Site icon Vistara News

Bhavani vs Preetham| ಪ್ರೀತಮ್‌ನ ಅಪ್ಪ ಬಂದು ರೇವಣ್ಣ ಎದುರು ದಮ್ಮಯ್ಯ ಅಂತ ಕೈಮುಗೀತಿದ್ರು ಎಂದ ಭವಾನಿ ರೇವಣ್ಣ!

Bhavani revanna

ಹಾಸನ: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಹಾಸನದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ನಡುವೆ ವೈಯಕ್ತಿಕ ಮಟ್ಟದ ವಾಗ್ದಾಳಿಗಳು ಜೋರಾಗುತ್ತಿವೆ. ಅದರಲ್ಲೂ ಬಿಜೆಪಿ ಶಾಸಕ ಪ್ರೀತಮ್‌ ಗೌಡ ಮತ್ತು ಎಚ್‌.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಂತೂ ಶರಂಪರ ಜಗಳಕ್ಕೆ ಇಳಿದಿದ್ದಾರೆ. ಪ್ರೀತಮ್‌ನ ಅಪ್ಪ ರೇವಣ್ಣ ಅವರ ಮುಂದೆ ದಮ್ಮಯ್ಯ ಅಂತ ಕೈ ಮುಗಿದು ನಿಲ್ತಾ ಇದ್ರು ಎಂದು ಭವಾನಿ ರೇವಣ್ಣ ಹೇಳಿದರೆ, ಭವಾನಿ ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ಬಾಟಲ್‌ ಬಾಟಲ್‌ ಕುಡಿಯೋ ಪಕ್ಕಾ ಕುಡುಕರು ಎಂದು ಪ್ರೀತಮ್‌ ಹೇಳಿದ್ದಾರೆ.

ಭವಾನಿ ರೇವಣ್ಣ ಸಿಟ್ಟಿಗೆದ್ದಿದ್ದೇಕೆ?
ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಪ್ರೀತಂ ಗೌಡ ವಿರುದ್ಧ ಭವಾನಿ ರೇವಣ್ಣ ಸಿಕ್ಕಾಪಟ್ಟೆ ವಾಗ್ದಾಳಿ ನಡೆಸಿದರು. ಪ್ರೀತಂ ಗೌಡ ಅವರು ಹಾಸನದಲ್ಲಿ ನಡೆದಿರುವ ಎಲ್ಲ ಅಭಿವೃದ್ಧಿ ಕೆಲಸಕ್ಕೂ ತಾನೇ ಕಾರಣ ಎಂದು ಹೇಳಿಕೊಂಡು ಓಡಾಡುತ್ತಿರುವುದು ಅವರನ್ನು ಕೆರಳಿ ಕೆಂಡವಾಗುವಂತೆ ಮಾಡಿದ್ದು ಸ್ಷಪ್ಟವಾಗಿತ್ತು.

ʻʻಒಬ್ಬ ಶಾಸಕರು ಕೆಲವು ವಿಷಯಗಳಲ್ಲಿ ರೇವಣ್ಣ ಅವರನ್ನು ತಳ್ಳಿ ಹಾಕ್ತಾರೆ. ಎಲ್ಲವನ್ನೂ ನಾನೇ ಕಟ್ಟಿದೆ, ಎಲ್ಲವನ್ನೂ ನಾನೇ ಮಾಡಿದೆ, ನನ್ನಿಂದನೆ ಈ ಕೆಲಸ ಆಗಿದ್ದು ಅಂತ ಕೊಚ್ಚಿಕೊಳ್ತಾರೆ. ಆ ಮಾತು ಅವರಿಗೆ ಎಷ್ಟು ಸರಿ ಅಂತ ಗೊತ್ತಿಲ್ಲ. ಅವರು ವಿದ್ಯಾವಂತರೋ, ಅವಿದ್ಯಾವಂತರೋ ಗೊತ್ತಿಲ್ಲʼʼ ಎಂದು ಹೇಳಿದರು ಭವಾನಿ ರೇವಣ್ಣ.

ʻʻಹಾಸನ ಜಿಲ್ಲೆಯಲ್ಲಿ ಇಷ್ಟೊಂದು ಕೆಲಸ ಆಗಿರುವುದನ್ನು ಗಮನಿಸಿರುವ ಯಾರೇ ಆದರೂ, ಅವಿದ್ಯಾವಂತನೇ ಆದರೂ ಇದು ರೇವಣ್ಣ ಅವರು ಮಾಡಿರುವ ಕೆಲಸ ಅಂತ ತೋರಿಸುತ್ತಾನೆ. ಆ ರೋಡ್‌ನಲ್ಲಿ ಓಡಾಡುವಂತಹ ಶಾಸಕರಿಗೆ ಈ ಬಿಲ್ಡಿಂಗ್ ಯಾರು ಕಟ್ಸಿದ್ದು ಅಂತ ಗೊತ್ತಾಗದಿಲ್ವಾ? ಯಾರು ಹಣ ತಂದಿದ್ದು, ಎಷ್ಟನೇ ಇಸವಿಯಲ್ಲಿ ಆಗಿರದು ಅನ್ನೊದು ಗೊತ್ತಾಗಲ್ವಾʼʼ ಎಂದು ಕೇಳಿದ್ದಾರೆ.

ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭವಾನಿ ರೇವಣ್ಣ ಮತ್ತು ರೇವಣ್ಣ

ಏಳನೇ ಕ್ಲಾಸ್‌ ರೇವಣ್ಣ ಮತ್ತು ಎಂಜಿನಿಯರ್‌ ಅಪ್ಪ!
ಎಚ್‌.ಡಿ. ರೇವಣ್ಣ ಅವರಿಗೆ ಹೆಚ್ಚಿನ ಶಿಕ್ಷಣ ಇಲ್ಲ ಎನ್ನುವುದನ್ನು ಪ್ರೀತಂ ಗೇಲಿ ಮಾಡಿದ್ದು ಭವಾನಿ ಅವರ ಸಿಟ್ಟು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ʻʻಏಳನೇ ಕ್ಲಾಸ್ ಓದಿದವರು ಅಂತ ರೇವಣ್ಣ ಅವರನ್ನು ಅಪಹಾಸ್ಯ ಮಾಡುತ್ತಾರೆ. ರೇವಣ್ಣ ಅವರು ವಿದ್ಯಾಭ್ಯಾಸಾನಾ ಜನರಿಗೆ ತೋರಿಸಿಕೊಂಡು ಕೆಲಸ ಮಾಡಬೇಕಾʼʼ ಎಂದು ಅವರು ಪ್ರಶ್ನಿಸಿದರು.

ʻʻರೇವಣ್ಣ ಅವರು ಎಂಟನೇ ತರಗತಿ ಪಾಸ್‌ ಮಾಡಿವರಾಗಿರಬಹುದು. ಪ್ರೀತಮ್‌ ಅವರ ಅಪ್ಪ ಎಂಜಿನಿಯರ್‌ ಅಲ್ವಾ? ೮ನೇ ಪಾಸ್‌ ಆಗಿರುವವರ ಮುಂದೆ ಎಂಜಿನಿಯರ್‌ ಅಪ್ಪ ಬಂದು ದಮ್ಮಯ್ಯ ಅಂತ ಕೈಮುಗೀಲಿಲ್ವಾ? ಹಳ್ಳಿ ಮೈಸೂರಿನಲ್ಲಿ‌ ಕೆಲಸ ಮಾಡುತ್ತಿದ್ದ ಎಂಜಿನಿಯರ್, ಹೆಂಡ್ತಿ ಮಕ್ಕಳನ್ನು ಸಾಕಲು ಆಗದೆ ರೇವಣ್ಣ ಅವರತ್ರ ಬಂದು ದಮ್ಮಯ್ಯ ಅನ್ಕೊಂಡು ಬಿಬಿಎಂಪಿಗೆ ಹಾಕಿಸ್ಕೊಂಡಿಲ್ವಾ?ʼʼ ಎಂದು ಕೇಳಿದರು ಭವಾನಿ ರೇವಣ್ಣ. ʻʻʻಅವರ ಮಗ ಇವತ್ತು ಶಾಸಕನಾಗಿ ಏಳನೇ ಕ್ಲಾಸ್ ಓದಿದವರು ಅಂತ ಮಾತನಾಡಲು ಬರ್ತಾನೆʼʼ ಎಂದು ಕೆರಳಿದರು.

ರೇವಣ್ಣ ಅವರನ್ನು ಹಾಡಿ ಹೊಗಳಿದ ಭವಾನಿ
ಇದೇ ಕಾರ್ಯಕ್ರಮದಲ್ಲಿ ಪತಿ ಎಚ್‌.ಡಿ. ರೇವಣ್ಣ ಅವರನ್ನು ಹಾಡಿ ಹೊಗಳಿದ ಭವಾನಿ ರೇವಣ್ಣ ಅವರು, ʻʻರೇವಣ್ಣ ಅವರು ವರ್ಷದ 365 ದಿನಗಳಲ್ಲಿ 50 ದಿನ ಮೀಟಿಂಗ್‌ಗಾಗಿ ಬೆಂಗಳೂರಿನಲ್ಲಿ ಉಳೀತಾರೆ. ಮೀಟಿಂಗ್ ಇಲ್ಲದೇ ಇದ್ದರಿದ್ದರೆ ಅವರು ಬೆಂಗಳೂರಿಗೆ ಹೋಗ್ತಾನೆ ಇರಲಿಲ್ಲ. ಉಳಿದ ದಿನಗಳಲ್ಲಿ ಸಮಯ ವ್ಯರ್ಥ ಮಾಡದೆ ಹಳ್ಳಿ ಹಳ್ಳಿಗೆ ಹೋಗಿ ಅಭಿವೃದ್ಧಿ ಕೆಲಸ ಮಾಡುತ್ತಾರೆ,ʼʼ ಎಂದು ಹೇಳಿದರು.

ʻʻಹೊಳೆನರಸೀಪುರ ತಾಲೂಕಿನ 24 ಹಾಸ್ಟೆಲ್‌ಗಳ ಉಸ್ತುವಾರಿ ನಾನೇ ನೋಡ್ತಿದೀನಿ. ಬಡ ಹೆಣ್ಣುಮಕ್ಕಳಿಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕೆಲಸ ಕೊಡಿಸಿದ್ದೀನಿ. ನಾನು ಹಲವು ಜಿಲ್ಲೆಗಳಲ್ಲಿ ಓಡಾಡಿದ್ದೇನೆʼʼ ಎಂದ ಅವರು, ʻʻಶಾಸಕರಾದವರು ಏನು ಕೆಲಸ ಮಾಡಿದ್ದಾರೆ ಎನ್ನುವುದನ್ನು ನೋಡಿದ್ದೇನೆ. ಕೆಲವು ಜಿಲ್ಲೆಗಳಲ್ಲಿ ಶಾಸಕರಿಗೆ ಸಮಸ್ಯೆಗಳ ಬಗ್ಗೆ ಅರ್ಜಿ ಕೊಡುವವರೇ ಇರಲ್ಲʼʼ ಎಂದರು.

ʻʻದೇವೇಗೌಡರ ಕುಟುಂಬದ ಹೆಸರು ಹಾಕಿದ್ರೆ ಮಾತ್ರ ಟಿವಿಗಳ ಟಿಆರ್‌ಪಿ ಜಾಸ್ತಿ ಆಗುತ್ತೆ. ಎಂಜಿನಿಯರ್, ಐಎಎಸ್ ಆಫೀಸರ್ ಆಗಿದ್ದರೂ ಕೂಡಾ ರೇವಣ್ಣ ಅವರು ಮಾಡೋ ಕೆಲ್ಸನಾ ಮಾಡಲು ಆಗುತ್ತಿರಲಿಲ್ಲʼʼ ಎಂದರು.

ಇದನ್ನೂ ಓದಿ | ಹಾಸನಾಂಬೆ ದರ್ಶನಕ್ಕೆ ಸಿಗದ ಅವಕಾಶ; ಪ್ರೀತಂ ಗೌಡ ವಿರುದ್ಧ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಕಿಡಿ

Exit mobile version