ಮೈಸೂರು: ಸಿದ್ದರಾಮಯ್ಯ ಅವರು ಎಷ್ಟು ಒಳ್ಳೆಯ ಭಾಷಣಕಾರನೋ ಅಷ್ಟೇ ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಳ್ಳುವುದರಲ್ಲೂ ಮುಂದು. ಹಿಂದೊಮ್ಮೆ ಕಾಂಗ್ರೆಸ್ ಪಕ್ಷವನ್ನೇ ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಹೇಳಿದ್ದರು. ದೇಶದಲ್ಲಿ ಸಾಲ ಮನ್ನಾ ಮಾಡಿದ್ದು ನರೇಂದ್ರ ಮೋದಿ ಎಂದಿದ್ದರು. ಮೈಸೂರಿನಲ್ಲಿ ನಡೆದ ಕಾಂಗ್ರೆಸ್‌ನ ಭಾರತ್ ಜೋಡೊ (Bharat jodo) ಯಾತ್ರೆ ಪೂರ್ವ ಸಿದ್ಧತಾ ಸಭೆಯಲ್ಲಿ ಕೂಡಾ ಇಂಥದ್ದೇ ಎಡವಟ್ಟು ಮಾಡಿಕೊಂಡು ಬಳಿಕ ಸರಿ ಮಾಡಿಕೊಂಡರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದು ಅವರು ಮಾತಿನ ಮಧ್ಯೆ ʻರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆʼ ಎನ್ನಲು ಹೋಗಿ, ʻನರೇಂದ್ರ ಮೋದಿ ಪಾದಯಾತ್ರೆ ಮಾಡ್ತಿದ್ದಾರೆʼʼ ಎಂದು ಹೇಳಿದರು. ಬಿಜೆಪಿಯನ್ನು, ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಈ ಮಾತು ಹೇಳಿದ ಕೂಡಲೇ ಎಚ್ಚೆತ್ತುಕೊಂಡರು. ಮತ್ತೆ ಜನರನ್ನು ಉದ್ದೇಶಿಸಿ ʻನಾನು ನರೇಂದ್ರ ಮೋದಿ ಎಂದನಾʼ ಎಂದು ಕೇಳಿದ ಸಿದ್ದು, ಬಳಿಕ ʻಅಲ್ಲ. ರಾಹುಲ್ ಗಾಂಧಿ ಪಾರಯಾತ್ರೆ ಮಾಡ್ತಿದ್ದಾರೆʼʼ ಎಂದು ಭಾಷಣ ಮುಂದುವರಿಸಿದರು.
ಪಾದಯಾತ್ರೆಯಿಂದ ಲಾಭ ಇದೆ
ಪಾದಯಾತ್ರೆ ಮಾಡುವುದರಿಂದ ರಾಜಕೀಯ ಲಾಭ ಇದೆ ಎಂದು ಹೇಳಿದ ಸಿದ್ದರಾಮಯ್ಯ, ʻʻಮುಂದಿನ ಆರು ತಿಂಗಳಲ್ಲಿ ನಮ್ಮಲ್ಲಿ ಚುನಾವಣೆ ನಡೆಯಲಿದೆ. ನೀವು ಹೆಚ್ಚು ಜನರನ್ನು ಸೇರಿಸಿದ್ದಷ್ಟು ನಿಮಗೇ ಅನುಕೂಲ ಜಾಸ್ತಿ. ರಾಹುಲ್ ಗಾಂಧಿ ಐತಿಹಾಸಿಕ ಪಾದಯಾತ್ರೆ ಮಾಡ್ತಿದ್ದಾರೆ. ನಾವೂ ಸಹ ಈ ಪಾದಯಾತ್ರೆ ಕರ್ನಾಟಕದಲ್ಲಿ ಐತಿಹಾಸಿಕವಾಗಿರುವಂತೆ ತೋರಿಸಬೇಕಿದೆʼʼ ಎಂದು ಹೇಳಿದರು.
ಮತಾಂತರ ಕಾಯ್ದೆ ಸಂವಿಧಾನ ವಿರೋಧಿ
ಸರಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯಿದೆ ಸಂವಿಧಾನಕ್ಕೆ ಮತ್ತು ಮೂಲಭೂತ ತತ್ವಕ್ಕೆ ವಿರುದ್ಧವಾಗಿದೆ ಎಂದ ಸಿದ್ದರಾಮಯ್ಯ, ʻʻಸಂವಿಧಾನ ಎಲ್ಲರಿಗೂ ಸಮಾನವಾದ ಅವಕಾಶ ನೀಡಿದೆ. ಎಲ್ಲ ಧರ್ಮೀಯರು ಅವರವರ ಧರ್ಮವನ್ನು ಆಚರಿಸಬಹುದು. ಕುವೆಂಪು ಅವರು ನಮ್ಮ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ಅದನ್ನು ನಾವು ಹಾಗೆ ಉಳಿಸಿಕೊಳ್ಳಬೇಕಲ್ಲʼʼ ಎಂದರು.
ಹೆಸರು ಮಾತ್ರ ಅಮೃತ, ಉಳಿದುದೆಲ್ಲ ವಿಷ!
ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಸರಕಾರದ ಮಂತ್ರಿಗಳು ಮತ್ತು ಅಧಿಕಾರಿಗಳು ಕೋಟ್ಯಂತರ ರೂ. ಕೊಳ್ಳೆ ಹೊಡೆದಿದ್ದಾರೆ. ಸುಮಾರು 300 ಅಭ್ಯರ್ಥಿಗಳಿಂದ 600 ಕೋಟಿಯಷ್ಟು ಹಣ ಪಡೆದಿದ್ದಾರೆ. ಬಿಜೆಪಿಯವರಿದ್ದಾರಲ್ಲ ಇವರಿಗೆ ಮಾನ ಮರ್ಯಾದೆ ಯಾವುದೂ ಇಲ್ಲ. ಲಜ್ಜಗೆಟ್ಟ ಜನ ಇವರು ಎಂದು ನೇರ ತರಾಟೆಗೆ ತೆಗೆದುಕೊಂಡರು. ಜತೆಗೆ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಅವರ ಮೇಲೂ ಪ್ರಹಾರ ಮಾಡಿದರು.
ʻʻಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥ ಯಾರು? ಪೌಲ್.. ಅಮೃತ್ ಪೌಲ್. ಹೆಸರು ಮಾತ್ರ ಅಮೃತ. ಉಳಿದುದು ಎಲ್ಲ ವಿಷಾಮೃತ. ಈತನೇ ಭದ್ರತಾ ಕೊಠಡಿಯ ಬೀಗ ತೆಗೆದು ಉತ್ತರ ಪತ್ರಿಕೆ ತಿದ್ದಲು ಬಿಟ್ಟಿದ್ದ. ಹಿಂದೆ ಈ ರೀತಿ ಯಾವಾಗಲಾದ್ರು ಆಗಿತ್ತೇನ್ರಪʼʼ ಎಂದ ಸಿದ್ದು ಜನರಿಂದ ʻಇಲ್ಲ.. ಇಲ್ಲʼ ಎಂಬ ಉತ್ತರ ಪಡೆದರು. ʻʻಮತ್ತೆ ಇವರನ್ನ, ಇವರ ಸರ್ಕಾರವನ್ನ ತೆಗಿಬೇಕಲ್ವಾʼʼ ಎಂದು ಪ್ರಶ್ನಿಸಿದರು. ಆಗ ʻಹೌದು.. ಹೌದುʼ ಎಂಬ ಉತ್ತರ ಬಂತು.
ಮನೆ ಕಟ್ಟೋದು ಬಿಡಿ, ಬಿಲ್ಲೇ ಕೊಟ್ಟಿಲ್ಲ!
ʻʻನಾನು ಸಿಎಂ ಆಗಿದ್ದಾಗ ನಮ್ಮ ಸರ್ಕಾರದಲ್ಲಿ 15 ಲಕ್ಷ ಮನೆ ಮಂಜೂರು ಮಾಡುವುದಷ್ಟೇ ಅಲ್ಲ ಕಟ್ಟಿಸಿದ್ದೆವು.
ಇವರು ಬಂದ ನಂತ್ರ ಕುಮಾರಸ್ವಾಮಿಯೂ ಸೇರಿ ನಾಲ್ಕು ವರ್ಷದಲ್ಲಿ ಒಂದೇ ಒಂದು ಮನೆ ಕಟ್ಟಲಾಗಿಲ್ಲ.
ಮಂಜೂರು ಮಾಡಲಾಗಿಲ್ಲ. ನಾವು ಬಿಡುಗಡೆ ಮಾಡಿದ್ದ ಮನೆಗಳ ಬಿಲ್ ಸಹ ನೀಡಿಲ್ಲʼʼ ಎಂದರು ಸಿದ್ದರಾಮಯ್ಯ.
ಇದನ್ನೂ ಓದಿ | Bharat Jodo Yatra | ಭಾರತ್ ಜೋಡೊ ಯಾತ್ರೆ ಮಧ್ಯೆಯೇ ಸಿದ್ದು- ಡಿಕೆಶಿ ಸಂಘರ್ಷ ಉಲ್ಬಣ