ಬೆಂಗಳೂರು: ಕಾಂಗ್ರೆಸ್ ವತಿಯಿಂದ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ 21 ದಿನ ಸಾಗಿ ಇದೀಗ ಬೇರೆ ರಾಜ್ಯಗಳತ್ತ ಸಾಗಿದೆ. ಸುಮಾರು ಒಂದು ಸಾವಿರ ಕಿಲೋಮೀಟರ್ ಸಾಗಿದ ಯಾತ್ರೆಯಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ರಾಹುಲ್ ಗಾಂಧಿಯವರ ಫಿಟ್‌ನೆಸ್.
ಯಾತ್ರೆಯಲ್ಲಿ ನಡೆಯುತ್ತಿದ್ದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅಷ್ಟೆ ಅಲ್ಲದೆ ಯುವ ನಾಯಕರುಗಳೂ ಬಳಲಿದಂತೆ ಕಾಣುತ್ತಿದ್ದರು. ಆದರೆ ರಾಹುಲ್ ಗಾಂಧಿ ಮಾತ್ರ ಬೆಳಗ್ಗಿನ ಎನರ್ಜಿಯೊಂದಿಗೇ ನಡೆಯುತ್ತಿದ್ದರು.
ಒಮ್ಮೆಯಂತೂ ಸಂಜೆಯ ಯಾತ್ರೆ ಮುಗಿಸುವ ಸಮಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೈ ಹಿಡಿದು ಓಡಿದ್ದರು. ಇದೀಗ ತಮ್ಮ ಫಿಟ್‌ನೆಸ್ ಸೀಕ್ರೆಟ್ ಅನ್ನು ಕಾಂಗ್ರೆಸ್ ನಾಯಕರ ಬಳಿ 52 ವರ್ಷದ ನಾಯಕ ಬಿಚ್ಚುಮನಸ್ಸಿನಿಂದ (Candid) ಹಂಚಿಕೊಂಡಿದ್ದಾರೆ.
ಯಾತ್ರೆ ಪೂರ್ಣಗೊಂಡ ನಂತರದಲ್ಲಿ ಕಾಂಗ್ರೆಸ್ ನಾಯಕರ ಜತೆಗೆ ಅನೌಪಚಾರಿಕವಾಗಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಈ ವೇಳೆ ಅನೇಕ ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರ ಕೈಹಿಡಿದು ಓಡಿದ ಕುರಿತು ಮಾತನಾಡಿದ ರಾಹುಲ್, ನಿಜಕ್ಕೂ ಆ ಸಮಯದಲ್ಲಿ ಸಿದ್ದರಾಮಯ್ಯ ಪಂಚೆ ಉಟ್ಟಿದ್ದಾರೆ ಎಂದು ನನಗೆ ನೆನಪಾಗಲಿಲ್ಲ. ಸಾಮಾನ್ಯ ರೀತಿಯಲ್ಲೆ ಅವರ ಕೈ ಹಿಡಿದು ಓಡಿದೆ. ಆಮೇಲೆ ಗಾಬರಿ ಆಯಿತು. ಏನಾದರೂ ಆರೋಗ್ಯ ಹೆಚ್ಚು ಕಡಿಮೆ ಆದರೆ ಏನುಗತಿ ಎಂದು ಭದ್ರತಾ ಸಿಬ್ಬಂದಿಯನ್ನು ಕರೆದೆ.
ಅವರ ಕಡೆಗೆ ಗಮನ ಹರಿಸುವಂತೆ ಸೂಚಿಸಿದೆ. ಆದರೆ ಸಿದ್ದರಾಮಯ್ಯ ಮಾತ್ರ ಅತ್ಯಂತ ಸಾಮಾನ್ಯ ರೀತಿಯಲ್ಲೇ ಇದ್ದರು. ಈ ವಯಸ್ಸಿನಲ್ಲೂ ಅವರು ಅತ್ಯಂತ ಆರೋಗ್ಯವಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಭಾರತ್ ಜೋಡೋ ಧ್ವಜ ಹಿಡಿದು ಹೋಗುತ್ತಿದ್ದ ಐವರು ವಿದ್ಯುತ್ ತಂತಿ ತಾಗಿ ಗಾಯಗೊಂಡಿದ್ದ ಘಟನೆಯನ್ನು ರಾಹುಲ್ ಗಾಂಧಿ ನೆನೆದಿದ್ದಾರೆ. ಐವರು ವಿದ್ಯುತ್ ಶಾಕ್‌ಗೆ ಒಳಗಾಗಿದ್ದನ್ನು ನಾನು ಕಣ್ಣಾರೆ ಕಂಡೆ. ಈ ವೇಳೆ ಸುತ್ತಮುತ್ತ ಇದ್ದವರೆಲ್ಲರೂ ಅವರಿಂದ ದೂರಕ್ಕೆ ಓಡುತ್ತಿದ್ದರು. ಆದರೆ ಡಿ.ಕೆ. ಶಿವಕುಮಾರ್ ಮಾತ್ರ ಅವರನ್ನು ರಕ್ಷಿಸಲು ಹತ್ತಿರಕ್ಕೆ ಧಾವಿಸುತ್ತಿದ್ದರು ಎಂದು ಮೆಚ್ಚುಗೆ ಸೂಚಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಕುಮಾರ್, ತೀರಾ ಹತ್ತಿರಕ್ಕೆ ಹೋದರೆ ಅಪಾಯ ಎಂದು ನನಗೂ ಗೊತ್ತಿತ್ತು. ಆದರೆ ಅವರ ಬಟ್ಟೆಯನ್ನು ಮಾತ್ರ ಹಿಡಿದು ದೂರಕ್ಕೆ ಎಳೆದರೆ ರಕ್ಷಿಸಬಹುದು ಎಂದು ಧಾವಿಸಿದೆ ಎಂದು ಶಿವಕುಮಾರ್ ಹೇಳಿದರು.
ಖಾದರ್ ಒಂದು ಕೆ.ಜಿ. ಹೆಚ್ಚಳ
ಯಾತ್ರೆಯಲ್ಲಿ ಭಾಗವಹಿಸಿದವರೆಲ್ಲರೂ ಮೂರರಿಂದ ನಾಲ್ಕು ಕೆ.ಜಿ. ಕಡಿಮೆಯಾಗಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರು. ಪ್ರಿಯಾಂಕ್ ಖರ್ಗೆ ಸುಮಾರು ನಾಲ್ಕು ಕೆ.ಜಿ. ಕಡಿಮೆ ಆಗಿದ್ದಾಗಿ ಹೇಳಿದರು. ಈ ವೇಳೆ, ನೀವೆಷ್ಟು ಕೆ.ಜಿ. ಕಡಿಮೆ ಆಗಿದ್ದೀರಿ? ಎಂದು ಶಾಸಕ ಯು.ಟಿ. ಖಾದರ್ ಅವರನ್ನು ರಾಹುಲ್ ಗಾಂಧಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಖಾದರ್, ನನ್ನ ಒಂದು ಕೆ.ಜಿ. ಹೆಚ್ಚಳವಾಗಿದೆ ಎಂದಾಗ ಸುತ್ತ ಇದ್ದವರೆಲ್ಲರೂ ನಕ್ಕರು.
ಫಿಟ್‌ನೆಸ್ ಮಂತ್ರ
ದಿನಪೂರ್ತಿ ನಡೆಯುತ್ತಿದ್ದರೂ ದಣಿವರಿಯದೇ ಇದ್ದದ್ದರ ಕುರಿತು ರಾಹುಲ್ ಗಾಂಧಿ ಮಾತನಾಡಿದರು. ನಾನು 35-40 ವರ್ಷದವನಿದ್ದಾಗ ದಿನಕ್ಕೆ ಸುಮಾರು ಹತ್ತು ಕಿ.ಮೀ. ಓಡುತ್ತಿದ್ದೆ. ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ಪ್ರತಿದಿನವೂ ಇದನ್ನು ಮಾಡಿದೆ. ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ, ದೀರ್ಘ ಕಾಲದವರೆಗೆ ಇದನ್ನು ರೂಢಿಸಿಕೊಂಡರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರಿಂದ ಬಹಳ ಲಾಭವಿದೆ ಎಂದು ಹೇಳಿದರು.
ಮಾತುಕತೆಯ ನಡುವೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ಮಾತನಾಡಿಸಿರುವ ರಾಹುಲ್, ಪರಸ್ಪರರ ಕುರಿತು ಅಭಿಪ್ರಾಯ ಕೇಳಿದ್ದಾರೆ. ಸಿದ್ದರಾಮಯ್ಯ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಅವರು ಹಿಂದುಳಿದ ವರ್ಗಗಳ ನಾಯಕ ಎಂದಿದ್ದಾರೆ. ವೈಯಕ್ತಿಕವಾಗಿ ಸಿದ್ದರಾಮಯ್ಯ ಏನು? ಎಂಬ ಪ್ರಶ್ನೆಗೆ, ತಮ್ಮ ಹಿಂಬಾಲಕರನ್ನು ಅವರು ರಕ್ಷಿಸುತ್ತಾರೆ ಎಂದು ಉತ್ತರಿಸಿದ್ದಾರೆ.
ಶಿವಕುಮಾರ್ ಕುರಿತು ಮಾತನಾಡಿರುವ ಸಿದ್ದರಾಮಯ್ಯ, ಅವರೊಬ್ಬ ಉತ್ತಮ ಸಂಘಟಕ. ದಿನರಾತ್ರಿಯೆನ್ನದೆ ಪರಿಶ್ರಮ ಪಡುತ್ತಾರೆ ಎಂದು ಶ್ಲಾಘಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಬಿಜೆಪಿ ಸುಳ್ಳು ನಿರ್ಮಿಸುವ ಫ್ಯಾಕ್ಟರಿ. ಬಿಜೆಪಿ, ಆರ್‌ಎಸ್‌ಎಸ್, ಮೋದಿ ಎಂದರೆ ಏನು ಎದು ತಿಳಿದುಕೊಂಡರೆ ಜನರ ಮನಸ್ಸು ಬದಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ | ರಾಹುಲ್ ಗಾಂಧಿ ಫಿಟ್‌ನೆಸ್ ಬಗ್ಗೆ ಮಾತಾಡೋ ಹಾಗೇ ಇಲ್ಲ: ಡಿ.ಕೆ. ಶಿವಕುಮಾರ್ ಶ್ಲಾಘನೆ