ಚಿತ್ರದುರ್ಗ: ರಾಜ್ಯದಲ್ಲಿ ಕಳೆದ ೧೨ ದಿನಗಳಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಅದ್ಧೂರಿ ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಕಾಂಗ್ರೆಸ್ ಅಕ್ಟೋಬರ್ ೧೫ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಭಾಗವಾಗಿಯೇ ಈ ಬೃಹತ್ ಸಮಾವೇಶ ನಡೆಯಲಿದ್ದು, ಅಂದು ಮಧ್ಯಾಹ್ನ ಒಂದು ಗಂಟೆಗೆ ಸಮಾವೇಶ ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚಾಮರಾಜ ನಗರ,ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಹೆಜ್ಜೆ ಹಾಕಿದ ರಾಹುಲ್ ಗಾಂಧಿ ಇದೀಗ ಬೃಹತ್ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇಲ್ಲಿ ದೊಡ್ಡ ಮಟ್ಟದ ಸಮಾವೇಶ ನಡೆಸಿ ಸಿದ್ದರಾಮೋತ್ಸವದ ಬಳಿಕ ಮತ್ತೊಮ್ಮೆ ಕಾಂಗ್ರೆಸ್ ಸಾಮರ್ಥ್ಯದ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಅವರು ಈ ಸಮಾವೇಶದಲ್ಲಿ ಪಾಲ್ಗೊಳ್ಳಿದ್ದಾರೆ ಎಂದು ಹೇಳಲಾಗಿದ್ದು, ಈ ಮೂಲಕ ಇಡೀ ದೇಶಕ್ಕೆ ಸಂದೇಶ ರವಾನಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಭಾಗೆಲ್ ಕೂಡಾ ಇದರಲ್ಲಿ ಭಾಗಿಯಾಗಲಿದ್ದಾರೆ.
ಸಮಾವೇಶದಲ್ಲಿ 3 ಲಕ್ಷ ಜನ ಭಾಗಿ ಸಾಧ್ಯತೆ ಇದ್ದು, ಮೇಕೆದಾಟು ಪಾದಯಾತ್ರೆ, ಸಿದ್ದರಾಮೋತ್ಸವ, ಫ್ರೀಡಂ ರ‍್ಯಾಲಿ ಬಳಿಕ ನಡೆಯುತ್ತಿರುವ ದೊಡ್ಡ ಕಾರ್ಯಕ್ರಮ ಇದಾಗಲಿದೆ. ಈ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ರಣಕಹಳೆ ಮೊಳಗಿಸುವ ಉದ್ದೇಶವನ್ನೂ ಹೊಂದಿದೆ.
ಇದನ್ನೂ ಓದಿ | ದೇಶದಲ್ಲಿ ಕಾಂಗ್ರೆಸ್ ಮರು ಜೀವಕ್ಕೆ ಕರ್ನಾಟಕದಲ್ಲಿನ ರಾಹುಲ್ ಪಾದಯಾತ್ರೆ ನಿರ್ಣಾಯಕ