Site icon Vistara News

Best Bakery Award | ‘ಅಯ್ಯಂಗಾರ್ಸ್ ಓವನ್ ಫ್ರೆಶ್‌’ ಬೆಸ್ಟ್ ಬೇಕರಿ; ಶುಚಿ-ರುಚಿಗೆ ಸಂದ ಗರಿ

best bekary

ಬೆಂಗಳೂರು: ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಕೊಡಮಾಡುವ “ಬೆಸ್ಟ್ ಬೇಕರಿ” ಪ್ರಶಸ್ತಿಗೆ (Best Bakery Award) ಎಲೆಕ್ಟ್ರಾನಿಕ್ ಸಿಟಿಯ ಅಯ್ಯಂಗಾರ್ಸ್ ಓವನ್ ಫ್ರೆಶ್ ಪಾತ್ರವಾಗಿದೆ. ಶುಚಿ-ರುಚಿಗಾಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಅಯ್ಯಂಗಾರ್ಸ್ ಓವನ್ ಫ್ರೆಶ್‌ ಮಾಲೀಕ ಜಿ.ಕೆ. ಪ್ರಮೋದ್‌ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು.

ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘವು ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಫುಡ್ ಅವಾರ್ಡ್ 2022ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಸಂಘದಲ್ಲಿ ನಗರದ ನೋಂದಾಯಿತ ಹೋಟೆಲ್‌ಗಳು, ಬೇಕರಿಗಳು ಮತ್ತು ಐಸ್ ಕ್ರೀಂ ಪಾರ್ಲರ್‌ಗಳಿಗೆ ವಿವಿಧ 12 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.

ಶುಚಿ-ರುಚಿಗೆ ಸಂದ ಗೌರವ
ಅಯ್ಯಂಗಾರ್ಸ್ ಓವನ್ ಫ್ರೆಶ್ ಬೇಕರಿಯನ್ನು ಅತ್ಯಾಧುನಿಕ ಶೈಲಿಯಲ್ಲಿ ಭಿನ್ನವಾಗಿ ರೂಪಿಸಲಾಗಿದೆ. ಇಲ್ಲಿ ಸಾಂಪ್ರದಾಯಿಕ ಹಾಗೂ ಯುರೋಪಿಯನ್ ಶೈಲಿಯನ್ನು ಅಳವಡಿಸಿಕೊಳ್ಳಲಾಗಿದೆ. ಇನ್ನೊಂದು ವಿಶೇಷವೆಂದರೆ ಈ ಬೇಕರಿಯ ಕಿಚನ್ ಸಂಪೂರ್ಣ ಪಾರದರ್ಶಕವಾಗಿರುವುದು. ಶುಚಿತ್ವಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ಕೆಲಸದಲ್ಲಿ ಕಾರ್ಯಕ್ಷಮತೆಯನ್ನು ತರುವ ನಿಟ್ಟಿನಲ್ಲಿ ಇಲ್ಲಿನ ಸಿಬ್ಬಂದಿಗೆ ನಿರಂತರವಾಗಿ ತರಬೇತಿ ನೀಡಲಾಗುತ್ತಿದೆ.

ಅಯ್ಯಂಗಾರ್ಸ್ ಓವನ್ ಫ್ರೆಶ್‌ ಮಾಲೀಕರಾದ ಜಿ.ಕೆ. ಪ್ರಮೋದ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, “ಈ ಪ್ರಶಸ್ತಿಯು ನಮ್ಮ ಇಡೀ ತಂಡಕ್ಕೆ ಸಲ್ಲಬೇಕು. ಅವರ ಬದ್ಧತೆ, ದಕ್ಷತೆಯ ಫಲವಾಗಿಯೇ ಇಂದು ನಾವು ವಿಭಿನ್ನ ಮತ್ತು ಅತ್ಯುತ್ತಮ ಎಂದು ಗುರುತಿಸಿಕೊಂಡಿದ್ದೇವೆ. ನಮ್ಮ ಕೆಲಸಗಾರರನ್ನು ನಾವು ಕುಟುಂಬ ಎಂದು ಭಾವಿಸಿರುವುದರಿಂದಲೇ ಅವರು ಪರಿಪೂರ್ಣವಾಗಿ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಂಡು ಈ ಸಾಧನೆಗೆ ನಮ್ಮನ್ನು ಮುಟ್ಟಿಸಿದ್ದಾರೆ” ಎಂದು ಹೇಳಿದರು.

ವಿಭಿನ್ನ ಪ್ರಯತ್ನಗಳು ಹಾಗೂ ರುಚಿಕಟ್ಟಾದ ಆಹಾರ ತಯಾರಿಸುವ ಕಾರಣಕ್ಕೆ ಅಯ್ಯಂಗಾರ್ಸ್ ಓವನ್ ಫ್ರೆಶ್ ಜನಪ್ರಿಯತೆ ಗಳಿಸಿದೆ. ಇವರ ಈ ಕಾರ್ಯಶೈಲಿಯನ್ನು ಗುರುತಿಸಿಯೇ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಬೆಸ್ಟ್ ಬೇಕರಿ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಗಳ ಆಯ್ಕೆಗೆ ಸೆಲೆಬ್ರಿಟಿ ಶೆಫ್ ನಿಮಿಷ್ ಭಾಟಿಯಾ ಜ್ಯೂರಿಯಾಗಿದ್ದರು.

ಸಮಾರಂಭದಲ್ಲಿ ಸಚಿವರಾದ ಮುರುಗೇಶ ನಿರಾಣಿ, ಶಿವರಾಮ ಹೆಬ್ಬಾರ್, ಸಂಘದ ಅಧ್ಯಕ್ಷ ಪಿ.ಸಿ.ರಾವ್, ಗೌರವ ಕಾರ್ಯದರ್ಶಿ ವೀರೇಂದ್ರ ಎನ್.ಕಾಮತ್ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ | Gauri Lankesh | ಕವಿತಾ ಲಂಕೇಶ್‌ ನಿರ್ದೇಶನದ ಗೌರಿ ಸಾಕ್ಷ್ಯಚಿತ್ರಕ್ಕೆ ಬೆಸ್ಟ್‌ ಹ್ಯೂಮನ್‌ ರೈಟ್ಸ್‌ ಪ್ರಶಸ್ತಿ

Exit mobile version