ಬೆಂಗಳೂರು : ಪ್ರೀತಿಸಿ ಮದುವೆಯಾದವಳ ಟಾರ್ಚರ್ ತಡೆಯಲು ಸಾಧ್ಯವಾಗದೆ ಪತ್ನಿಯನ್ನು ‘ಬಾ ನಲ್ಲೆ ಮಧುಚಂದ್ರಕೆʼ ಸಿನಿಮಾದ ರೀತಿಯಲ್ಲಿ ಕೊಲೆ (Wife Murder) ಮಾಡಿದ್ದಾನೆ ಇಲ್ಲೊಬ್ಬ.
ಬೆಂಗಳೂರಿನ ಮಡಿವಾಳದಲ್ಲಿ ಪ್ರಕರಣ ನಡೆದಿದೆ. ಪೃಥ್ವಿರಾಜ್ ಹಾಗೂ ಜ್ಯೋತಿ ಇಬ್ಬರೂ ಪ್ರೀತಿಸಿ ಕಳೆದ ಎಂಟು ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆ ಆದ ಮೇಲೆ ನಿತ್ಯವೂ ಇಬ್ಬರ ನಡುವೆ ಒಂದಲ್ಲ ಒಂದು ಗಲಾಟೆ ನಡೆಯುತ್ತಿತ್ತು. ಪತ್ನಿಯ ಹಿಂಸೆ ತಡೆಯಲು ಆಗದೇ ಪೃಥ್ವಿರಾಜ್ ರೋಸಿ ಹೋಗಿದ್ದನಂತೆ. ಇದರಿಂದ ಆಕೆಯನ್ನು ಕೊಲೆ ಮಾಡಬೇಕು ಎಂದು ಸ್ಕೆಚ್ ಹಾಕಿದ್ದ.
ಮೊದಲು ಈತ ಕೊಲೆಗೆ ಪ್ಲಾನ್ ಮಾಡಿದ್ದು ಮಲ್ಪೆ ಬೀಚ್‌ನಲ್ಲಿ. ಆಗಸ್ಟ್ 2ರಂದು ಮಲ್ಪೆ ಬೀಚ್‌ನಲ್ಲಿ ಜ್ಯೋತಿಯನ್ನು ಕೊಲೆ ಮಾಡಬೇಕು ಎಂದು ಪ್ಲಾನ್ ಹಾಕಿದ್ದ. ಸಮುದ್ರದಲ್ಲಿ ಮುಳುಗಿಸಿ ಕೊಲೆ ಮಾಡಿ ಆಕಸ್ಮಿಕ ಸಾವಿನಂತೆ ಕಾಣಿಸಬೇಕು ಎಂದು ಯೋಜಿಸಿದ್ದ. ಆದರೆ ಸಮದ್ರದ ಆಳಕ್ಕೆ ಇಳಿಯದಂತೆ ಬೋರ್ಡ್ ಹಾಕಿದ್ದರಿಂದ ಹಾಗೂ ತೀರದಲ್ಲಿ ಜನ ಇದ್ದುದರಿಂದ ಆತನ ಪ್ಲಾನ್ ಫ್ಲಾಪ್ ಆಗಿತ್ತು. ಆದರೂ ಛಲ ಬಿಡದ ಆರೋಪಿ ಇನ್ನೊಂದು ಯೋಜನೆ ರೂಪಿಸಿದ. ಜೂಮ್ ಕಾರಿನಲ್ಲಿ ಜ್ಯೋತಿಯನ್ನು ಕರೆದುಕೊಂಡು ಶಿರಾಡಿ ಘಾಟಿಯ ಗುಂಡ್ಯದ ಬಳಿ ಬಂದ. ಕಾರಿನಲ್ಲಿಯೇ ಜ್ಯೋತಿಯ ವೇಲ್‌ನಿಂದಲೇ ಆಕೆಯನ್ನು ಉಸಿರುಗಟ್ಟಿಸಿ ಕೊಲೆಗೈದ. ಬಳಿಕ ಶವವನ್ನು ರಸ್ತೆ ಪಕ್ಕದ ಒಂದು ಪೊದೆಯಲ್ಲಿ ಎಸೆದು ಬೆಂಗಳೂರಿಗೆ ಮರಳಿದ.
ಇದನ್ನೂ ಓದಿ | Student Execution | ಕಾಲೇಜಿನಲ್ಲಿ ರ‍್ಯಾಗಿಂಗ್ ಮಾಡಿದ್ದಕ್ಕೆ ಕೊಲೆ; ಆರೋಪಿಗಳ ಸೆರೆ
ನಂತರ ಪೊಲೀಸ್ ಠಾಣೆಗೆ ಬಂದು ಹೆಂಡತಿ ಮಿಸ್ಸಿಂಗ್ ದೂರು ನೀಡಿದ. ದೂರು ಪಡೆದ ಪೊಲೀಸರು ಇನ್ವೆಸ್ಟಿಗೇಷನ್‌ಗೆ ಇಳಿದರು. ವಿಚಾರಣೆ ವೇಳೆ ಆರೋಪಿ, ಹೆಂಡತಿ ಹಾಗೂ ತನ್ನ ಮೊಬೈಲ್ ಮಾರುತಿ ನಗರದ ಮನೆಯಲ್ಲೇ ಇತ್ತು ಎನ್ನುವ ಸತ್ಯವನ್ನು ಬಾಯ್ಬಿಟ್ಟಿದ್ದ. ಇದರಿಂದ ಅನುಮಾನ ಗಂಡನ ವಿರುದ್ಧವೇ ತಿರುಗಿತು. ಸಿಸಿ ಕ್ಯಾಮರಾ ಕ್ಲಿಪ್ಪಿಂಗ್‌ಗಳನ್ನು ಪರಿಶೀಲಿಸಿದಾಗ ಆತ ಕೊನೆಯದಾಗಿ ಹೆಂಡತಿಯನ್ನು ಕರೆದುಕೊಂಡು ಕಾರಿನಲ್ಲಿ ಹೋದದ್ದು ಕಂಡುಬಂತು. ಇದನ್ನು ಆಧರಿಸಿ ಪೃಥ್ವಿರಾಜನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡು ಕೃತ್ಯದ ಹಿಂದಿನ ಸತ್ಯವನ್ನು ರಿವೀಲ್ ಮಾಡಿದ.
ಫ್ಲಾಪ್ ಆಯ್ತು ಮಾಸ್ಟರ್ ಪ್ಲ್ಯಾನ್
ಆರೋಪಿ ಕೊಲೆಗೂ ಮುನ್ನ ಹೊಸದೊಂದು ಮೊಬೈಲ್ ಖರೀದಿಸಿ ಹೊಸ ಸಿಮ್ ಉಪಯೋಗಿಸುತ್ತಿದ್ದ. ಕೊಲೆ ಉದ್ದೇಶಕ್ಕಾಗಿಯೇ ಬೇಸಿಕ್ ಮೊಬೈಲ್ ಹಾಗೂ ಸಿಮ್ ಖರೀದಿಸಿದ್ದ. ಹಳೆಯ ಮೊಬೈಲನ್ನು ಮನೆಯಲ್ಲೇ ಬಿಟ್ಟು ಹೆಂಡತಿಯನ್ನು ಟ್ರಿಪ್‌ಗೆ ಕರೆದುಕೊಂಡು ಹೋಗಿದ್ದ. ಮಲ್ಪೆಯಲ್ಲಿ ಕೊಲೆ ಪ್ಲ್ಯಾನ್ ಫ್ಲಾಪ್ ಆದರೆ ಗುಂಡ್ಯದಲ್ಲಿ ಕೊಲೆ ಉದ್ದೇಶ ಈಡೇರಿತ್ತು.
ಹೆಂಡತಿ ಕಿರಿಕ್ ಮಾಡುತ್ತಿದ್ದುದೂ ಅಲ್ಲದೆ ಬಾಯ್‌ಫ್ರೆಂಡ್ ಕೂಡ ಹೊಂದಿದ್ದಳು. ಆಕೆ ಯುಪಿಎಸ್‌ಸಿ ಎಕ್ಸಾಂ ಅನ್ನು ಎರಡು ಬಾರಿ ಬರೆದಿದ್ದಳು. ಪರೀಕ್ಷೆಯ ಟ್ರೈನಿಂಗ್ ನಿಮಿತ್ತ ದೆಹಲಿಗೆ ಹೋಗಿದ್ದಳು. ಅಲ್ಲಿ ಯುವಕನೊಬ್ಬನ ಸಖ್ಯ ಬೆಳೆಸಿದ್ದಳು. ಆದ್ದರಿಂದ ಹೆಂಡತಿ ಕೊಲೆ ಮಾಡಿರುವುದಾಗಿ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ ಆರೋಪಿ ಪೃಥ್ವಿರಾಜ್.
ಈ ಕುರಿತಂತೆ ಡಿಸಿಪಿ ಸಿಕೆ ಬಾಬ ಅವರು ಮಾತನಾಡಿ ʻʻದಂಪತಿ ನಡುವೆ ವಯಸ್ಸಿನ ಅಂತರವಿತ್ತು. ಅವರೆಲ್ಲರೂ ಬಿಹಾರ ಮೂಲದವರು. ಆರೋಪಿಯ ಸ್ನೇಹಿತನೂ ಕೂಡ ಕೊಲೆಗೆ ಸಹಕಾರ ನೀಡಿದ್ದಾನೆ. ತನ್ನ ಸ್ನೇಹಿತನ ಬಳಿ ಆರೋಪಿ ಪ್ರಥ್ವಿರಾಜ್ ತನ್ನ ಸಮಸ್ಯೆಗಳನ್ನು ಹೇಳಿಕೊಂಡಿದ್ದ. ಹೀಗಾಗಿ ಆತನ ಸ್ನೇಹಿತ ಸಾಥ್ ನೀಡಿದ್ದ. ಆರೋಪಿಯ ಬಂಧನವಾಗಿದೆʼʼ ಎಂದು ಹೇಳಿಕೆ ನೀಡಿದರು.
ಇದನ್ನೂ ಓದಿ | ಕುಟುಂಬ ಕಲಹ 11 ಮಂದಿಯ ಕೊಲೆಯಲ್ಲಿ ಅಂತ್ಯ