Site icon Vistara News

Bhavani Revanna : ಅದು ನಮ್ಮ ಕಾರಲ್ಲ ಫ್ರೆಂಡ್‌ದು ಎಂದ ರೇವಣ್ಣ; ಭವಾನಿ ತಪ್ಪಿಗೂ ಕ್ಷಮೆ ಕೇಳಿದ್ರು!

HD Revanna Bhavani Revanna CAr

ಬೆಳಗಾವಿ: ಮೈಸೂರು ಜಿಲ್ಲೆಯ (Mysore News) ಕೆ.ಆರ್‌. ನಗರ ತಾಲೂಕಿನ ಸಾಲಗ್ರಾಮ ಬಳಿ ಭಾನುವಾರ ರಾತ್ರಿ ಬೈಕೊಂದು ಕಾರಿಗೆ ಡಿಕ್ಕಿ ಹೊಡೆದ ಬಳಿಕ ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ (Bhavani Revanna) ಅವರು ರೌದ್ರಾವತಾರ ತಾಳಿದ ಪ್ರಕರಣಕ್ಕೆ ಸಂಬಂಧಿಸಿ ಅವರ ಪತಿ ಎಚ್.ಡಿ ರೇವಣ್ಣ (HD Revanna) ಅವರು ಕ್ಷಮೆ ಯಾಚಿಸಿದ್ದಾರೆ, ಜತೆಗೆ ಭವಾನಿ ಅವರಿಂದಲೂ ಕ್ಷಮೆ ಕೇಳಿಸುವುದಾಗಿ ಹೇಳಿದ್ದಾರೆ. ಇದರ ನಡುವೆ, ಅಪಘಾತಕ್ಕೊಳಗಾದ ಕಾರು ನಮ್ಮದಲ್ಲ, ನಮ್ಮ ಫ್ರೆಂಡ್‌ದು (Car is not ours, its of our friends) ಎಂದು ಕೂಡಾ ಹೇಳಿದ್ದಾರೆ.

ಭವಾನಿ ರೇವಣ್ಣ ಅವರು ಕಾರಿನಲ್ಲಿ ಹಾಸನದಿಂದ ಕೆ.ಆರ್‌ ನಗರದ ಕಡೆಗೆ ಬರುತ್ತಿದ್ದಾಗ ಎಡಭಾಗದ ಅಡ್ಡ ರಸ್ತೆಯಿಂದ ರಸ್ತೆಗೆ ಪ್ರವೇಶ ಮಾಡಿದ ಬೈಕೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಸಿಟ್ಟುಗೊಂಡ ಭವಾನಿ ರೇವಣ್ಣ ಅವರು, ಬೈಕ್‌ ಸವಾರರ ಮೇಲೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು.

ಸಾಯಂಗಿದ್ರೆ ಬಸ್ಸಿಗೆ ಸಿಕ್ಕಿ ಸಾಯಬೇಕಿತ್ತು. ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕೆ ಯೋಚನೆ ಮಾಡ್ತೀಯಾ? ಒಂದೂವರೆ ಕೋಟಿ ರೂಪಾಯಿ ಕಾರು ಬಗ್ಗೆ ಯೋಚನೆ ಮಾಡು: ಹೀಗೆ ಅಮಾನವೀಯವಾಗಿ ನಡೆದುಕೊಂಡ ಭವಾನಿ ರೇವಣ್ಣ ಅವರ ನಡೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಕಾರಿನ ಪ್ರಕರಣ ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮದವರು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಜೆಡಿಎಸ್‌ ಹಿರಿಯ ನಾಯಕ ಎಚ್‌.ಡಿ ರೇವಣ್ಣ ಅವರ ಅಭಿಪ್ರಾಯ ಕೇಳಿದಾಗ ಅವರು ಘಟನೆ ಸಂಬಂಧ ಯಾರಿಗಾದ್ರು ನೋವು ಆಗಿದ್ರೆ ರಾಜ್ಯದ ಜನರ ಕ್ಷಮೆ ಕೇಳ್ತೀನಿ ಎಂದರು. ಜತೆಗೆ ಭವಾನಿ ರೇವಣ್ಣ ಅವರ ಕೈಯಲ್ಲೂ ಕ್ಷಮೆ ಕೇಳಿಸುತ್ತೇನೆ ಎಂದು ಹೇಳಿದರು.

ʻʻಏನೋ ಕೋಪದಲ್ಲಿ ಸಿಟ್ಟಾಗಿ ಮಾತನಾಡಿದ್ದಾರೆ. ನಾವೇನು ಅವರ ಹತ್ತಿರ ಡ್ಯಾಮೇಜ್ ಕಟ್ಟಿ ಕೊಡಿ ಎಂದು ಕೇಳಿಲ್ಲ. ದೇವಗೌಡರ ಕುಟುಂಬ ಯಾವತ್ತೂ ಯಾರ ಮೇಲೂ ಆ ರೀತಿ ಮಾತನಾಡಿಲ್ಲʼʼ ಎಂದು ಹೇಳಿದ ರೇವಣ್ಣ ಅವರು, ಅವನು ಡ್ರಿಕ್ಸ್‌ ಮಾಡಿ ಗಾಡಿ ಓಡಿಸುತ್ತಿದ್ದ. ಏನಾದರೂ ಹೆಚ್ಚಾ ಕಮ್ಮಿ ಆಗಿದ್ದರೆ ಯಾರು ಹೊಣೆ..? ಎಂದು ಕೇಳಿದರು.

ʻʻಬೈಕ್‌ನವನು ಅವನೇ ಬಂದು ಗುದ್ದಿದ್ದಾನೆ. ಭವಾನಿ ಅವರು ಏನೂ ಅಹಂಕಾರ ಮಾಡಿಲ್ಲ. ಅವರು ಸಿಟ್ಟಲ್ಲಿ ಮಾತನಾಡಿದ್ದಾರೆ. ನಮ್ಮ‌ ಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡಲ್ಲ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನಾಗುಗುತ್ತದೆ. ಅದು ದೊಡ್ಡ ವಿಷಯ ಆಗುತ್ತಿರಲಿಲ್ಲವೇ?ʼʼ ಎಂದು ರೇವಣ್ಣ ಕೇಳಿದರು. ಈ ಘಟನೆಯನ್ನು ಯಾರೂ ಬೇಕೆಂತಲೇ ವೈರಲ್‌ ಮಾಡಿದ್ದಾರೆ ಎಂದರು.

ʻʻಭವಾನಿ ಅವರು ಬೈಕ್‌ನವನ ಪ್ರಾಣ ಹೋದರೆ ಹೋಗಲಿ ಎಂಬರ್ಥದಲ್ಲಿ ಮಾತನಾಡಿಲ್ಲ. ಅವರದ್ದೇ ಪ್ರಾಣ ಹೋಗಿದ್ದರೆ ಏನು ಮಾಡುವುದು?ʼʼ ಎಂದು ಆತಂಕದಿಂದ ಹೇಳಿದ್ದಾರೆ. ಈ ಮಾತುಗಳಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳಿದರು.

ಅದು ನಮ್ಮ ಕಾರಲ್ಲ, ಸ್ನೇಹಿತರ ಕಾರು ಎಂದ ರೇವಣ್ಣ

ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು. ಸ್ನೇಹಿತರ ಕಾರಿಗೆ ಹಾನಿ ಆಗಿದೆ ಅಂತ ಹಾಗೇ ಮಾಡಿದ್ದಾರೆ ಎಂದು ಹೇಳಿದರು ರೇವಣ್ಣ.

ಇದನ್ನೂ ಓದಿ: Bhavani Revanna : ಭವಾನಿ ರೇವಣ್ಣರ 1.5 ಕೋಟಿಯ ಕಾರು ಯಾವುದು? ಅದರ ವಿಶೇಷತೆಯೇನು?

ಅಪಘಾತ ಮಾಡಿದ ವ್ಯಕ್ತಿ ಮೇಲೆ ಕೇಸು ದಾಖಲಿಸಿರುವ ಬಗ್ಗೆ ಕೇಳಿದಾಗ, ವಾಹನ ಅಪಘಾತ ಆದ ಮೇಲೆ ದೂರು ಕೊಡದಿದ್ದರೆ ತಪ್ಪಾಗುವುದಿಲ್ಲವೇ? ಘಟನೆ ನಡೆದ ಬಳಿಕ ಠಾಣೆಗೆ ತಿಳಿಸಬೇಕಲ್ಲವಾ? ಇದು ಇನ್ಶೂರೆನ್ಸ್‌ ವಿಷಯದಲ್ಲೂ ಅಗತ್ಯವಲ್ಲವೇ? ಒಂದು ವೇಳೆ ಅವನೇ ಮುಂದೆ ನಾವೇ ಆಕ್ಸಿಡೆಂಟ್‌ ಮಾಡಿದೆವು ಎಂದು ದೂರು ನೀಡಿದರೆ ಏನು ಮಾಡುವುದು ಎಂದು ರೇವಣ್ಣ ಕೇಳಿದರು. ಅಪಘಾತ ಮಾಡಿದವನ ಮೇಲೆ ಯಾರೂ ಕ್ರಮ ಕೈಗೊಳ್ಳುವುದಿಲ್ಲ. ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಕುಟುಂಬದಿಂದ ಯಾರಿಗೂ ನೋವನ್ನುಂಟು ಮಾಡುವುದಿಲ್ಲ ಎಂದರು ರೇವಣ್ಣ.

Exit mobile version