Site icon Vistara News

Nehru Olekar Case: ನೆಹರೂ ಓಲೆಕಾರ್‌ ಅವರನ್ನು ಶಾಸಕತ್ವದಿಂದ ಇನ್ನೂ ಯಾಕೆ ಅನರ್ಹಗೊಳಿಸಿಲ್ಲ ಎಂದು ಕೇಳಿದ ಹೈಕೋರ್ಟ್!‌

Nehru Olekar

ಬೆಂಗಳೂರು: ಜನಪ್ರತಿನಿಧಿಗಳಿಗೆ ಕ್ರಿಮಿನಲ್‌ ಪ್ರಕರಣದಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಲ್ಪಟ್ಟರೆ ಅವರ ಆಯ್ಕೆ ಸ್ವಯಂಚಾಲಿತವಾಗಿ ಅನರ್ಹಗೊಳ್ಳುತ್ತದೆ ಎಂಬ ನಿಯಮವಿದ್ದರೂ ಹಾವೇರಿಯ ಬಿಜೆಪಿ ಶಾಸಕ ನೆಹರೂ ಓಲೆಕಾರ್‌‌ (Nehru Olekar Case) ಅವರನ್ನು ಇನ್ನೂ ಯಾಕೆ ಅನರ್ಹಗೊಳಿಸಿಲ್ಲ?- ಈ ಪ್ರಶ್ನೆಯನ್ನು ಕೇಳಿದ್ದು ರಾಜ್ಯ ಹೈಕೋರ್ಟ್‌! ಬೇರೆಯವರನ್ನಾದರೆ ತಕ್ಷಣವೇ ಅನರ್ಹಗೊಳಿಸಲಾಗುತ್ತದೆ. ಇವರನ್ನೇಕೆ ಮಾಡಿಲ್ಲ ಎಂದು ಅದು ಶುಕ್ರವಾರ ನಡೆದ ವಿಚಾರಣೆ ವೇಳೆ ಕೇಳಿತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಮಾನನಷ್ಟ ಮೊಕದ್ದಮೆಯೊಂದಕ್ಕೆ ಸಂಬಂಧಿಸಿ ಎರಡು ವರ್ಷ ಶಿಕ್ಷೆಗೆ ಒಳಗಾದ ಬೆನ್ನಿಗೇ ಸಂಸತ್‌ ಸದಸ್ಯನ ಹುದ್ದೆಯಿಂದ ಅನರ್ಹಗೊಳಿಸಿದ ಘಟನೆಯ ಹಿನ್ನೆಲೆಯಲ್ಲಿ ಓಲೆಕಾರ್‌ ಪ್ರಕರಣದಲ್ಲಿನ ಅನರ್ಹತೆ ವಿಚಾರವೂ ಮುನ್ನೆಲೆಗೆ ಬಂದಿದೆ.

ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ನೆಹರೂ ಓಲೆಕಾರ್‌ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದಲ್ಲದೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ಇದು ಕೆಲವು ಸಮಯದ ಹಿಂದೆ ನೀಡಿದ ತೀರ್ಪಾಗಿದ್ದರೂ ರಾಹುಲ್‌ ಪ್ರಕರಣದ ನಂತರ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ನೆಹರೂ ಓಲೆಕಾರ್‌ ಅವರು ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಹೈಕೋರ್ಟ್‌ ಮೊರೆ ಹೊಕ್ಕಿದ್ದು, ಅದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಕೆ. ನಟರಾಜನ್‌ ಅವರ ಏಕಸದಸ್ಯ ಪೀಠ ಅನರ್ಹತೆಯ ಅವಕಾಶದ ಬಗ್ಗೆ ಪ್ರಶ್ನೆಗಳನ್ನು ಎತ್ತಿತು. ನೆಹರೂ ಓಲೆಕಾರ್‌ ಸಲ್ಲಿಸಿದ ಮಧ್ಯಂತರ ಅರ್ಜಿ ಸಂಬಂಧ ವಾದ-ವಿವಾದ ಆಲಿಸಿ ವಿಚಾರಣೆ ಅಂತ್ಯಗೊಳಿಸಿದ ಕೋರ್ಟ್‌ ಆದೇಶವನ್ನು ಕಾದಿರಿಸಿದೆ.

2012ರಲ್ಲಿ ನಡೆದ ಈ ಹಗರಣಕ್ಕೆ ಸಂಬಂಧಿಸಿ ಕೋರ್ಟ್‌ ಕಳೆದ ಫೆಬ್ರವರಿ 13ರಂದು ತೀರ್ಪು ನೀಡಿತ್ತು. ನೆಹರೂ ಓಲೆಕಾರ್‌, ಅವರ ಇಬ್ಬರು ಪುತ್ರರು ಮತ್ತು ಐವರು ಅಧಿಕಾರಿಗಳನ್ನು ದೋಷಿಗಳೆಂದು ಘೋಷಿಸಿತ್ತು. ಎರಡು ವರ್ಷಗಳ ಸರಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತಾದರೂ ನೆಹರೂ ಓಲೆಕಾರ್‌ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಯಾವಾಗ ರಾಹುಲ್‌ ಗಾಂಧಿ ಪ್ರಕರಣ ಮೇಲೆದ್ದು ಬಂದು ಅನರ್ಹತೆ ಶಿಕ್ಷೆ ನೀಡಲಾಯಿತೋ, ಯಾವಾಗ ಪ್ರತಿಪಕ್ಷಗಳು ಸ್ವಯಂಚಾಲಿತ ಅನರ್ಹತೆ ಎಂದಾದರೆ ನೆಹರೂ ಓಲೆಕಾರ್‌ ಯಾಕೆ ಅನರ್ಹಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದರ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ತರಾತುರಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಪ್ರಕರಣದಲ್ಲಿ ಅರ್ಜಿದಾರರು ಕ್ರಿಮಿನಲ್ ಒಳಸಂಚು ರೂಪಿಸಿಲ್ಲ. ಅಧೀನ ನ್ಯಾಯಾಲಯದ ಆದೇಶ ದೋಷಪೂರಿತ ಆಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂಬ ಅಭಿಪ್ರಾಯಕ್ಕೆ ಹೈಕೋರ್ಟ್ ಬಂದಿದೆ. ಇದೇ ಕಾರಣಕ್ಕೆ ಅರ್ಜಿದಾರರಿಗೆ ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ ವಿಧಿಸಿದ ಆದೇಶಕ್ಕೆ ತಡೆ ಸಹ ನೀಡಿದೆ. ಶಿಕ್ಷೆ ವಿಧಿಸಿದ ಆದೇಶವು ದೋಷಪೂರಿತವಾಗಿದೆ ಎಂದಾದರೆ ಅದರ ಪರಿಣಾಮಗಳನ್ನು ಆರೋಪಿ ಎದುರಿಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದರಂತೆ ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಪಾತ್ರ ಇಲ್ಲದ ಕಾರಣ ಅವರನ್ನು ದೋಷಿಯಾಗಿ ತೀರ್ಮಾನಿಸಿದ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕು ಎಂದು ಓಲೆಕಾರ್‌ ಪರ ವಕೀಲರು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಅರ್ಜಿದಾರರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆಯೇ ಎಂದು ಪ್ರಶ್ನಿಸಿತು. ಓಲೆಕಾರ್ ಪರ ವಕೀಲರು ಇಲ್ಲ ಎಂದು ಉತ್ತರಿಸಿದಾಗ, “ಏಕೆ ಇನ್ನೂ ಅನರ್ಹಗೊಳಿಸಿಲ್ಲ? ಬೇರೆಯವರನ್ನು ತಕ್ಷಣವೇ ಅನರ್ಹಗೊಳಿಸಲಾಗುತ್ತದೆ?” ಎಂದು ಮರು ಪ್ರಶ್ನಿಸಿತು.

ಓಲೇಕಾರ್ ಪರ ವಕೀಲರು, ಶಾಸಕರನ್ನು ಅನರ್ಹಗೊಳಿಸುವ ವಿಚಾರ ಸ್ಪೀಕರ್ ಅವರ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ. ಅವರು ವಿವೇಚನೆ ಬಳಸಿ ತಿರ್ಮಾನ ಕೈಗೊಳ್ಳುತ್ತಾರೆ. ಆದರೆ, ದೋಷಿಯಾಗಿ ತೀರ್ಮಾನಿಸಿದ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವ ವಿಚಾರಕ್ಕೂ, ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಉತ್ತರಿಸಿದರು.

ಅರ್ಜಿದಾರ ಮನವಿಯನ್ನು ಆಕ್ಷೇಪಿಸಿದ ಲೋಕಾಯುಕ್ತ ಪರ ವಕೀಲರು, ಕ್ರಿಮಿನಲ್ ಪ್ರಕರಣದಲ್ಲಿ ಚುನಾಯಿತ ಜನ ಪ್ರತಿನಿಧಿಗಳು ಎರಡು ವರ್ಷ ಕಾಲ ಶಿಕ್ಷೆಗೆ ಗುರಿಯಾದರೆ ಅವರ ಸ್ಥಾನ ತನ್ನಿಂದ ತಾನೇ ಅನರ್ಹವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟಪಡಿಸುತ್ತದೆ. ಪ್ರಕರಣದಲ್ಲಿ ಅರ್ಜಿದಾರರು ಕ್ರಿಮಿನಲ್ ಪಿತೂರಿ ನಡೆಸಿರುವ ಸಾಕ್ಷ್ಯಾಧಾರಗಳ ಸಮೇತ ವಿಶೇಷ ನ್ಯಾಯಾಲಯದಲ್ಲಿ ದೃಢಪಟ್ಟಿದೆ. ಆದ ಕಾರಣ ಅವರ ಮನವಿ ಪುರಸ್ಕರಿಸದೆ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.

ಇದನ್ನೂ ಓದಿ ವಿಸ್ತಾರ Explainer: ರಾಹುಲ್‌ ಗಾಂಧಿ ಅನರ್ಹತೆ: ಏನಿದು? ಮುಂದೇನಾಗಲಿದೆ?

Exit mobile version