ಬೆಂಗಳೂರು: ಸೆಪ್ಟೆಂಬರ್ ೭ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ತಮಿಳುನಾಡು, ಕೇರಳ ತಿರುಗಾಟ ಮುಗಿಸಿ ಶುಕ್ರವಾರ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿದೆ. ಕರ್ನಾಟಕದಲ್ಲಿ ೨೨ ದಿನ ಸಂಚರಿಸಲಿರುವ ಈ ಯಾತ್ರೆಯ ಮೊದಲ ದಿನ ರಾಹುಲ್ ಗಾಂಧಿ ಮತ್ತು ತಂಡ ೧೫ ಕಿ.ಮೀ. ಪಾದಯಾತ್ರೆ ನಡೆಸಿತು.
ಶುಕ್ರವಾರ ಚಾಮರಾಜ ನಗರ ಜಿಲ್ಲೆಯ ಗುಂಡ್ಲು ಪೇಟೆಯಿಂದ ಹೊರಟ ಕಾಂಗ್ರೆಸ್ ನಾಯಕರ ನಡಿಗೆ ಸಂಜೆ ಹೊತ್ತಿಗೆ ೧೫ ಕಿ.ಮೀ. ದೂರದ ಬೇಗೂರು ತಲುಪಿದೆ. ಅಲ್ಲಿನ ಸರಕಾರಿ ಪ್ರೌಢ ಶಾಲೆ ಮೈದಾನದಲ್ಲೇ ರಾಹುಲ್ ಮತ್ತು ತಂಡ ವಾಸ್ತವ್ಯ ಹೂಡಿದೆ. ಇದರೊಂದಿಗೆ ಕರ್ನಾಟಕದಲ್ಲಿ ಮೊದಲ ದಿನದ ಭಾರತ್ ಜೋಡೋ ಪಾದಯಾತ್ರೆ ಅಂತ್ಯಗೊಂಡಿದೆ. ಮೊದಲ ದಿನ ಭರ್ಜರಿ ಸ್ಪಂದನೆ ಸಿಕ್ಕಿರುವ ಖುಷಿಯಲ್ಲಿದ್ದಾರೆ ಕಾಂಗ್ರೆಸ್ ನಾಯಕರು.
ಮೊದಲ ದಿನ ರಾಹುಲ್ ಗಾಂಧಿ ಅವರು ಚಾಮರಾಜ ನಗರ ಸರಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಬಂಧುಗಳನ್ನು ಭೇಟಿಯಾಗಿ ಸಾಂತ್ವನ ಕೇಳಿದರು. ಅವರ ಕಷ್ಟದ ಕಥೆಗಳನ್ನು ಕೇಳಿಕೊಂಡು ಸಹಾಯದ ಭರವಸೆ ನೀಡಿದರು.
ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ಆಕ್ಸಿಜನ್ ದುರಂತದ ಪರಿಹಾರ ಹೆಚ್ಚಿಸುತ್ತೇವೆ, ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸುತ್ತೇವೆ. ಸಂತ್ರಸ್ತರಿಗೆ ನ್ಯಾಯ ನೀಡುತ್ತೇವೆ ಎಂದು ಭರವಸೆ ನೀಡಲಾಯಿತು.
ವಿದ್ಯಾರ್ಥಿನಿ ಡಾಲಿ ಜತೆ ಹೆಜ್ಜೆ ಹಾಕಿದ ವಿದ್ಯಾರ್ಥಿನಿ ದಾಲಿಯಾ
ಭಾರತ್ ಜೋಡೊ ಯಾತ್ರೆ ವೇಳೆ ೯ನೇ ತರಗತಿ ವಿದ್ಯಾರ್ಥಿನಿ ದಾಲಿಯಾಗೆ ರಾಹುಲ್ ಅವರ ಜತೆ ನಡೆಯುವ ಮಾತನಾಡುವ ಅವಕಾಶ ಸಿಕ್ಕಿದೆ. ಆಕೆ ಎಷ್ಟನೇ ಕಲಿಯುತ್ತಿದ್ದಾಳೆ, ಏನಿಷ್ಟ ಎಂದೆಲ್ಲ ರಾಹುಲ್ ಕೇಳಿದರು.
ʻʻಅವರನ್ನು ನೋಡಲು ಬಂದಿದ್ದೆ. ನೋಡಿದ್ದು ಖುಷಿ ಆಗಿದೆ. ನಾನು ಏನು ಓದುತ್ತಿದ್ದೇನೆ. ನನ್ನ ಗೋಲ್ ಏನು ಎಂದು ಕೇಳಿದ್ರು. ಮುಂದೆ ಅವರೇ ಪ್ರಧಾನ ಮಂತ್ರಿ ಆಗಬೇಕು. ಮುಂದೆ ಅಷ್ಟೇ ಅಲ್ಲ ನಿರಂತರವಾಗಿ ಅವರೇ ಪಿಎಂ ಆಗಿರಬೇಕು ಎಂದು ಖುಷಿಯಿಂದ ಹೇಳಿದಳು ದಾಲಿಯಾ
ಡಿಕೆಶಿ ಜತೆ ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು
ಪಾದಯಾತ್ರೆಯಲ್ಲಿ ರಾಹುಲ್ ಜತೆಗೆ ನಡೆದ ಡಿಕೆಶಿ ಅವರಿಗೂ ಅಭಿಮಾನಿಗಳು ಪ್ರೀತಿ ತೋರಿದರು. ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಕಾರ್ಯಕರ್ತರು ಮುಗಿಬಿದ್ದ ಘಟನೆ ಬೆಂಡಗಳ್ಳಿ ಸಮೀಪ ನಡೆಯಿತು
ಭಾರತ್ ಜೋಡೊ ಯಾತ್ರೆಯಲ್ಲೂ ಅಪ್ಪು ಜಪ
ಗುಂಡ್ಲು ಪೇಟೆ ಕಾಂಗ್ರೆಸ್ ಕಾರ್ಯಕರ್ತರು ಅಪ್ಪು ಫೋಟೊ ಹಿಡಿದು ಹೆಜ್ಜೆ ಹಾಕಿದರು. ರಾಹುಲ್ ಗಾಂಧಿ ಅವರಿಗೆ ಫೋಟೊ ನೀಡಲೂ ಪ್ರಯತ್ನ ಮಾಡಿದರು.
ಡ್ರೋನ್ ಕ್ಯಾಮೆರಾ ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ
ರಾಹುಲ್ ಗಾಂಧಿ ಅವರ ಸುತ್ತಮುತ್ತ ಡ್ರೋನ್ ಬಳಸುವಂತಿಲ್ಲ ಎಂದು ಭದ್ರತಾ ಸಿಬ್ಬಂದಿ ಮೊದಲೇ ಸೂಚಿಸಿದ್ದರು. ಆದರೆ, ಡಿ.ಕೆ . ಶಿವಕುಮಾರ್ ಆಪ್ತ ಶಿವು ಎಂಬವರು ಡ್ರೋನ್ ಮೂಲಕ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇದನ್ನು ಗಮನಿಸಿದ ರಾಹುಲ್ ಭದ್ರತಾ ಸಿಬ್ಬಂದಿ ಎರಡು ಬಾರಿ ಎಚ್ಚರಿಕೆ ನೀಡಿದರು. ಅದಕ್ಕೆ ಕಿವಿಗೊಡದಿದ್ದಾಗ ಡ್ರೋನ್ ವಶಪಡಿಸಿಕೊಂಡರು. ಮನವಿ ಮಾಡಿದರು ವಾಪಸ್ ಕೊಡಲಿಲ್ಲ.
ಟ್ವೀಟ್‌ನಲ್ಲೂ ರಾಹುಲ್ ಒಗ್ಗಟ್ಟಿನ ಮಂತ್ರ
ರಾಜ್ಯಕ್ಕೆ ಪ್ರವೇಶ ಪಡೆಯುತ್ತಿದ್ದಂತೆಯೇ ರಾಹುಲ್ ಗಾಂಧಿ ಒಗ್ಗಟ್ಟಿನ ಮಂತ್ರ ಪಠಿಸಲು ಆರಂಭಿಸಿದ್ದಾರೆ. ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಕೈ ಹಿಡಿದು ನಗಾರಿ ಬಾರಿಸಿದ್ದ ಅವರು ಟ್ವೀಟ್‌ನಲ್ಲೂ ಅದೇ ಅಭಿಪ್ರಾಯ ಮಂಡಿಸಿದ್ದಾರೆ. ʻʻಕೂಡಿ ಬಾಳಿದರೇ ಸ್ವರ್ಗʼʼ ಎಂದು ಕನ್ನಡದಲ್ಲಿ ಬರೆದು ಟ್ವೀಟ್ ಮಾಡಿದ್ದಾರೆ.