Site icon Vistara News

Bharat Jodo | RSS, BJPಯದ್ದು ದೇಶಭಕ್ತಿ ಅಲ್ಲ, ದೇಶದ ಮೇಲಿನ ದಾಳಿ: ಬಳ್ಳಾರಿಯಲ್ಲಿ ರಾಹುಲ್‌ ವಾಗ್ದಾಳಿ

rahul gandhi speech bellari

ಬಳ್ಳಾರಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌) ಹಾಗೂ ಭಾರತೀಯ ಜನತಾ ಪಕ್ಷ(ಬಿಜೆಪಿ) ಈ ದೇಶದ ಮೇಲೆ ದಾಳಿ ಮಾಡುತ್ತಿವೆ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕನ್ಯಾಕುಮಾರಿಯಿಂದ ಆರಂಭಿಸಿ ಇದೀಗ ಒಂದು ಸಾವಿರ ಕಿಲೋಮೀಟರ್‌ ಕ್ರಮಿಸಿರುವ ಭಾರತ್‌ ಜೋಡೋ ಯಾತ್ರೆಯ ಭಾಗವಾಗಿ ಬಳ್ಳಾರಿಯಲ್ಲಿ ಆಯೋಜಿಸಿದ್ದ ಬೃಹತ್‌ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಮಾತನಾಡಿದರು.

ನಮ್ಮ ಯಾತ್ರೆಯನ್ನು ಆರಂಭಿಸಿದಾಗ ಮುಂದೆ ಸಾಗುವುದು ಹೇಗೆ ಎನ್ನಿಸುತ್ತಿತ್ತು. ಆದರೆ ಒಂದೆರಡು ದಿನ ನಡೆದ ನಂತರ ನಮ್ಮ ನಡಿಗೆ ಸರಾಗವಾಗಿ ಸಾಗುತ್ತಿದೆ. ಯಾತ್ರೆಯಲ್ಲಿ ವಿಭಿನ್ನ ಧರ್ಮ, ಜಾತಿಯ ಜನರು ಒಟ್ಟಿಗೆ ನಮ್ಮೊಂದಿಗೆ ಚಲಿಸುತ್ತಿದ್ದಾರೆ. ಇಡೀ ಯಾತ್ರೆಯಲ್ಲಿ ಎಲ್ಲಿಯೂ ಧ್ವೇಷ, ಹಿಂಸೆ ಸಿಗುವುದಿಲ್ಲ.

ನಡೆಯುವಾಗ ಗುಂಪಿನಲ್ಲಿ ಯಾರಾದರೂ ಕೆಳಗೆ ಬಿದ್ದರೆ ಎಲ್ಲರೂ ಅವರ ಸಹಾಯಕ್ಕೆ ಮುಂದೆ ಹೋಗುತ್ತೇವೆ. ನೀನು ಯಾವ ಜಾತಿ, ಯಾವ ಧರ್ಮದವನು ಎಂದು ಯಾರೂ ಕೇಳುವುದಿಲ್ಲ. ಆದರೆ ಇಂದು ದೇಶದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿಚಾರಧಾರೆಯಿಂದಾಗಿ ಹಿಂಸೆಯನ್ನು ಬಿತ್ತಲಾಗುತ್ತಿದೆ. ಇವರೆಲ್ಲ ಭಾರತದ ಮೇಲೆ ದಾಳಿ ನಡೆಸುತ್ತಿದ್ದಾರೆ. ಇವರದ್ದು ದೇಶಭಕ್ತಿಯಲ್ಲ, ದೇಶದ ವಿರುದ್ಧದ ಕೆಲಸ ಎಂದು ಆಕ್ರೋಶ ಹೊರಹಾಕಿದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಪ್ರಧಾನಿಯವರು ಹೇಳಿದ್ದರು. ಆದರೆ ಇದೀಗ ಕೋಟ್ಯಂತರ ಯುವಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಎರಡೂವರೆ ಲಕ್ಷ ಸರ್ಕಾರಿ ನೌಕರಿಗಳು ಖಾಲಿ ಇವೆ. ಪ್ರಧಾನಿ ಮಾಡಿದ ನೋಟು ಅಮಾನ್ಯೀಕರಣ, ಕರೊನಾ ಸಮಯದಲ್ಲಿನ ನೀತಿ, ಜಿಎಸ್‌ಟಿ ಅನುಷ್ಠಾನದಿಂದಾಗಿ ದೇಶದಲ್ಲಿ 12.5 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ. ಕರ್ನಾಟಕದಲ್ಲಿ ಪಿಎಸ್‌ಐ ಆಗಬೇಕೆಂದರೆ 80 ಲಕ್ಷ ರೂ. ಲಂಚ ಕೊಡಬೇಕು. ಹಣ ಇದ್ದರೆ ಮಾತ್ರ ಕರ್ನಾಟಕದಲ್ಲಿ ನೌಕರಿ ಖರೀದಿ ಮಾಡಬಹುದು. ಹಣ ಇಲ್ಲದಿದ್ದರೆ ಜೀವನ ಪೂರ್ತಿ ನಿರುದ್ಯೋಗಿ ಆಗಿರುತ್ತೀರಿ ಎಂದು ಯುವಕರಿಗೆ ತಿಳಿಸಿದರು.

ಕರ್ನಾಟಕದ ಸಹಕಾರಿ ಬ್ಯಾಂಕ್‌ಗಳಲ್ಲಿ, ಸಹಾಯಕ ಪ್ರಾಧ್ಯಾಪಕ ಉದ್ಯೋಗದಲ್ಲಿ ಹಗರಣ ನಡೆಯುತ್ತಿದೆ. ಇದಕ್ಕಾಗಿಯೇ ಕರ್ನಾಟಕ ಸರ್ಕಾರಕ್ಕೆ 40% ಸರ್ಕಾರ ಎಂದು ಹೆಸರಿಡಲಾಗಿದೆ. ಇಲ್ಲಿ ಏನೇ ಕೆಲಸ ಆಗಬೇಕಿದ್ದರೂ 40% ಕಮಿಷನ್‌ ಕೊಡಬೇಕಾಗುತ್ತದೆ. ಇದಕ್ಕಾಗಿ, ನಿರುದ್ಯೋಗ ಸಮಸ್ಯೆಯನ್ನು ಚರ್ಚಿಸಲು ಯಾತ್ರೆ ಮಾಡುತ್ತಿದ್ದೇವೆ ಎಂದರು.

ನಿರುದ್ಯೋಗ, ಧ್ವೇಷ ಸಾಲದೆಂಬಂತೆ ಈ ದೇಶದ ಜನರ ಮೇಲೆ ಹಣದುಬ್ಬರವನ್ನೂ ಹೇರಲಾಗುತ್ತಿದೆ ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ ರಾಹುಲ್‌ ಗಾಂಧಿ, ಬೆಲೆ ಹೆಚ್ಚಳ ವಿಪರೀತವಾಗಿದೆ. ಅದು ನಿಲ್ಲುವ ಯಾವುದೇ ಸೂಚನೆ ಇಲ್ಲ. ಎಲ್‌ಪಿಜಿ ಸಿಲಿಂಡರ್‌ 400 ರೂ.ಗೆ ಕೊಡುತ್ತೇವೆ ಎಂದು ಪ್ರಧಾನಿ ಹೇಳುತ್ತಿದ್ದರು. ತಾಯಂದಿರು ಹೊಗೆ ರಹಿತವಾಗಿ ಅಡುಗೆ ಮಾಡುತ್ತಾರೆ ಅದಕ್ಕಾಗಿ 400 ರೂ.ಗೆ ಎಲ್‌ಪಿಜಿ ನೀಡುತ್ತೇವೆ ಎಂದಿದ್ದರು. ಆದರೆ ಇಂದು ಸಿಲಿಂಡರ್‌ ದರ 1,000 ರೂ. ಆಗಿದೆ. ಇಂದು ಅಕ್ಕ ತಂಗಿಯರು ಏನು ಮಾಡಬೇಕು ಎಂದು ಪ್ರಧಾನಿ ಉತ್ತರ ನೀಡಬೇಕಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಇತಿಹಾಸದಲ್ಲಿಯೇ ಹೆಚ್ಚಳವಾಗಿದೆ. ಒಂದು ಕಡೆ ನಿರುದ್ಯೋಗ, ಇನ್ನೊಂದು ಕಡೆ ಬೆಲೆ ಏರಿಕೆ ನಡುವೆ ಜನಸಾಮಾನ್ಯರು ಅಪ್ಪಚ್ಚಿಯಾಗಿದ್ದಾರೆ ಎಂದು ವಿವರಿಸಿದರು.

ನಾನು ಯಾತ್ರೆಯ ಸಮಯದಲ್ಲಿ ರೈತರನ್ನು ಭೇಟಿ ಮಾಡುತ್ತಿದ್ದೇನೆ. ಅವರ ಪರಿಸ್ಥಿತಿಯನ್ನು ವಿಚಾರಿಸುತ್ತಿದ್ದೇನೆ. ರೈತರು ಎಷ್ಟು ಖರ್ಚು ಮಾಡುತ್ತಾರೆ ಎಂದು ಕೇಳುತ್ತೇನೆ. ಕೃಷಿ ಉತ್ಪಾದನೆ ನಂತರ ಎಷ್ಟು ಹಣ ಲಭಿಸುತ್ತಿದೆ ಎಂದೂ ವಿಚಾರಿಸುತ್ತೇನೆ. ರೈತರಿಗೆ ಸಹಾಯ ಮಾಡುವ ಬದಲಿಗೆ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸುತ್ತಿದೆ. ರಸಗೊಬ್ಬರದ ಮೇಲೆ, ಟ್ರ್ಯಾಕ್ಟರ್‌ ಮೇಲೆ, ಕೀಟನಾಶಕಗಳ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತಿದೆ. ಕನಿಷ್ಟ ಬೆಂಬಲ ಬೆಲೆ ತಮಗೆ ಸಿಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇದು ಇಡೀ ದೇಶದ ರೈತರು ಎದುರಿಸುತ್ತಿರುವ ಸಂಕಷ್ಟ.

ಎಸ್‌ಸಿಎಸ್‌ಟಿ ವಿರೋಧಿ ಸರ್ಕಾರ

ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಿಸಿದ್ದು, ಈ ಕುರಿತು ಪ್ರಸ್ತಾಪ ಮಾಡಿದ ರಾಹುಲ್‌ ಗಾಂಧಿ, ಈ ಸರ್ಕಾರ ಎಸ್‌ಸಿಎಸ್‌ಟಿ ವಿರೋಧಿ ಎಂದರು. ಈ ಸರ್ಕಾರ ಎಸ್‌ಸಿಎಸ್‌ಟಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಎಸ್‌ಸಿಎಸ್‌ಟಿ ವಿರುದ್ಧ ದೌರ್ಜನ್ಯ 50% ಹೆಚ್ಚಳವಾಗಿದೆ. ಸಮುದಾಯದ ಅಭಿವೃದ್ಧಿಗೆ ನೀಡಬೇಕಾಗಿದ್ದ 8 ಸಾವಿರ ಕೋಟಿ ರೂ. ಬೇರೆ ಕೆಲಸಕ್ಕೆ ವರ್ಗಾವಣೆ ಮಾಡಲಾಗಿದೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ನ್ಯಾ. ನಾಗಮೋಹನ ದಾಸ್‌ ಸಮಿತಿ ರಚನೆ ಮಾಡಿದ್ದೆವು. ಈ ಸಮಿತಿಯು ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು. ಎಸ್‌ಸಿ ಮೀಸಲಾತಿಯನ್ನು 15-17ಕ್ಕೆ, ಎಸ್‌ಟಿ ಮೀಸಲಾತಿಯನ್ನು 3-7ಕ್ಕೆ ಹೆಚ್ಚಳ ಮಾಡಬೇಕಿತ್ತು. ಆದರೆ ಈ ಸರ್ಕಾರ ಜಾರಿಗೆ ವಿಳಂಬ ಮಾಡುತ್ತಿದೆ. ಅನುಷ್ಠಾನಕ್ಕೆ ಯಾವುದೇ ನೆಪ ಹೇಳದೆ ತಕ್ಷಣವೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕಕ್ಕೆ 371 ವಿಧಿ ಅನುಷ್ಠಾನಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಲ್‌.ಕೆ. ಆಡ್ವಾಣಿ ತಿರಸ್ಕಾರ ಮಾಡಿದ್ದರು. ಆದರೆ ಕಾಂಗ್ರೆಸ್‌ ಪಕ್ಷ ಇದನ್ನು ಜಾರಿ ಮಾಡಿ ವಿಶೇಷ ಸ್ಥಾನ ಮಾನ ನೀಡಿತು. ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಕ್ಕಿತು ಎಂದರು.

ಕುಟುಂಬದ ನಂಟು ಪ್ರಸ್ತಾಪ

ಕರ್ನಾಟಕದ ಜತೆಗೆ ತಮ್ಮ ಕುಟುಂಬ ಹೊಂದಿರುವ ನಂಟನ್ನು ರಾಹುಲ್‌ ಗಾಂಧಿ ನೆನಪಸಿದರು. ಬಳ್ಳಾರಿ ಜತೆಗೆ ನಮ್ಮ ಪರಿವಾರದೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದೆ. ನನ್ನ ತಾಯಿ ಇಲ್ಲಿಂದ ಸ್ಪರ್ಧೆ ಮಾಡಿ ತುಂಬು ಹೃದಯದ ಸಹಕಾರದಿಂದ ಜಯಗಳಿಸಿದ್ದರು. ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಜಯಗಳಿಸಿದ್ದರು. ಇದೆಲ್ಲವನ್ನೂ ನಾನು ಮರೆಯಲು ಸಾಧ್ಯವಿಲ್ಲ.

ಬಳ್ಳಾರಿಯ ಬಿಸಿಲು ನನಗೆ ಅರ್ಥ ಆಗಿದೆ. ಬೇಸಿಗೆಗೂ ಮುನ್ನವೇ ಇಷ್ಟು ಬಿಸಿಲು ಇದೆ. ಒಬ್ಬ ರೈತ, ಒಬ್ಬ ಕಾರ್ಮಿಕ ಬೇಸಿಗೆಯಲ್ಲಿ ಹೇಗಿರಬಹುದು ಎಂದು ನಾನು ಯೋಚಿಸುತ್ತಿದ್ದೆ. ನಾವು ಅಧಿಕಾರಕ್ಕೆ ಬಂದರೆ ರೈತರು, ಕಾರ್ಮಿಕರು, ಸಣ್ಣ ಉದ್ಯಮಿಗಳನ್ನು ಬೆಂಬಲಿಸುತ್ತದೆ ಎಂದು ಭರವಸೆ ನೀಡುತ್ತೇನೆ. ನನ್ನ ಜತೆ ನಡೆಯುತ್ತಿರುವುದಕ್ಕೆ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಇದನ್ನೂ ಓದಿ | Bharat Jodo | ಪಾದಯಾತ್ರೆಯಿಂದ ರಾಜ್ಯದಲ್ಲಿ 150 ಸೀಟು ಗೆಲ್ಲುವ ಅವಕಾಶ ಸೃಷ್ಟಿ: ಡಿಕೆಶಿ ವಿಶ್ವಾಸ

Exit mobile version