ಬೆಂಗಳೂರು: ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂಬ ಪ್ರಧಾನಿ ನರೇಂದ್ರ ಮೋದಿ ನುಡಿದಂತೆ ನಡೆದಿಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಉದ್ಯೋಗಸೃಷ್ಟಿಗೆ ಅನುಕೂಲವಾಗಲೆಂದು ಯುವ ಕಾಂಗ್ರೆಸ್‌ನಿಂದ ವೆಬ್‌ಸೈಟ್ ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರದೇಶ ಯುವ ಕಾಂಗ್ರೆಸ್‌ನ ಉದ್ಯೋಗ ಸೃಷ್ಟಿ ವೆಬ್‌ಸೈಟ್ (www.udyogasrishti.in) ಬಿಡುಗಡೆ ಮಾಡಿ ಮಾತನಾಡಿದರು.
ಇದೊಂದು ವಿನೂತನ ಕಾರ್ಯಕ್ರಮ. ನೋಂದಣಿ ಮಾಡಲು ಈ ಮೂಲಕ ಯುವಕರಿಗೆ ಕರೆ ಕೊಡುತ್ತಿದ್ದೇವೆ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಆದರೆ ನುಡಿದಂತೆ ನಡೆಯಲು ಆಗಲಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು ಎನ್ನುವುದು ನಮ್ಮ ಚಿಂತನೆ ಅದಕ್ಕಾಗಿ ಈ ವೆಬ್‌ಸೈಟ್ ಸಿದ್ಧಪಡಿಸಲಾಗಿದೆ.
ಯುವಕರ ಧ್ವನಿ ನಮ್ಮ ಧ್ವನಿ ಆಗಬೇಕು ಎನ್ನುವ ದೃಷ್ಟಿಯಿಂದ ವೆಬ್‌ಸೈಟ್ ಲಾಂಚ್ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಎರಡು ಕಡೆ ಯುವಕರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಪಂಚರತ್ನ ಯೋಜನೆಯನ್ನು ಇಟ್ಟುಕೊಂಡು ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ಯುವಕರಿಗೆ ರಾಹುಲ್ ಗಾಂಧಿಯವರ ಜತೆ ಚರ್ಚೆ ಮಾಡಲು ಅವಕಾಶ ಎಂದು ಹೇಳಿದರು.
ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮಾತನಾಡಿ, ಯುವಕರ ಧ್ವನಿ ಡಿ.ಕೆ. ಶಿವಕುಮಾರ್ ಆಗಬೇಕು ಎಂದು ಈ ಕಾರ್ಯಕ್ರಮ ರೂಪಿಸಿದ್ದೇವೆ. ಭಾರತವನ್ನು ಜೋಡಿಸಲು ನಮ್ಮ ನಾಯಕ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಸೆಪ್ಟೆಂಬರ್ 31ಕ್ಕೆ ಯಾತ್ರೆ ಆಗಮಿಸುತ್ತದೆ. ರಾಹುಲ್ ಗಾಂಧಿಯವರ ಮುಂದೆ ಯುವಕರು ಬಂದು ಉದ್ಯೋಗ ಸಮಸ್ಯೆ ಮತ್ತು ನಿವಾರಣೆಗೆ ಮಾಡಬೇಕಾದ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದೇವೆ ಎಂದರು.
ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್, ಉಪಾಧ್ಯಕ್ಷರಾದ ಮಂಜುನಾಥಗೌಡ, ದೀಪಿಕಾ, ವಿಶ್ವನಾಥ್ ಉಪಸ್ಥಿತರಿದ್ದರು.
ಇದನ್ನೂ ಓದಿ | ಬೆಂಗಳೂರು-ಮೈಸೂರು ಹೆದ್ದಾರಿ ಪ್ಲಾನ್ ಮಾಡಿದ ಇಂಜಿನಿಯರ್‌ಗಳಿಗೆ ಪದ್ಮಭೂಷಣ ಕೊಡಿ ಎಂದ ಡಿ.ಕೆ. ಶಿವಕುಮಾರ್