ಹೈದರಾಬಾದ್: ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಉತ್ಸುಕರಾಗಿರುವುದಾಗಿ, ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ಉತ್ಪಾದಕ ಕಂಪನಿ ಭಾರತ್ ಬಯೋಟೆಕ್ ತಿಳಿಸಿದೆ.
ಭಾರತ್ ಬಯೋಟೆಕ್‌ನ ಅಧ್ಯಕ್ಷ ಡಾ. ಕೃಷ್ಣ ಎಂ. ಎಲ್ಲ ಅವರು ಹೈದರಾಬಾದ್‌ನಲ್ಲಿ ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್. ನಿರಾಣಿ ಅವರನ್ನು ಭೇಟಿ ಮಾಡಿದ ವೇಳೆ ಆಸಕ್ತಿ ತೋರಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ಕೃಷ್ಣ ಅವರ ಜತೆ ಮಾತುಕತೆ ನಡೆಸಿದ ಸಚಿವ ನಿರಾಣಿ, “ಸುಲಲಿತ ವ್ಯವಹಾರಕ್ಕೆ ಒತ್ತು ನೀಡುವ ಕರ್ನಾಟಕದಲ್ಲಿ ಹೂಡಿಕೆದಾರರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಬದ್ಧ,” ಎಂದು ಭರವಸೆ ನೀಡಿದರು.
ಕರ್ನಾಟಕದಲ್ಲಿ ಹೂಡಿಕೆ ಹಾಗೂ ಉದ್ಯಮ ವಿಸ್ತರಣೆಗೆ ಇರುವ ಅವಕಾಶಗಳ ಮಾಹಿತಿ ನೀಡಿದ ಸಚಿವರು, ನವೆಂಬರ್ 2 ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಭೆಗೆ ಕೃಷ್ಣ ಅವರನ್ನು ಔಪಚಾರಿಕವಾಗಿ ಆಹ್ವಾನಿಸಿದರು.
“ಉದ್ಯಮಕ್ಕೆ ಪೂರಕ ವಾತಾವರಣ ಇರುವ ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಉದ್ದೇಶ ಇದೆ,” ಎಂದು ಕೃಷ್ಣ ಈ ಸಮಯದಲ್ಲಿ ತಿಳಿಸಿದ್ದಾರೆ.
ಹಲವು ರೀತಿಯ ಲಸಿಕೆಗಳನ್ನು ಉತ್ಪಾದಿಸುವ ಭಾರತ್ ಬಯೋಟೆಕ್‌ನ ಘಟಕ ಈಗಾಗಲೆ ಮಾಲೂರಿನಲ್ಲಿದೆ. ಮತ್ತಷ್ಟು ಹೂಡಿಕೆಗೆ ಈ ಮೂಲಕ ಆಸಕ್ತಿ ತೋರಿದ್ದಾರೆ.
ಸಮಾವೇಶದ ಪೂರ್ವಭಾವಿಯಾಗಿ ಹೈದರಾಬಾದ್‌ನಲ್ಲಿ ಕೈಗೊಂಡಿರುವ ರೋಡ್‌ಶೋನಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ | Nasal Vaccine | ಕೊರೊನಾ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ; ಮೂಗಿನ ಮೂಲಕ ನೀಡುವ ಲಸಿಕೆಗೆ ಅನುಮತಿ