ಬೀದರ್: ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ (Bhagwant Khuba) ಅವರಿಗೆ ಭಾರಿ ಮುಖಭಂಗ ಉಂಟಾಗಿದೆ. ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ (Sagar Khandre) ಅವರು ಬಿಜೆಪಿಯ ಭಗವಂತ ಖೂಬಾ ಅವರ ವಿರುದ್ಧ ಭರ್ಜರಿ ಗೆಲುವು (Bidar Election Results 2024) ಸಾಧಿಸಿದ್ದಾರೆ. ಇದರೊಂದಿಗೆ ಹ್ಯಾಟ್ರಿಕ್ ಕನಸು ಕಾಣುತ್ತಿದ್ದ ಭಗವಂತ ಖೂಬಾ ಅವರಿಗೆ ಹಿನ್ನಡೆಯಾದರೆ, ಜಿಲ್ಲೆಯಲ್ಲಿ ಖಂಡ್ರ ಕುಟುಂಬವು ಬಿಗಿ ಹಿಡಿತ ಸಾಧಿಸಿದಂತಾಗಿದೆ. ಭಗವಂತ್ ಖೂಬಾ ವಿರುದ್ಧ ಸಾಗರ್ ಖಂಡ್ರೆ ಅವರು ಗೆಲುವು ಸಾಧಿಸಿದ್ದಾರೆ. ಸಾಗರ್ ಖಂಡ್ರೆ ಅವರು 6,65,162 ಮತಗಳನ್ನು ಪಡೆದುಕೊಂಡು 1,30,649 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಭಗವಂತ ಖೂಬಾ ಅವರು 5,35,766 ಮತಗಳನ್ನಷ್ಟೇ ಪಡೆಯಲು ಶಕ್ತರಾದರು.
ಭಗವಂತ ಖೂಬಾ ಅವರು ಕಳೆದ ಎರಡು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದರು. ಎರಡನೇ ಅವಧಿಯಲ್ಲಿ ಕೇಂದ್ರ ಸಚಿವರೂ ಆಗಿದ್ದರು. ಅವರ ಅಭಿವೃದ್ಧಿ ಕೆಲಸಗಳ ಕುರಿತು ಜನರಲ್ಲಿ ಸಕಾರಾತ್ಮಕ ಮನೋಭಾವವೂ ಇತ್ತು. ಮತ್ತೊಂದೆಡೆ, ಸಾಗರ್ ಖಂಡ್ರೆ ಅವರಿಗೆ ತಂದೆ ಈಶ್ವರ್ ಖಂಡ್ರೆ ಬಲ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬೆಂಬಲ ಇತ್ತು. ಇದು ಸಾಗರ್ ಖಂಡ್ರೆ ಗೆಲುವಿಗೆ ಸಹಕಾರಿಯಾಯಿತು ಎನ್ನಲಾಗಿದೆ.
ಬಿದರಿ ಕಲೆಗೆ ಹೆಸರುವಾಸಿಯಾಗಿರುವ ಬೀದರ್ ಲೋಕಸಭೆ ಕ್ಷೇತ್ರದಲ್ಲಿ 26 ವರ್ಷದ ಸಾಗರ್ ಖಂಡ್ರೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಮಗನನ್ನು ಗೆಲ್ಲಿಸಿಕೊಂಡು ಬರುವ ಹೊಣೆ ಈಶ್ವರ್ ಖಂಡ್ರೆ ಅವರದ್ದಾಗಿತ್ತು. ಭಗವಂತ ಖೂಬಾ ಅವರ ಅನುಭವದ ಮುಂದೆ ಸಾಗರ್ ಖಂಡ್ರೆ ವರ್ಚಸ್ಸು ಕಡಿಮೆ ಇದ್ದರೂ, ಅಪ್ಪನ ಬೆಂಬಲ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು, ಲಿಂಗಾಯತರ ಜತೆಗೆ ಮುಸ್ಲಿಮರು ಹಾಗೂ ದಲಿತರ ಮತಗಳು ಇವರಿಗೆ ವರದಾನವಾಗಲಿವೆ ಎನ್ನಲಾಗಿತ್ತು.
ಬಿಜೆಪಿ ಭದ್ರಕೋಟೆ
1991ರವರೆಗೂ ಬೀದರ್ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ, 1991ರ ಬಳಿಕ ಕ್ಷೇತ್ರವು ಬಿಜೆಪಿ ವಶವಾಯಿತು. 2004ರಲ್ಲಿ ನರಸಿಂಗರಾವ್ ಸೂರ್ಯವಂಶಿ ಹಾಗೂ 2009ರಲ್ಲಿ ಧರಂ ಸಿಂಗ್ ಅವರು ಬಿಟ್ಟರೆ 1991ರ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಹಾಗಾಗಿ, ಬೀದರ್ ಲೋಕಸಭೆ ಕ್ಷೇತ್ರವು ಬಿಜೆಪಿಯ ಭದ್ರಕೋಟೆ ಎನಿಸಿದೆ. ಬೀದರ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಐವರು ಹಾಗೂ ಕಾಂಗ್ರೆಸ್ ಮೂವರು ಶಾಸಕರನ್ನು ಹೊಂದಿದೆ.
2014, 2019ರಲ್ಲಿ ಏನಾಗಿತ್ತು?
ಕಳೆದ ಎರಡು ಚುನಾವಣೆಗಳಲ್ಲಿಯೂ ಭಗವಂತ್ ಖೂಬಾ ಅವರೇ ಗೆಲುವು ಸಾಧಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಭಗವಂತ್ ಖೂಬಾ ಅವರು ಕಾಂಗ್ರೆಸ್‌ನ ಈಶ್ವರ್ ಖಂಡ್ರೆ ಅವರ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಇನ್ನು 2014ರಲ್ಲಿ ಭಗವಂತ್ ಖೂಬಾ ಅವರು ಮೋದಿ ಅಲೆಯ ಪರಿಣಾಮವಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಧರಂ ಸಿಂಗ್ ಅವರನ್ನು 92 ಸಾವಿರ ಮತಗಳ ಅಂತರದಿಂದ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.
ಇದನ್ನೂ ಓದಿ: Election Results 2024: 5 ಲಕ್ಷ ಮತಗಳಿಂದ ಗೆದ್ದು ಬೀಗಿದ ಅಮಿತ್ ಶಾ; ಬಿಜೆಪಿಗೆ ಮೊದಲ ಗೆಲುವು