ಚಾಮರಾಜನಗರ: ಭಾರತ್ ಜೋಡೊ ಯಾತ್ರೆಯ (Bharat Jodo) ಎರಡನೇ ದಿನವಾದ ಶನಿವಾರ ಚಾಮರಾಜನಗರದಿಂದ ಮೈಸೂರಿಗೆ ಆಗಮಿಸಿ ಸಂಜೆ ಭಜನೆ ಮೂಲಕ ತೆರೆ ಎಳೆಯಲಾಗಿದ್ದು, ಭಾನುವಾರ ತಾಂಡವಪುರದಿಂದ ಮೂರನೇ ದಿನದ ಪಾದಯಾತ್ರೆ ಆರಂಭವಾಗಲಿದೆ. ಶನಿವಾರ ಪಾದಯಾತ್ರೆಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಕೈ ನಾಯಕರು ಸಾಥ್ ನೀಡಿದರು.
ಬೆಳಗ್ಗೆ 6.30ಕ್ಕೆ ಆರಂಭವಾಗಬೇಕಿದ್ದ ನಡಿಗೆ ಮಳೆಯಿಂದಾಗಿ ಒಂದು ಗಂಟೆ ತಡವಾಗಿತ್ತು. ಚಾಮರಾಜನಗರ ಜಿಲ್ಲೆಯ ತೊಂಡರವಾಡಿ ಗೇಟ್ ಬಳಿ ಆರಂಭವಾಯಿತು. ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು ಹೆಜ್ಜೆ ಹಾಕಿದರು.
ಕಾರು ಹತ್ತಿದ ಸಿದ್ದರಾಮಯ್ಯ, ರಾಹುಲ್ ಜತೆಯೇ ಇದ್ದ ಡಿಕೆಶಿ
ಸ್ವಲ್ಪ ದೂರ ನಡೆದ ನಂತರ ಸಿದ್ದರಾಮಯ್ಯ ವಿಶ್ರಾಂತಿಗೆಂದು ಕಾರು ಹತ್ತಿದರೆ, ಡಿಕೆಶಿ ಮಾತ್ರ ರಾಹುಲ್ ಗಾಂಧಿ ಜತೆಯಲ್ಲೇ ನಂಜನಗೂಡಿನ ಕಳಲೆವರೆಗೂ ಸುಮಾರು 13 ಕಿಲೋ ಮೀಟರ್ ಹೆಜ್ಜೆ ಹಾಕಿದರು. ಕಳಲೆ ಬಳಿ ಮಧ್ಯಾಹ್ನದ ಊಟ ಮತ್ತು ವಿಶ್ರಾಂತಿ ಪಡೆದು ನಂತರ ಸಾಹಿತಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ನಂತರ 4 ಗಂಟೆಗೆ ಪುನಃ ಪಾದಯಾತ್ರೆ ಆರಂಭ ಮಾಡಿದರು.
ಇದನ್ನೂ ಓದಿ | ಗುದ್ದಲಿ ಪೂಜೆ ಗದ್ದಲ | ₹50 ಕೋಟಿ ಅನುದಾನ ತಪ್ಪಿಸಲು ನೋಡಿದ ಎಚ್‌ಡಿಕೆ ಗೂಂಡಾಗಳ ಕರೆಸಿದರು: ಸಿಪಿವೈ
ಪಾದಯಾತ್ರೆಯಲ್ಲಿ ಪೇಸಿಎಂ ಟಿ ಷರ್ಟ್ ಧರಿಸಿ ಬಾವುಟ ಹಿಡಿದು ಸಾಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಸಿಂಧಗಿ ಮೂಲದ ಕಾರ್ಯಕರ್ತ ಅಕ್ಷಯ್ ಎಂಬಾತ ಶುಕ್ರವಾರದಿಂದಲೂ ಪಾದಯಾತ್ರೆಯಲ್ಲಿ ಪೇಸಿಎಂ ಟೀ ಶರ್ಟ್ ಧರಿಸಿ ಬಾವುಟ ಹಿಡಿದು ಹೆಜ್ಜೆ ಹಾಕುತ್ತಿದ್ದ. ಈ ಬಗ್ಗೆ ಬಿಜೆಪಿ ಮುಖಂಡರು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಹೀಗಾಗಿ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಇನ್ನೊಂದೆಡೆ ಪಾದಯಾತ್ರೆ ನಡುವೆ ದಿಢೀರ್ ಎಂದು ರಾಹುಲ್ ಗಾಂಧಿ ಸಿಂಧುವಳ್ಳಿ ಗೇಟ್ ಬಳಿಯಿರುವ ಉಪ್ಪಿನಕಾಯಿ ಕಾರ್ಖಾನೆಗೆ ತೆರಳಿ ಕಾಫಿ ಕುಡಿದು, ನಂತರ ಮತ್ತೆ ಪಾದಯಾತ್ರೆ ಆರಂಭಿಸಿದರು.
ಸಂಜೆ 4 ಗಂಟೆಗೆ ಕಳಲೆ ಬಳಿಯಿಂದ ಆರಂಭವಾದ ಪಾದಯಾತ್ರೆ ತಾಂಡವಪುರಕ್ಕೆ ತಲುಪುವ ಮೂಲಕ ಎರಡನೇ ದಿನದ ಪಾದಯಾತ್ರೆ ಮುಕ್ತಾಯವಾಯಿತು. ತಾಂಡವಪುರದಲ್ಲಿ ವಾಸ್ತವ್ಯ ಹೂಡುವ ನಾಳೆ ಬೆಳಗ್ಗೆ ಗಾಂಧಿ ಜಯಂತಿಯ ಪ್ರಯುಕ್ತ ಮಹಾತ್ಮ ಗಾಂಧಿ ಭೇಟಿ ನೀಡಿದ್ದ ಬದನವಾಳು ಗ್ರಾಮದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್ ತೆರಳಿ ಭಜನೆ ಮಾಡಿ ನಂತರ ತಾಂಡವಪುರದಿಂದ ಮೂರನೇ ದಿನದ ಪಾದಯಾತ್ರೆ ಆರಂಭಿಸಲಿದ್ದಾರೆ.
ಇದನ್ನೂ ಓದಿ | ಬೆಂಗಾಲಿ ಶಾರದಾ ಉತ್ಸವಕ್ಕೆ ನಟಿ ಪ್ರಿಯಾಂಕಾ ಉಪೇಂದ್ರ ಅದ್ಧೂರಿ ಚಾಲನೆ