Site icon Vistara News

BY Vijayendra | ಅಮಿತ್‌ ಶಾ ಅವರು ವಿಜಯೇಂದ್ರ ಹೆಸರು ಹೇಳುತ್ತಲೇ ಜೈಕಾರ ಹಾಕಿದ ಜನ

Amit Shah And BY Vijayendra

ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕರ್ನಾಟಕ ಪ್ರವಾಸದಲ್ಲಿದ್ದು, ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಪಕ್ಷದ ಬಲ ಪ್ರದರ್ಶನದ ಜತೆಗೆ, ರಾಜ್ಯ ಬಿಜೆಪಿಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿದೆ. ರಾಜ್ಯ ನಾಯಕರಿಗೂ ಕೇಂದ್ರ ಸಚಿವರ ಎದುರು ತಮ್ಮ ವರ್ಚಸ್ಸು, ಪ್ರಭಾವ, ಕಾರ್ಯವೈಖರಿಯ ಪ್ರದರ್ಶನಕ್ಕೆ ಭೇಟಿ ಸಹಕಾರಿಯಾಗಿದೆ. ಇನ್ನು ಅಮಿತ್‌ ಶಾ ಅವರು ಮಂಡ್ಯದಲ್ಲಿರುವ ಬಾಲಕರ ಸರ್ಕಾರಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಸಮಾವೇಶದ ವೇಳೆ ಶಾ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರ ಹೆಸರು ಹೇಳುತ್ತಲೇ, ಜನ ಜೈಕಾರ ಕೂಗಿದರು. ಅಷ್ಟರಮಟ್ಟಿಗೆ, ವಿಜಯೇಂದ್ರ ಅವರ ಪರ ಮಂಡ್ಯದಲ್ಲಿ ಜನಬೆಂಬಲ ಸೃಷ್ಟಿಯಾಗಿದೆ.

ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅಮಿತ್‌ ಶಾ ಅವರು ವೇದಿಕೆ ಮೇಲಿದ್ದ ಎಲ್ಲ ನಾಯಕರ ಹೆಸರು ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಸಚಿವ ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ್‌ ಸೇರಿ ಹಲವು ನಾಯಕರ ಹೆಸರು ಹೇಳಿದರು. ಆದರೆ, ಪ್ರತಿಯೊಬ್ಬರ ಹೆಸರು ಹೇಳಿದಾಗಲೂ ಜನ ಜೈಕಾರ ಹಾಕಿರಲಿಲ್ಲ. ಆದರೆ, ವಿಜಯೇಂದ್ರ ಅವರ ಹೆಸರು ಹೇಳುತ್ತಲೇ ಕಿಕ್ಕಿರಿದು ತುಂಬಿದ್ದ ಜನ ಜೈಕಾರ ಮೊಳಗಿಸಿದರು.

ಮಂಡ್ಯದಲ್ಲೇಕೆ ವಿಜಯೇಂದ್ರ ಅವರಿಗೆ ಇಷ್ಟು ಜನಬೆಂಬಲ?
ಹಾಗೆ ನೋಡಿದರೆ ಮೊದಲಿನಿಂದಲೂ ಮಂಡ್ಯದಲ್ಲಿ ಜೆಡಿಎಸ್‌ ಪ್ರಾಬಲ್ಯವಿದೆ. ಈಗಲೂ ಜೆಡಿಎಸ್‌ಗೆ ಜನಬೆಂಬಲವಿದೆ. ಹೀಗಿದ್ದರೂ, ವಿಜಯೇಂದ್ರ ಅವರ ಪರ ಜನರೇಕೆ ಇಷ್ಟು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಆದರೆ, 2020ರಲ್ಲಿ ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌ ಕೋಟೆಯನ್ನು ಭೇದಿಸಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರು ಗೆಲುವು ಸಾಧಿಸಿದ್ದರ ಹಿಂದೆ ವಿಜಯೇಂದ್ರ ಅವರ ಶ್ರಮವಿದೆ. ತಂತ್ರಗಾರಿಕೆ, ಸಂಘಟನೆಯ ಚತುರತೆಯಿಂದ ಬಿಜೆಪಿ ಖಾತೆ ತೆರೆದಿತ್ತು. ಇನ್ನು, ಮಂಡ್ಯದಲ್ಲಿ ವಿಜಯೇಂದ್ರ ಅವರು ತಿರುಗಾಡಿದ್ದಾರೆ. ಕೆ.ಆರ್‌.ಪೇಟೆ ಮಾತ್ರವಲ್ಲದೆ ಹಲವು ತಾಲೂಕುಗಳಲ್ಲಿ ಜನರ ವಿಶ್ವಾಸ ಗಳಿಸಿದ್ದಾರೆ. ಹಾಗಾಗಿಯೇ, ಮಂಡ್ಯ ಸಮಾವೇಶದಲ್ಲಿ ಬಿಜೆಪಿಯ ಯಾವ ನಾಯಕರಿಗೂ ಸಿಗದ ಜನರ ಬೆಂಬಲ ವಿಜಯೇಂದ್ರ ಅವರಿಗೆ ಸಿಕ್ಕಿದೆ.

ಸಮಾವೇಶದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ.

ಬಿಎಸ್‌ವೈ ಪುತ್ರನಿಗೆ ಟಿಕೆಟ್‌ ಪಕ್ಕಾ?
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಜಿಲ್ಲೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ವಿಜಯೇಂದ್ರ ಅವರು ಆಸಕ್ತಿ ತೋರಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್‌ ಮನಸ್ಸು ಬದಲಾಯಿಸಿದ ಕಾರಣ ಟಿಕೆಟ್‌ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ವಿಜಯೇಂದ್ರ ಅವರ ಸ್ಪರ್ಧೆ ಖಚಿತ ಎಂದೇ ಹೇಳಲಾಗುತ್ತಿದೆ. ಈಗಾಗಲೇ, ಬಿ.ಎಸ್‌.ಯಡಿಯೂರಪ್ಪನವರ ಶಿಕಾರಿಪುರ ಕ್ಷೇತ್ರದಲ್ಲಿಯೇ ವಿಜಯೇಂದ್ರ ಅವರು ಸ್ಪರ್ಧಿಸಲಿದ್ದಾರೆ ಎಂದು ಬಿಎಸ್‌ವೈ ಅವರೇ ಘೋಷಿಸಿದ್ದಾರೆ. ಸಂಘಟನೆ, ತಂತ್ರಗಾರಿಕೆಯಲ್ಲಿ ನಿಪುಣರಾಗಿರುವ ವಿಜಯೇಂದ್ರ ಅವರ ಕುರಿತು ಹೈಕಮಾಂಡ್‌ ಉತ್ತಮ ಅಭಿಪ್ರಾಯ ಹೊಂದಿದೆ. ಇನ್ನು ಅಮಿತ್‌ ಶಾ ಅವರ ಎದುರೇ ಜನ ವಿಜಯೇಂದ್ರ ಅವರಿಗೆ ಅಭೂತಪೂರ್ವ ಬೆಂಬಲ ಪ್ರದರ್ಶಿಸಿದ ಕಾರಣ ಈ ಬಾರಿ ವಿಜಯೇಂದ್ರ ಅವರಿಗೆ ಟಿಕೆಟ್‌ ಪಕ್ಕಾ ಎನ್ನಲಾಗುತ್ತಿದೆ.

ಇದನ್ನೂ ಓದಿ | Amit Shah | ಸಂಸದೆ ಸುಮಲತಾರನ್ನೂ BJP ಲೆಕ್ಕಕ್ಕೆ ಸೇರಿಸಿಕೊಂಡ ಅಮಿತ್‌ ಶಾ!: JDS-Congress ವಿರುದ್ಧ ವಾಗ್ದಾಳಿ

Exit mobile version