Site icon Vistara News

ಕರ್ನಾಟಕದಲ್ಲಿ ʼಭಾರತ್‌ ಜೋಡೊʼ ಹೆಸರು ಬದಲು: ಅಕ್ಟೋಬರ್‌ 3 ರಿಂದ 21 ದಿನ ಯಾತ್ರೆ

ಬೆಂಗಳೂರು: ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಪ್ರಯುಕ್ತ ಕಾಂಗ್ರೆಸ್‌ ವತಿಯಿಂದ ದೇಶಾದ್ಯಂತ ಆಯೋಜಿಸಲಾಗಿರುವ ಭಾರತ್‌ ಜೋಡೊ ಯಾತ್ರಾ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಎಂದು ಹೆಸರು ಬದಲಿಸಲಾಗಿದೆ. ಈ ಕುರಿತು ಹೊಸ ಲೋಗೊವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಅಕ್ಟೋಬರ್‌ 3ರಿಂದ ಕರ್ನಾಟಕದಲ್ಲಿ ಯಾತ್ರೆ ನಡೆಯಲಿದ್ದು, ಅಕ್ಟೋಬರ್‌ 19ರವರೆಗೆ 21 ದಿನ ಸಾಗಲಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಜಸ್ಥಾನದ ಉದಯಪುರ ಚಿಂತನ ಮಂಥನ ಶಿಬಿರದಲ್ಲಿ ವಿವಿಧ ಘಟಕಗಳ ಪ್ರಮುಖರು, ಸಂಸದರು ಸೇರಿದಂತೆ ಆರುನೂರು ನಾಯಕರು ಪಾಲ್ಗೊಂಡು ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ತೀರ್ಮಾನಿಸಲಾಗಿದೆ. ಅದರಲ್ಲಿ ಪ್ರಮುಖ‌ವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ‘ಭಾರತದ ಐಕ್ಯತಾ ಯಾತ್ರೆ’ ಹಮ್ಮಿಕೊಳ್ಳುವ ನಿರ್ಧಾರ ಮಾಡಲಾಗಿತ್ತು.

ಇದರ ಜತೆಗೆ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡುವುದು ಹಾಗೂ ಆ.15ರಂದು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಮಾಡಲು ಸೂಚಿಸಿದ್ದರು. ಇದರಂತೆ ನಮ್ಮ ಎಲ್ಲ ಜಿಲ್ಲಾ ನಾಯಕರು ಕೆಲವು ಕ್ಷೇತ್ರದಲ್ಲಿ 225 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ. ಆ ಮೂಲಕ ನಮ್ಮ ನಾಯಕರು ಕಾರ್ಯಕರ್ತರು ಜನರನ್ನು ತಲುಪುತ್ತಿದ್ದಾರೆ. ಇನ್ನು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದು, ಯುವಕರೇ ಹೆಚ್ಚಾಗಿದ್ದರು ಎಂಬುದಕ್ಕೆ ನಿಮ್ಮ ಕಣ್ಣುಗಳೇ ಸಾಕ್ಷಿ ಎಂದರು.

ಭಾರತ ಒಗ್ಗೂಡಿಸಲು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದ ಐಕ್ಯತೆ ಯಾತ್ರೆ ನಡೆಯಲಿದೆ. ಈ ಪಾದಯಾತ್ರೆ ಜವಾಬ್ದಾರಿಯನ್ನು ಕಾಂಗ್ರೆಸ್ ವಹಿಸಿದ್ದರೂ ಇದು ಪಕ್ಷಾತೀತ ಯಾತ್ರೆಯಾಗಿರುತ್ತದೆ. ಈ ಭಾರತ ಐಕ್ಯತಾ ಯಾತ್ರೆ ರಾಜ್ಯದಲ್ಲಿ 21 ದಿನ, ಗುಂಡ್ಲುಪೇಟೆಯಿಂದ ರಾಯಚೂರುವರೆಗೆ ಸಾಗಲಿದೆ. ಒಂದೊಂದು ದಿನ ಯಾರು ಪಾಲ್ಗೊಳ್ಳಬೇಕು, 21 ದಿನವೂ ಯಾರು ಇರಬೇಕೆಂದು ನಿಶ್ಚಯಿಸಲಾಗಿದೆ. ನೋಂದಣಿಗೂ ಅವಕಾಶ ಇರಲಿದೆ. ಬೆಳಗ್ಗೆ ಹನ್ನೊಂದರವರೆಗೆ ಜನರೊಂದಿಗೆ ಚರ್ಚೆ ನಡೆಸಿ, ನಂತರ ಪಾದಯಾತ್ರೆ ಸಂಜೆ ವರೆಗೂ ಸಾಗಲಿದೆ. ಕನ್ನಡದ ಲೇಪದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇದೆ, ನಾಳೆ ಪದಾಧಿಕಾರಿಗಳ ಸಭೆ ನಡೆಯಲಿದೆ. ಪಾದಯಾತ್ರೆಯಲ್ಲಿ ಎಲ್ಲ ನಾಯಕರು ಜವಾಬ್ದಾರಿಯನ್ನು ಹಂಚಿಕೊಳ್ಳುತ್ತೇವೆ. ರಾಜ್ಯದ ಪ್ರಮುಖ ನಾಯಕರೆಲ್ಲರೂ ಸೆ. 7 ರಂದು ಕನ್ಯಾಕುಮಾರಿಯಲ್ಲಿ ಈ ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ ಎಂದರು.

ಬಿ.ಕೆ ಹರಿಪ್ರಸಾದ್ ಅವರಿಗೆ ರಾಜ್ಯದಲ್ಲಿನ ಪಾದಯಾತ್ರೆ ಉಸ್ತುವಾರಿ ನೀಡಲಾಗಿದ್ದು, ರಾಷ್ಟ್ರ ಮಟ್ಟದ ಸಮಿತಿಯಲ್ಲಿ ಕೆ.ಜೆ. ಜಾರ್ಜ್, ಸಲೀಂ ಅಹ್ಮದ್ ಅವರಿಗೆ ಸ್ಥಾನ ನೀಡಲಾಗಿದ್ದು, ವಿವಿಧ ಜವಾಬ್ದಾರಿ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಜತೆ ಸಭೆ ಮಾಡಿ ಯಾರೆಲ್ಲಾ 21 ದಿನ ನಡೆಯಬೇಕು ಎಂದು ಅಭಿಪ್ರಾಯ ಸಂಗ್ರಹಿಸಿ, ನಂತರ ಅವರನ್ನು ಆಯ್ಕೆ ಮಾಡಲಾಗುವುದು. ಎಲ್ಲರಿಗೂ ಅಧಿಕೃತ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಬಳ್ಳಾರಿಯಲ್ಲಿ ಒಂದು ದಿನ ಸಾರ್ವಜನಿಕ ಸಮಾವೇಶ ಮಾಡಲಾಗುವುದು. ಮೈಸೂರಿನಲ್ಲಿ ತಾಂತ್ರಿಕ ಸಮಸ್ಯೆ ಇದೆ. ಅಕ್ಟೋಬರ್ 4-5 ರಂದು ದಸರಾ ಹಬ್ಬ ನಡೆಯಲಿದ್ದು, ಈ ದಿನ ಯಾವ ರೀತಿ ಮಾಡಬೇಕು ಎಂದು ದೆಹಲಿ ನಾಯಕರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ದೇಶದಲ್ಲಿ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದ್ದು ದೇಶದ ಐಕ್ಯತೆಗೆ ಧಕ್ಕೆ ಬರುತ್ತಿದೆ. ಸಮಾಜದಲ್ಲಿ ಐಕ್ಯತೆಯನ್ನು ರಕ್ಷಿಸಲು, ಪ್ರಜಾಪ್ರಭುತ್ವ ಕಾಪಾಡಲು, ಸಂವಿಧಾನ ರಕ್ಷಿಸಲು, ಹೆಚ್ಚಾಗುತ್ತಿರುವ ಧರ್ಮರಾಜಕಾರಣವನ್ನು ಹಾಗೂ ಅದರ ಮೂಲಕ ಸಮಾಜವನ್ನು ಒಡೆಯುವುದರ ವಿರುದ್ಧ ಈ ಪಾದಯಾತ್ರೆಯನ್ನು ಮಾಡಲಾಗುತ್ತಿದೆ ಎಂದರು.

ಪ್ರತಿನಿತ್ಯ 7 ಗಂಟೆಗೆ ಆರಂಭ

ಯಾತ್ರೆಯ ಉಸ್ತುವಾರಿ ವಹಿಸಿರುವ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ಕರ್ನಾಟಕ ರಾಜ್ಯದ 125 ಕಾಂಗ್ರೆಸ್ ನಾಯಕರು ರಾಜ್ಯ ಪಾದಯಾತ್ರಿಗಳಾಗಿ ರಾಜ್ಯದ 511 ಕಿ.ಮೀ ನಡೆಯಲಿದ್ದಾರೆ. ಇನ್ನು ನೆರೆ ರಾಜ್ಯದ 125 ನಾಯಕರಿಗೆ ಅತಿಥಿ ಯಾತ್ರಿಗಳಾಗಿ ಅವಕಾಶ ನೀಡಲಾಗುವುದು. ನಿತ್ಯ ಬೆಳಗ್ಗೆ 7 ಗಂಟೆಗೆ ಸ್ಥಳೀಯವಾಗಿ ಪಾದಯಾತ್ರೆ ಆರಂಭವಾಗಲಿದೆ. 11 ಗಂಟೆವರೆಗೂ ಹಳ್ಳಿ ಹಾಗೂ ಗ್ರಾಮಸ್ಥರ ಜತೆ ಪಾದಯಾತ್ರೆ. ನಂತರ 11ರಿಂದ ಮಧ್ಯಾಹ 2 ಗಂಟೆವರೆಗೂ ಸ್ಥಳೀಯ ಸಾಹಿತಿಗಳು, ಕಲಾವಿದರು, ವಕೀಲರು, ಶಿಕ್ಷಕರು, ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರ ಜತೆ ಸಂಭಾಷಣೆ ನಡೆಸುತ್ತಾರೆ. ನಂತರ ಸುಮಾರು 20 ಸಾವಿರ ಜನ ಸ್ಥಳೀಯರು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಲಿದ್ದಾರೆ.

ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರುವರೆಗೂ ಪಾದಯಾತ್ರೆ ಸಾಗಿ ತೆಲಂಗಾಣಕ್ಕೆ ಪ್ರವೇಶಿಸುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ | Bharat Jodo Yatra | ಭಾರತ್ ಜೋಡೊ‌ ಯಾತ್ರೆ, ರಾಜ್ಯದಲ್ಲಿ ಸಂಚರಿಸುವ ರೂಟ್ ಮ್ಯಾಪ್ ಡಿಟೇಲ್ಸ್‌

Exit mobile version