀಡಾಗಿರುವ ಸ್ಥಳ ತನ್ನದು ಎಂದು ಈ ಹಿಂದೆ ಹೇಳಿಕೊಂಡಿದ್ದ ಬಿಬಿಎಂಪಿ, ಈಗ ಮಾಲೀಕರ ಹುಡುಕಾಟಕ್ಕೆ ಮುಂದಾಗಿದೆ.
ಸದ್ಯ ಈ ವಿಚಾರಕ್ಕೆ ಸಂಬಂಧಿಸಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಿಬಿಎಂಪಿ ದಾಖಲೆಗಳ ಪ್ರಕಾರ ಮೇಲ್ನೋಟಕ್ಕೆ ಈದ್ಗಾ ಮೈದಾನ ಸ್ವತ್ತು ನಮ್ಮ ಖಾತೆಯಲ್ಲಿದೆ ಎಂದು ತೋರಿಸಿತ್ತು. 1961 ರಿಂದ 2005ರ ತನಕ ಎಲ್ಲ ಕೋರ್ಟ್‌ನಲ್ಲೂ ವಿಚಾರಣೆ ನಡೆದ ಸಂದರ್ಭದಲ್ಲಿ, ಮೈದಾನ ನಮ್ಮ ಸುಪರ್ದಿಗೆ ಸೇರಿದ ಜಾಗ ಎಂದು ಯಾರೂ ಮುಂದೆ ಬಂದಿರಲಿಲ್ಲ.
ಇದನ್ನೂ ಓದಿ | ಆಸ್ತಿ ತೆರಿಗೆ ವಸೂಲಿಯಲ್ಲಿ ಉಳ್ಳವರಿಗೊಂದು, ಸಾಮಾನ್ಯರಿಗೊಂದು ನ್ಯಾಯ ಮಾಡ್ತಿದ್ಯಾ ಬಿಬಿಎಂಪಿ?
ಈಗ ವಕ್ಫ್ ಬೋರ್ಡ್‌ನವರಿಗೆ ನೋಟಿಸ್ ಕೊಟ್ಟಾಗ ಅವರು ಅದಕ್ಕೆ ಪ್ರತಿಕ್ರಿಯಿಸಿದ್ದು, ಆ ಪ್ರಕಾರ ಅವರ ಹೆಸರಿನಲ್ಲಿ ದಾಖಲೆಗಳು ಇವೆ ಎಂಬುದಕ್ಕೆ ಪುರಾವೆ ಸಿಕ್ಕಿದೆ. ಮೈದಾನ ನಮ್ಮ ಸ್ವಾಧೀನದಲ್ಲಿ ಇದ್ದರು ಕೂಡ ಅವರ ಮಾಲೀಕತ್ವ ಇದೆ ಎಂದರೆ ಖಾತೆಗಾಗಿ ಬಿಬಿಎಂಪಿಗೆ ಅರ್ಜಿ ಹಾಕಬೇಕು. ಖಾತೆ ಸದ್ಯದ ಮಟ್ಟಿಗೆ ಬಿಬಿಎಂಪಿ ಹೆಸರಿನಲ್ಲಿದ್ದು, ವಕ್ಫ್ ಬೋರ್ಡ್ ಎಲ್ಲ ದಾಖಲೆಗಳನ್ನು ನೀಡಿ ಖಾತೆ ಬದಲಾಯಿಸಲು ಅರ್ಜಿ ಸಲ್ಲಿಸಿದರೆ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಅವರಲ್ಲಿಯೂ ಯಾವುದೇ ದಾಖಲೆಗಳು ಇಲ್ಲದೇ ಇದ್ದರೆ ರೆವಿನ್ಯೂ ಇಲಾಖೆ ಹಾಗೂ ಸರ್ಕಾರದ ಮಾರ್ಗಸೂಚಿಯಂತೆ ಕ್ರಮಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಈದ್ಗಾ ಮೈದಾನಕ್ಕೆ ಮಾಲೀಕರು ಯಾರು ಎಂಬ ಗೊಂದಲ ಮುಂದುವರೆದಿದ್ದು, ಯಾರ‍್ಯಾರ ಬಳಿ ದಾಖಲೆ ಇದೆ ಬಂದು ತೋರಿಸಿ ಪ್ರಕರಣ ಅಂತ್ಯಗೊಳಿಸಿ ಎಂದು ಮನವಿ ಮಾಡಿದ್ದಾರೆ.
ಮೈದಾನದಲ್ಲಿ ಗುರುವಂದನಾ ಆಚರಿಸಲು ಶ್ರೀರಾಮಸೇನೆ ಮನವಿ
ಮಾಲೀಕರ ಗೊಂದಲ ವಿವಾದ ಇರುವಾಗಲೇ ಬಿಬಿಎಂಪಿಗೆ ಮೈದಾನದಲ್ಲಿ ಗುರುವಂದನಾ ಕಾರ್ಯಕ್ರಮ ಆಚರಿಸಲು ಮನವಿ ಪತ್ರ ಬಂದಿದೆ. ಮಂತ್ರಿ ಮಾಲ್ ಎದುರು ಇರುವ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಶ್ರೀರಾಮಸೇನೆ ಮನವಿ ಪತ್ರ ನೀಡಿದ್ದು,ಜುಲೈ 13ರಂದು ಗುರುಪೂರ್ಣಿಮೆ ಹಿನ್ನೆಲೆ ಗುರುವಂದನೆ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ.ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೂ ಕಾರ್ಯಕ್ರಮ ನೆರವೇರಿಸಲು ನಿರ್ಧರಿಸಿದ್ದು, ಬಿಬಿಎಂಪಿ ವಿಧಿಸುವ ಎಲ್ಲ ನಿಯಮ ಹಾಗು ನಿಬಂಧನೆಗಳಿಗೆ ಬದ್ಧವಾಗಿ ಇರಲಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಮನವಿಯನ್ನು ಪುರಸ್ಕರಿಸಲು ಅಥವಾ ತಿರಸ್ಕರಿಸಲು ಬಿಬಿಎಂಪಿಗೆ ಒಂದು ವಾರದ ಕಾಲಾವಕಾಶವನ್ನು ಶ್ರೀರಾಮಸೇನೆ ಸಂಘಟನೆ ನೀಡಿದೆ. ಬಿಬಿಎಂಪಿ ಕಡೆಯಿಂದ ಸ್ಪಂದನೆ ಲಭಿಸದಿದ್ದಲ್ಲಿ ಕೋರ್ಟ್ ಮೆಟ್ಟಿಲೇರಲಾಗುತ್ತದೆ ಎಂದು ಬರೆದಿದ್ದಾರೆ.
ರಸ್ತೆ ಗುಂಡಿ ದಿನ ಇದ್ದೇ ಇರುತ್ತೆ ಅದಕ್ಕೆ ಏನು ಮಾಡೋಣ?
ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿ ವಿಚಾರವು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುವುದು ಗೊತ್ತಿರುವ ವಿಷಯವೇ. ನಿತ್ಯ ರಸ್ತೆ ಗುಂಡಿ ಸರ್ವೇ ನಡೆಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪ್ರತಿವಾರ 3 ಸಾವಿರ ಹೊಸ ಗುಂಡಿಗಳು ಪತ್ತೆಯಾಗುತ್ತಿವೆ ಎಂದು ಆಯುಕ್ತರು ತಿಳಿಸಿದ್ದಾರೆ. ಪ್ರತಿ ದಿನ ರಸ್ತೆ ಗುಂಡಿ ಸರ್ವೇ ನಡೆಯುತ್ತಿದ್ದು, ಹೊಸದಾಗಿ ರಸ್ತೆ ಗುಂಡಿ ಪತ್ತೆಯಾಗುತ್ತಲೇ ಇರುತ್ತವೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ಕಳಪೆ ಕಾಮಗಾರಿ ವಿಚಾರದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ರಸ್ತೆ ಗುಂಡಿ ವಿಚಾರದಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿರುವುದು ನಿಜ, ಆದರೆ ಅದು ಬೇಕೆಂದು ಮಾಡಿರುವುದಲ್ಲ ಎಂದು ಸಮರ್ಥನೆ ಮಾಡಿಕೊಂಡರು. ದಾಖಲೆ ಸಲ್ಲಿಸುವಾಗ ಮಿಸ್ ಮ್ಯಾಚ್ ಆಗಿದ್ದು, ಸರಿಯಾಗಿ ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ. ಜತೆಗೆ ಮಳೆಯ ಕಾರಣದಿಂದ ಗುಣ್ಣಮಟ್ಟದ ಡಾಂಬರೀಕರಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಫ್ಲೆಕ್ಸ್ ಬ್ಯಾನರ್ ತೆರವಿಗಿಲ್ಲ ಸಿಬ್ಬಂದಿ
ಪ್ರಧಾನಿ ಮೋದಿ ಆಗಮನದ ವೇಳೆ ನಗರದಲ್ಲಿ ಫ್ಲೆಕ್ಸ್ ಬ್ಯಾನರ್ ರಾರಾಜಿಸಿದ್ದವು, ಇವುಗಳನ್ನು ತೆರವು ಮಾಡದೇ ಇರುವ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಫ್ಲೆಕ್ಸ್ ಬ್ಯಾನರ್ ತೆರವು ಮಾಡಲು ನಮ್ಮ ಬಳಿ ಸಿಬ್ಬಂದಿಗಳು ಇಲ್ಲವೆಂದು ಹೇಳಿದ್ದಾರೆ. ಈ ಹಿಂದೆ ಹಲವರು ಫ್ಲೆಕ್ಸ್ ಹಾಕಿದ್ದ ವೇಳೆ ಡೆಡ್‌ಲೈನ್ ನೀಡಿ ತೆರವುಗೊಳಿಸಲು ಸೂಚಿಸಿದ್ದೆವು. ಈ ತನಕ 16,454 ಬ್ಯಾನರ್, ಫ್ಲೆಕ್ಸ್ ತೆರವು ಮಾಡಿದ್ದೇವೆ ಎಂದರು.
ಇದನ್ನೂ ಓದಿ | ಈದ್ಗಾ ಮೈದಾನ ಬಿಬಿಎಂಪಿಯ ಸ್ವತ್ತು: ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್