ಬೆಂಗಳೂರು: ಇವತ್ತು ಆರ್‌ಎಸ್‌ಎಸ್ ಸಂಸ್ಥಾಪಕರ ಬಗ್ಗೆ ಪಠ್ಯ ಸೇರಿಸುವವರು ನಾಳೆ ನಾಥೂರಾಮ್ ಗೋಡ್ಸೆ ಪಠ್ಯವನ್ನೂ ಸೇರಿಸಿದರೆ ಅಚ್ಚರಿ ಪಡಬೇಕಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಶಾಸಕರಾದ ಸೌಮ್ಯರೆಡ್ಡಿ ಅವರು ಜಯನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕುವೆಂಪು ಅವರ ಬಗ್ಗೆ, ನಾಡಗೀತೆ ಬಗ್ಗೆ ಲಘುವಾಗಿ ಮಾತನಾಡಲು ಹೋಗಬಾರದು. ಅವರು ರಾಷ್ಟ್ರಕವಿ. ಪಠ್ಯ ಪರಿಷ್ಕರಣೆ ಮಾಡಲು ವಿಷಯ ತಜ್ಞರ ಸಮಿತಿ ಮಾಡಬೇಕು. ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಯಾರ ಪಠ್ಯ ಇರಬೇಕು, ಯಾರ ಪಠ್ಯ ಇರಬಾರದು ಅವರು ನಿರ್ಧಾರ ಮಾಡಲಿ. ರೋಹಿತ್ ಚಕ್ರತೀರ್ಥ ಆರ್‌ಎಸ್‌ಎಸ್‌ನವರು, ಅವರ ಬದಲು ಯಾವುದೇ ಪಕ್ಷ, ಸಂಘಟನೆಗೆ ಸೇರದ ವಿಷಯ ತಜ್ಞರನ್ನು ಅಧ್ಯಕ್ಷರಾಗಿ ಮಾಡಿ.
ಇದನ್ನೂ ಓದಿ | ತಿಳಿಗೇಡಿ ಯುವಕನಿಂದ ಪಠ್ಯಪುಸ್ತಕ ಪರಿಷ್ಕರಣೆ ಎಂದ ಸಿದ್ದರಾಮಯ್ಯ
ಭಗತ್ ಸಿಂಗ್, ಮಹಾತ್ಮ ಗಾಂಧಿ, ಅಂಬೇಡ್ಕರ್, ನಾರಾಯಣ ಗುರುಗಳ ವಿಚಾರಗಳನ್ನು ಓದುವುದರಿಂದ ದೇಶಭಕ್ತಿ, ಸಹಿಷ್ಣುತೆ, ಸೌಹಾರ್ದತೆಯ ಮೌಲ್ಯಗಳು ಉದ್ದೀಪನವಾಗುತ್ತದೆ. ಬುದ್ಧ, ಬಸವಣ್ಣ, ಕನಕದಾಸರು ಇವರೆಲ್ಲ ಸಮಾಜ ಸುಧಾರಕರು, ಇಂಥವರ ಬಗ್ಗೆ ಮಕ್ಕಳಿಗೆ ಹೇಳಲಿ. ಮಕ್ಕಳ ಜ್ಞಾನ ವಿಕಾಸವಾಗಬೇಕು ಎಂದರು.
ಪಠ್ಯಪುಸ್ತಕವು ಧರ್ಮ ನಿರಪೇಕ್ಷತೆ, ವೈಚಾರಿಕತೆ, ವೈಜ್ಞಾನಿಕತೆಯನ್ನು ವಿದ್ಯಾರ್ಥಿಗಳಲ್ಲಿ ಮೂಡುವಂತೆ ಮಾಡಬೇಕು. ವಿದ್ಯಾರ್ಥಿಗಳ ಜ್ಞಾನ ವಿಕಾಸವಾಗಬೇಕು, ಹೀಗಾಗಿ ಯಾವುದೇ ಧರ್ಮದ ವಿಚಾರಗಳನ್ನು ತುರುಕಬಾರದು. ನಮ್ಮದು ಜಾತ್ಯಾತೀತ ರಾಷ್ಟ್ರ. ಮಕ್ಕಳಲ್ಲಿ ಇದೇ ಭಾವನೆ ಬೆಳೆಸುವ ಕೆಲಸ ಮಾಡಬೇಕು. ಅಂಧಶ್ರದ್ಧೆಯನ್ನು ಮಕ್ಕಳಿಗೆ ಕಲಿಸಬಾರದು ಎಂದು ಸೂಚಿಸಿದರು.
ಹೆತ್ತವರಿಗೆ ಹೆಗ್ಗಣ ಮುದ್ದು ರೀತಿ ಶಿಕ್ಷಣ ಸಚಿವರಿಗೆ ಹೆಡ್ಗೆವಾರ್ ವಿಷಯ ಪಠ್ಯಕ್ಕೆ ಸೇರದಿದ್ದರೆ ಯಾವ ಸಮಸ್ಯೆ ಇಲ್ಲ. ನಾಗೇಶ್ ಆರ್.ಎಸ್.ಎಸ್ ನವರು, ಹೆಡ್ಗೆವಾರ್ ಆರ್.ಎಸ್.ಎಸ್ ಸಂಸ್ಥಾಪಕರು. ನಾಳೆ ಗೋಡ್ಸೆಯನ್ನು ಪಠ್ಯದಲ್ಲಿ ಸೇರಿಸಬೇಕು ಎನ್ನುವ ವಿಚಾರ ಬಂದರೂ ಬರಬಹುದು ಹಾಗೂ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿರುವವರು, ದೇಶಪ್ರೇಮ ಇರುವವರ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿ. ಅದಕ್ಕೆ ನಾವು ಬೇಡ ಎನ್ನುವುದಿಲ್ಲ ಎಂದರು.
ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸುತ್ತಿದ್ದ ಅಬಕಾರಿ ಸುಂಕ ಕಡಿಮೆ ಇತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ಅಬಕಾರಿ ಸುಂಕ ಎಷ್ಟಿತ್ತೋ ಅದಕ್ಕೆ ಸಮನಾಗಿ ಈಗಲೂ ಹಾಕಿ ಮತ್ತು ಬಿಜೆಪಿ ಸರ್ಕಾರ ಐದು ರಾಜ್ಯಗಳ ಚುನಾವಣೆ ಆದ ಮೇಲೆ ಬರೀ ಎರಡೇ ತಿಂಗಳಲ್ಲಿ ಡೀಸೆಲ್, ಪೆಟ್ರೋಲ್ ಬೆಲೆಯನ್ನು 11 ರೂಪಾಯಿಗಿಂತ ಬೆಲೆ ಹೆಚ್ಚು ಮಾಡಿದೆ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮೋದಿ ಅವರು ಪ್ರಧಾನಿಯಾದಾಗ ಗ್ಯಾಸ್ ಬೆಲೆ 414 ರೂಪಾಯಿ ಇತ್ತು, ಈಗ 1,050 ರೂಪಾಯಿ ಆಗಿದೆ. ಪೆಟ್ರೋಲ್ ಬೆಲೆ 68 ರೂಪಾಯಿ, ಡೀಸೆಲ್ ಬೆಲೆ 46 ರೂಪಾಯಿ ಇತ್ತು, ಇವತ್ತು ನೂರು ರೂಪಾಯಿ ಆಗಿದೆ. ಹಾಗಾದರೆ ಬೆಲೆ ಎಲ್ಲಿ ಕಡಿಮೆ ಆಗಿದೆ, ಮನಮೋಹನ್ ಸಿಂಗ್ ಅವರು ಈ ರೀತಿ ಮಾಡಿದ್ದರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Textbook controversy: ಪಠ್ಯ ಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಲು ನಿರಂಜನಾರಾಧ್ಯ ಒತ್ತಾಯ
ಕೇಂದ್ರ ಸರ್ಕಾರ ರಸ್ತೆ ಸೆಸ್, ಕೃಷಿ ಸೆಸ್, ಅಭಿವೃದ್ಧಿ ಸೆಸ್ ಹಾಕುತ್ತದೆ. ಇದರಲ್ಲಿ ರಾಜ್ಯ ಸರ್ಕಾರಕ್ಕೆ ಪಾಲು ಸಿಗುವುದಿಲ್ಲ. ಮೂಲ ಅಬಕಾರಿ ಸುಂಕದಲ್ಲಿ ಮಾತ್ರ ರಾಜ್ಯಕ್ಕೆ ಪಾಲು ಸಿಗುತ್ತದೆ ಮತ್ತು ಕರ್ನಾಟಕ ರಾಜ್ಯದಿಂದಲೇ ಪ್ರತೀ ವರ್ಷ ಮೂರು ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹ ಆಗುತ್ತದೆ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಅಬಕಾರಿ ಸುಂಕ, ಜಿಎಸ್‌ಟಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇದರಲ್ಲಿ ನಮಗೆ ಸಿಗೋದು ಕೇವಲ ರೂ. 47,000 ಕೋಟಿ ಮಾತ್ರ. ಉಳಿದದ್ದು ಪೂರ್ತಿ ಕೇಂದ್ರಕ್ಕೆ ಹೋಗುತ್ತದೆ ನಾವೇ ಕೊಟ್ಟು ಮತ್ತೆ ನಾವೇ ಅವರ ಬಳಿ ಗೋಗರೆಯುತ್ತಾ, ಕ್ಯೂ ನಿಂತುಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಹಗಲು ದರೋಡೆ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ