Site icon Vistara News

Bharat Jodo | ಶನಿವಾರ 1,000 ಕಿ.ಮೀ. ಗುರಿ ಮುಟ್ಟಲಿರುವ ಯಾತ್ರೆ: ಇಲ್ಲಿವರೆಗೆ ನಡೆದು ಬಂದ ದಾರಿ ಇಲ್ಲಿದೆ

bharat jodo 1000

ಬೆಂಗಳೂರು: ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್‌ ಜೋಡೊ ಯಾತ್ರೆ ಇದೀಗ ಕರ್ನಾಟಕದಲ್ಲಿ, ಮೂರನೇ ರಾಜ್ಯದ ಮೂಲಕ ಹಾದುಹೋಗುತ್ತಿದೆ. ಇದೇ ಸಂದರ್ಭದಲ್ಲಿ ಶನಿವಾರ ಬಳ್ಳಾರಿಯನ್ನು ತಲುಪಲಿದ್ದು, ಕನ್ಯಾಕುಮಾರಿಯಿಂದ ಆರಂಭಿಸಿದ ನಂತರ 1,000 ಕಿ.ಮೀ. ಸಾಗಿದಂತಾಗುತ್ತದೆ.

ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7ರಂದು ದಕ್ಷಿಣದ ತುದಿಯಾದ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಒಟ್ಟು 3,500 ಕಿಲೋಮೀಟರ್ ಗುರಿ ಸಾಧಿಸಬೇಕಾದ ಯಾತ್ರೆಯು ಭಾರತದ ಇತಿಹಾಸದಲ್ಲಿ ಯಾವುದೇ ಭಾರತೀಯರು ಕಾಲ್ನಡಿಗೆಯಲ್ಲಿ ನಡೆಸಿದ ಅತಿ ಉದ್ದದ ಮೆರವಣಿಗೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ.

ಮಹಾತ್ಮ ಗಾಂಧಿಯವರ ದಂಡಿ ಮೆರವಣಿಗೆಯು ಗುಜರಾತ್ ರಾಜ್ಯದ ಸಬರಮತಿ ಆಶ್ರಮದ ದಂಡಿ (ನವಸರಿ) ನಡುವೆ ಕಾಲ್ನಡಿಗೆಯಲ್ಲಿ (24 ದಿನಗಳಲ್ಲಿ 389 ಕಿಲೋಮೀಟರ್) ಉದ್ದದ ಮೆರವಣಿಗೆಯಾಗಿತ್ತು.

ದಿನನಿತ್ಯ ಬೆಳಗ್ಗೆ 6.30- 7 ಗಂಟೆಗೆ ಆರಂಭವಾಗುವ ಯಾತ್ರೆ ನಡುವೆ ಎರಡು ವಿರಾಮಗಳ ನಡುವೆ ಸರಾಸರಿ ೨೫ ಕಿಲೋಮೀಟರ್‌ ಸಾಗುತ್ತಿದೆ. ತಮಿಳುನಾಡಿನಿಂದ ಆರಂಭವಾಗಿ ನಂತರ ಕೇರಳ, ಇದೀಗ ಕರ್ನಾಟಕದಲ್ಲಿ ಸಾಗುತ್ತಿದೆ.

ಕಾಂಗ್ರೆಸ್‌ನ ಅಂಕಿ ಅಂಶಗಳ ಪ್ರಕಾರ ತಮಿಳುನಾಡಿನಲ್ಲಿ ಒಂದು ಲಕ್ಷ ಜನರು ಯಾತ್ರೆಯಲ್ಲಿ ಭಾಗವಹಿಸಿದ್ದರು. ಕೇರಳದಲ್ಲಿ 1.25 ಲಕ್ಷ ಜನರು, ಕರ್ನಾಟಕದಲ್ಲಿ ಶುಕ್ರವಾರದವರೆಗೆ 1.50 ಲಕ್ಷ ಜನರು ಭಾಗವಹಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಭಾಗವಾಗಿ, ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬದನವಾಳು ಗ್ರಾಮದ ಹಿಂದುಳಿದ ಪ್ರದೇಶಗಳಲ್ಲಿ ಪಾದಯಾತ್ರೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರು ಹಳ್ಳಿಯ ದಲಿತ ಹಾಗೂ ಲಿಂಗಾಯತ ಸಮುದಾಯದೊಂದಿಗೆ ಭೋಜನ ಸ್ವೀಕರಿಸಿದರು. ಅನೇಕ ವರ್ಷಗಳಿಂದ ಪರಸ್ಪರ ದೂರವಿದ್ದ ಸಮುದಾಯಗಳು ಒಟ್ಟಾದವು. ದಲಿತ ಕಾಲನಿಯೊಂದಿಗೆ ಗ್ರಾಮವನ್ನು ಸಂಪರ್ಕಿಸುವ ರಸ್ತೆಯನ್ನು 48 ಗಂಟೆ ಅವಧಿಯಲ್ಲಿ ನಿರ್ಮಾಣ ಮಾಡಲಾಗಿತ್ತು.

ಚಿತ್ರದುರ್ಗದಲ್ಲಿ ರಾಹುಲ್ ಗಾಂಧಿ ಅವರು ಬಂಜಾರ, ದಕ್ಕಲಿಗ, ಸುಡುಗಾಡು ಸಿದ್ಧ, ಡೊಂಬಾರು, ದೊಂಬಿದಾಸ ಸಮುದಾಯದ ಹಲವಾರು ಬುಡಕಟ್ಟು ಸಮುದಾಯದ ಮಹಿಳೆಯರನ್ನು ಭೇಟಿ ಮಾಡಿ ಅವರ ಜೀವನವನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಈ ವೇಳೆ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದರು ಮತ್ತು ಅವರು ಗೌರವಾರ್ಥವಾಗಿ ನೃತ್ಯವನ್ನು ಪ್ರಸ್ತುತಪಡಿಸಿದರು ಮತ್ತು ಆರತಿ ಮಾಡುವ ಮೂಲಕ ಅವರನ್ನು ಸ್ವಾಗತಿಸಿದರು.

ಕಾಂಗ್ರೆಸ್‌ ಪಕ್ಷದ ಮಾಹಿತಿ ಪ್ರಕಾರ ರಾಹುಲ್‌ ಗಾಂಧಿ ಕರ್ನಾಟಕದಾದ್ಯಂತ 2,000 ಕ್ಕೂ ಹೆಚ್ಚು ನಿರುದ್ಯೋಗಿ ಯುವಕರೊಂದಿಗೆ ಸಂವಾದ ನಡೆಸಲು ನಿರ್ಧರಿಸಿದ್ದರು. ಇಲ್ಲಿವರೆಗೆ ಅನೇಕರನ್ನು ಭೇಟಿ ಮಾಡಲಾಗಿದೆ.

ಬೆಳಗ್ಗೆ 7 ರಿಂದ 11 ರವರೆಗೆ ಮತ್ತು ಸಂಜೆ 4 ರಿಂದ 7 ರವರೆಗೆ ಎರಡು ಅವಧಿಗಳಲ್ಲಿ ಯಾತ್ರೆಯನ್ನು ನಿಗದಿಪಡಿಸಲಾಗಿದೆ. ಮಧ್ಯಂತರ ಅವಧಿಯಲ್ಲಿ ರಾಹುಲ್ ಗಾಂಧಿ ಅವರು ಜನಸಾಂಆನ್ಯರನ್ನು ಭೇಟಿಯಾಗಲು ಸಮಯ ಮೀಸಲಿಟ್ಟಿದ್ದಾರೆ. ಈ ಸಮಯದಲ್ಲಿ ರೈತರು, ಮೀನುಗಾರರು, ನಿರ್ಮಾಣ ಕಾರ್ಮಿಕರು, ಶಿಕ್ಷಕರು, ಗ್ರಾಮ ಮಟ್ಟದ ನಾಯಕರು ಮತ್ತು ಭಾರತ್ ಜೋಡೋ ಯಾತ್ರೆಯ ವಿವಿಧ ಹಂತಗಳಲ್ಲಿ ಕೆಲವು ಪ್ರಮುಖ ವ್ಯಕ್ತಿಗಳು, ಬರಹಗಾರರು ವಿದ್ವಾಂಸರು ಮತ್ತು ಬುದ್ಧಿಜೀವಿಗಳನ್ನು ಭೇಟಿಯಾಗಿದ್ದಾರೆ.

ಶನಿವಾರ ಬಳ್ಳಾರಿಯಲ್ಲಿ ಬೃಹತ್‌ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಯಾತ್ರೆ ಆರಂಭವಾದ ನಂತರ ಆಯೋಜಿಸುತ್ತಿರುವ ಮೊದಲ ಬೃಹತ್‌ ರ‍್ಯಾಲಿ ಇದಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ಮರುಜೀವ ನೀಡಿದ ಕ್ಷೇತ್ರ ಎಂಬ ಇತಿಹಾಸ ಹೊಂದಿರುವ ಕ್ಷೇತ್ರದಲ್ಲಿ ಭರ್ಜರಿ ರ‍್ಯಾಲಿ ನಡೆಸಲು ಸಿದ್ಧತೆಯನ್ನು ನಡೆಸಲಾಗಿದೆ.

ಇದನ್ನೂ ಓದಿ | Bharat Jodo | ಸೋಲಾರ್‌ ಟೆಂಡರ್‌ ಭ್ರಷ್ಟಾಚಾರ ಆರೋಪ ಕುರಿತು ಬಹಿರಂಗ ಚರ್ಚೆ ಸಿದ್ದ ಎಂದ ಡಿಕೆಶಿ

Exit mobile version