ಹಾಸನ: ವ್ಹೀಲಿಂಗ್ (Bike Wheeling) ವಿಚಾರಕ್ಕೆ ಯುವಕರ ಗುಂಪುಗಳ ನಡುವೆ ಶುರುವಾದ ಜಗಳ ಕೊಲೆಯಲ್ಲಿ (Murder Case) ಅಂತ್ಯವಾದ ಘಟನೆ ನಗರದ ಹೊರವಲಯದಲ್ಲಿರುವ ಗವೇನಹಳ್ಳಿ ಬಳಿ ನಡೆದಿದೆ.
ಆಟೋ ಚಾಲಕ ಸುಮಂತ್ (20) ಕೊಲೆಯಾದ ಯುವಕ. ಈತ ನಗರದ 80 ಫೀಟ್ ರಸ್ತೆಯ ನಿವಾಸಿ ಎಂದು ತಿಳಿದುಬಂದಿದೆ. ಸುಮಂತ್ ಗವೇನಹಳ್ಳಿ ಬಳಿ ತನ್ನ ಬೈಕ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ಆದರೆ, ಕಾನೂನು ಪ್ರಕಾರ ಇದು ಅಪರಾಧವಾಗಿರುವುದರಿಂದ ವೀಲಿಂಗ್ ಮಾಡದಂತೆ ಗ್ರಾಮದ ಯುವಕರು ತಡೆದಿದ್ದಾರೆ.
ಗ್ರಾಮದ ಪ್ರದೇಶದಲ್ಲಿ ವ್ಹೀಲಿಂಗ್ ಮಾಡಬಾರದು ಎಂದು ಯುವಕರು ತಡೆಯುತ್ತಿದ್ದಂತೆ ಸುಮಂತ್ ಆಕ್ರೋಶಗೊಂಡಿದ್ದಾನೆ. ಇದೇ ವಿಚಾರಕ್ಕಾಗಿ ಸುಮಂತ್ ಹಾಗೂ ಗವೇನಹಳ್ಳಿ ಗ್ರಾಮದ ಯುವಕರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಸ್ಥಳೀಯರು ಮಧ್ಯ ಪ್ರವೇಶ ಮಾಡಿ ಸಮಾಧಾನಪಡಿಸಿ ಎಲ್ಲರನ್ನೂ ವಾಪಸ್ ಕಳುಹಿಸಿದರು.
ಆದರೆ, ಸುಮಂತ್ ಆಕ್ರೋಶ ಮಾತ್ರ ಕಡಿಮೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವನು ಅಲ್ಲಿಂದ ವಾಪಸ್ ತೆರಳಿದವನು ಸೀದಾ ತನ್ನ ಸ್ನೇಹಿತರ ಬಳಿ ಹೋಗಿದ್ದಾನೆ. ಅವರ ಗುಂಪನ್ನು ಕಟ್ಟಿಕೊಂಡು ಲಾಂಗ್, ಚಾಕು ಜತೆ ಮತ್ತೆ ಗ್ರಾಮಕ್ಕೆ ಬಂದಿದ್ದಾನೆ. ಅಲ್ಲಿ ತನಗೆ ವಿರೋಧ ವ್ಯಕ್ತಪಡಿಸಿದ ಯುವಕರನ್ನು ಹುಡುಕಿದ್ದಾನೆ.
ಆ ಯುವಕರು ಕಾಣುತ್ತಿದ್ದಂತೆ ಗುಂಪಿನೊಂದಿಗೆ ಮಾರಕಾಸ್ತ್ರಗಳಿಂದ ಸುಮಂತ್ ದಾಳಿ ಮಾಡಲು ಮುಂದಾಗಿದ್ದಾನೆ. ಈ ವೇಳೆ ಗವೇನಹಳ್ಳಿ ಗ್ರಾಮದ ಪ್ರಜ್ವಲ್ ಮತ್ತು ಇತರ ಯುವಕರ ಗುಂಪು ತಪ್ಪಿಸಿಕೊಂಡಿದೆ. ಮಾತ್ರವಲ್ಲದೆ, ಪ್ರತಿ ದಾಳಿ ನಡೆಸಿ ಸುಮಂತ್ ಗ್ಯಾಂಗ್ ಜತೆ ಇದ್ದ ಚಾಕು, ಲಾಂಗ್‌ಗಳನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ಗಲಾಟೆಯು ವಿಪರೀತಕ್ಕೆ ತಿರುಗಿ ಸುಮಂತ್ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ.
ಇದನ್ನೂ ಓದಿ: Karnataka Election 2023: ಅಥಣಿ ಟಿಕೆಟ್ ನಿರ್ಧರಿಸೋದು ನಾನೂ ಅಲ್ಲ, ಕುಮಟಳ್ಳಿಯೂ ಅಲ್ಲ: ಲಕ್ಷ್ಮಣ ಸವದಿ
ಇದರಿಂದ ಸುಮಂತ್‌ಗೆ ತೀವ್ರ ರಕ್ತಸ್ರಾವವಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ತಕ್ಷಣವೇ ಗಾಯಾಳು ಸುಮಂತ್‌ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸುಮಂತ್ ಮೃತಪಟ್ಟಿದ್ದಾನೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.