Site icon Vistara News

Bike wheeling : ವೀಲಿಂಗ್‌ ಹುಚ್ಚಾಟಕ್ಕೆ ಮೈಸೂರಲ್ಲಿ ಬ್ರೇಕ್;‌ ನೋಡಿ Before – After!

bike wheeling in mysore

ಮೈಸೂರು: ರಾಜ್ಯದಲ್ಲಿ ಸಂಚಾರ ದಟ್ಟಣೆಯ ಜತೆಗೆ ಬೈಕ್ ವೀಲಿಂಗ್‌ (Bike wheeling) ತಲೆನೋವು ಕೂಡಾ ಪೊಲೀಸರಿಗೆ ಅಂಟಿಕೊಂಡಿದೆ. ಇದು ಹೆಚ್ಚಿನ ನಗರಗಳಲ್ಲಿ ಕಂಡು ಬರುತ್ತಿದ್ದು, ಯುವಕರ ಹುಚ್ಚಾಟಗಳಿಗೆ ನಾಗರಿಕರಿಗೆ ತೀವ್ರ ತರಹದ ತೊಂದರೆಗಳಾಗುತ್ತಿವೆ. ಇದರ ಕಡಿವಾಣಕ್ಕೆ ರಾಜ್ಯದ ಪೊಲೀಸರು ಕಾನೂನು ಕ್ರಮಗಳನ್ನು ಕೈಗೊಂಡಿದ್ದರೂ ಪ್ರಮುಖ ರಸ್ತೆಗಳ ಅಲ್ಲಲ್ಲಿ ವೀಲಿಂಗ್‌ ಪ್ರಕರಣಗಳು ಕಂಡುಬರುತ್ತಲೇ ಇವೆ. ಆದರೆ, ಈಗ ಮೈಸೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ವೀಲಿಂಗ್‌ ಬೈಕ್‌ಗಳನ್ನು ಜಪ್ತಿ ಮಾಡುತ್ತಿದ್ದಾರೆ. ಅಲ್ಲದೆ, ಮೊದಲು (Before), ನಂತರ (After) ಎಂಬ ಫೋಟೊವನ್ನು ಹಾಕಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.

ವೀಲಿಂಗ್ ಮಾಡಿದ್ರೆ ಗಾಡಿ ಸೀಜ್

ವೀಲಿಂಗ್‌ ಮೇಲೆ ಹದ್ದಿನ ಕಣ್ಣು ಇಟ್ಟಿರುವ ಮೈಸೂರು ಸಂಚಾರ ಪೊಲೀಸರು, ಬೈಕ್ ವೀಲಿಂಗ್ ಮಾಡುವವರ ಹೆಡೆಮುರಿ ಕಟ್ಟುತ್ತಿದ್ದಾರೆ. ನಗರದ ಹೊರ ವಲಯದ ರಿಂಗ್ ರಸ್ತೆ ಸೇರಿದಂತೆ ಹಲವೆಡೆ ಬೈಕ್ ವೀಲಿಂಗ್ ನಡೆಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕವಾಗಿ ಭಾರಿ ದೂರುಗಳು ಕೇಳಿಬಂದಿವೆ. ವಾಹನ ಸವಾರರಿಗೆ ಅಪಾಯವನ್ನುಂಟು ಮಾಡುತ್ತಿದ್ದ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿಯನ್ನು ಮಾಡಲಾಗುತ್ತಿದೆ. ಗಾಡಿಗಳನ್ನು ಜಪ್ತಿ ಮಾಡಲಾಗುತ್ತಿದೆ.

Wheeling in Mysore

ಇದನ್ನೂ ಓದಿ: Opposition Meet : ವಿಪಕ್ಷಗಳ ರಣತಂತ್ರ ಸಭೆ ಆರಂಭ; ಇಂದೇ ಬದಲಾಗುತ್ತಾ UPA ಹೆಸರು, ಕ್ಯಾಪ್ಟನ್‌ ಯಾರು?

ಸದ್ಯ ಮೂರು ಬೈಕ್‌ಗಳೊಂದಿಗೆ ವೀಲಿಂಗ್ ಮಾಡಿದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ನಗರದ ನರಸಿಂಹರಾಜ ಸಂಚಾರಿ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರು, ಸಿದ್ದಾರ್ಥ ಠಾಣೆಯ ವ್ಯಾಪ್ತಿಯಲ್ಲಿ ಒಬ್ಬನನ್ನು ಪತ್ತೆ ಮಾಡಿ ಪೊಲೀಸರು ಸೆರೆ ಹಿಡಿದಿದ್ದಾರೆ. ಅಲ್ಲದೆ, ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

Wheeling in Mysore

ಬೈಕ್‌ ವೀಲಿಂಗ್‌ ವಿರುದ್ಧ ಕಾನೂನು‌ ಕ್ರಮವೇನು?

ವೀಲಿಂಗ್‌ ಪ್ರಕರಣವು ಶಿಕ್ಷಾರ್ಹ ಹಾಗೂ ದಂಡಾರ್ಹ ಅಪರಾಧವಾಗಿದೆ. ಈ ಮೊದಲು ವೀಲಿಂಗ್ ಮಾಡಿದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿತ್ತು. ಅವರಿಗೆ ದಂಡ ವಿಧಿಸುವ ಜತೆಗೆ ವಾಹನವನ್ನೂ ಸಹ ಜಪ್ತಿ ಮಾಡಲಾಗುತ್ತಿತ್ತು. ಇನ್ನು ಸವಾರರು ಅಪ್ರಾಪ್ತರಾಗಿದ್ದರೆ ಅವರ ಪೋಷಕರ ಮೇಲೂ ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸರಿಗೆ ಇರುತ್ತದೆ.

Wheeling in Mysore

ಈ ವೀಲಿಂಗ್ ಪ್ರಕರಣಗಳು ಹೆಚ್ಚುತ್ತಾ ಹೋದಂತೆ ಕಠಿಣ ‌ಕಾನೂನುಗಳನ್ನು ರೂಪಿಸಿದ ಕರ್ನಾಟಕ ಪೊಲೀಸ್‌ ಇಲಾಖೆಯು ವೀಲಿಂಗ್‌ ಮಾಡುವವರ ಜತೆಗೆ ಆ ವಾಹನವನ್ನು ಮಾರ್ಪಾಡು ಮಾಡುತ್ತಿದ್ದ ಗ್ಯಾರೇಜ್ ಮೆಕಾನಿಕ್ ಮೇಲೆಯೂ ಕ್ರಮ ಕೈಗೊಳ್ಳುತ್ತಿದೆ. ಆಲ್ಟ್ರೇಷನ್‌ ಮಾಡುವ ಗ್ಯಾರೇಜ್ ಮಾಲೀಕನ ಮೇಲೆ ವಾಹನ ಕಾಯ್ದೆ ಅಡಿ ಕ್ರಮ ಕೈಗೊಂಡು ಗ್ಯಾರೇಜ್ ಪರವಾನಗಿಯನ್ನು ಸಹ ರದ್ದು ಮಾಡಲು ಶಿಫಾರಸು ಮಾಡಲಾಗುತ್ತದೆ.

ಎಚ್ಚೆತ್ತುಕೊಳ್ಳಬೇಕಿದೆ ಪೋಷಕರು

ಯುವಕರ ಈ ವೀಲಿಂಗ್‌ ಪ್ರಹಸನಗಳು ನಿಲ್ಲಬೇಕೆಂದರೆ ಪೋಷಕರ ಪಾತ್ರ ಬಹಳ ದೊಡ್ಡದಿರುತ್ತದೆ. ಮಕ್ಕಳು ಕೇಳಿದ್ದನ್ನೆಲ್ಲ ಕೊಡುವ ಮೊದಲು ಅದರ ಅವಶ್ಯಕತೆಯನ್ನು ಮೊದಲು ತಿಳಿದುಕೊಳ್ಳುವ ಕೆಲಸ ಆಗಬೇಕು. ಇನ್ನು ಮಕ್ಕಳಿಗೆ ವಾಹನಗಳನ್ನು ಕೊಡಿಸಿದ ಮೇಲೆ ಅವರ ಚಲನವಲನಗಳ ಮೇಲೆ ನಿಗಾ ವಹಿಸಬೇಕು ಎಂಬ ಮನವಿ ಸಹಿತ ಎಚ್ಚರಿಕೆಯನ್ನು ಪೊಲೀಸರು ಆಗಾಗ ಮಾಡುತ್ತಲೇ ಇದ್ದಾರೆ. ಹೀಗಾಗಿ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ.

ಇದನ್ನೂ ಓದಿ: Video Viral : ರಾಯಚೂರು YTPS ಬಳಿ ಕಂಡ ಅನಕೊಂಡ ಮಾದರಿಯ ಹೆಬ್ಬಾವು!

ಬೈಕ್‌ ವೀಲಿಂಗ್‌ ಮೇಲೆ ಸೆಕ್ಷನ್‌ ಹಾಗೂ ದಂಡ

ಬೈಕ್ ಸ್ಟಂಟ್ ಮಾಡಿದವರ ಮೇಲೆ ಐಪಿಸಿ ಸೆಕ್ಷನ್ 279ರ ಅಡಿಯಲ್ಲಿ 1000 ರೂಪಾಯಿ ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವೀಲಿಂಗ್ ಮಾಡಿದವರನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಬಿಟ್ಟುಕಳಿಸಲಾಗುತ್ತದೆ.‌

Exit mobile version