Site icon Vistara News

Bike wheeling : ಮೈಸೂರಿನಲ್ಲಿ ವೀಲಿಂಗ್‌ ಪುಂಡರ ಅಟ್ಟಹಾಸ; ಶಿಕ್ಷಕಿಗೆ ಗಂಭೀರ ಗಾಯ

Bike wheeling mysore

ಮೈಸೂರು: ಹಿಂದೆ ಬೆಂಗಳೂರಿಗೆ ಸೀಮಿತವಾಗಿದ್ದ ಬೈಕ್‌ ವೀಲಿಂಗ್‌ (Bike Wheeling) ಪುಂಡಾಟಿಕೆ ಈಗ ರಾಜ್ಯದ ನಾನಾ ಭಾಗಗಳಿಗೆ ಹರಡಿದ್ದು, ಇವರ ಅಟ್ಟಹಾಸಕ್ಕೆ ಜನ ನಡುಗುವಂತಾಗಿದೆ. ಮೈಸೂರಿನಲ್ಲಿ (Wheeling in Mysore) ಮುಂದುವರಿದ ಪುಂಡ ಯುವಕರ ವೀಲಿಂಗ್‌ ಅಬ್ಬರಕ್ಕೆ ಒಬ್ಬ ಶಿಕ್ಷಕಿ (School teacher injured) ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೈಸೂರಿನಲ್ಲಿ ಇತ್ತೀಚೆಗೆ ವೀಲಿಂಗ್‌ ಮಾಡುವ ಯುವಕರನ್ನು ಹುಡುಕಿ ಹುಡುಕಿ ಕೇಸು ಜಡಿಯಲಾಗಿತ್ತು. ಆದರೂ ಈ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಮೈಸೂರಿನ ವಿವಿಧ ರಸ್ತೆಗಳಲ್ಲಿ ವೀಲಿಂಗ್ ಮಾಡುವ ಮೂಲಕ ಜೀವಾಪಾಯ, ಆತಂಕ ತಂದಿಡುವ ಘಟನೆಗಳು ನಡೆಯುತ್ತಲೇ ಇವೆ.

ಜುಲೈ 18ರಂದು ಮೈಸೂರಿನಲ್ಲಿ ನಡೆದ ಒಂದು ಘಟನೆಯಲ್ಲಿ ಒಬ್ಬ ಶಿಕ್ಷಕಿ ಗಾಯಗೊಂಡಿದ್ದಾರೆ. ಗಾಯತ್ರಿಪುರಂ ಚರ್ಚ್ ಬಳಿ ಕೆಟಿಎಂ ಬೈಕ್‌ನಲ್ಲಿ ತ್ರಿಬಲ್‌ ರೈಡಿಂಗ್‌ ಮಾಡಿಕೊಂಡು ಬಂದ ಮೂವರು ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಶಿಕ್ಷಕಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ಬಳಿಕವೂ ನಿಲ್ಲಿಸದೆ ಅಲ್ಲಿಂದ ವೇಗವಾಗಿ ಪರಾರಿಯಾಗಿದ್ದಾರೆ.

ಜುಲೈ 18ರಂದು ಸಂಜೆ ಹೊತ್ತಿಗೆ ಈ ಶಿಕ್ಷಕಿ ಶಾಲೆಯಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ತ್ರಿಬಲ್ ರೈಡಿಂಗ್ ಮೂಲಕ ವೀಲಿಂಗ್ ಮಾಡುತ್ತಾ ಬಂದು ಬೈಕ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ಪರಿಣಾಮ ಶಿಕ್ಷಕಿಯ ತಲೆಗೆ ಗಾಯವಾಗಿದ್ದು ಅವರು ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ್ದರು.

ರಕ್ತದ ಮಡುವಿನಲ್ಲಿದ್ದ ಶಿಕ್ಷಕಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದಾರೆ. ಈಗಲೂ ಶಿಕ್ಷಕಿ ತೀವ್ರ ನಿಗಾ ಘಟಕದಲ್ಲಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸಿದ್ದಾರ್ಥ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈ-ಬೆಂ ದಶಪಥ ಹೆದ್ದಾರಿಯಲ್ಲೇ ಬೈಕ್ ವೀಲಿಂಗ್

ರಾಮನಗರ: ಮೈಸೂರು ಬೆಂಗಳೂರು ದಶಪಥ ಹೆದ್ದಾರಿಯ ಮೇಲೆಯೇ ಬೈಕ್ ವೀಲಿಂಗ್ ಮಾಡುತ್ತಾ ಆತಂಕ ಸೃಷ್ಟಿಸುವ ವಿದ್ಯಮಾನಗಳೂ ನಡೆಯುತ್ತಿವೆ. ಎಕ್ಸಪ್ರೆಸ್ ವೇಯಲ್ಲಿ ವೀಲಿಂಗ್ ಮಾಡಿ ಪುಂಡಾಟ ನಡೆಸಿದ ವಿದ್ಯಮಾನ ಬಿಡದಿ ಠಾಣಾ ವ್ಯಾಪ್ತಿಯಲ್ಲಿ ಕೇತಗಾನಹಳ್ಳಿ ಬಳಿ ದಾಖಲಾಗಿದೆ.

ದರ್ಶನ್ ಎಂಬಾತ ಡಿಯೋ ಸ್ಕೂಟರ್‌ನಲ್ಲಿ ವೀಲಿಂಗ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ. ಈ ವಿಡಿಯೊ ಆಧರಿಸಿ ಪೊಲೀಸರು ಈಗ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆತನ ವಿರುದ್ಧ ಮೋಟಾರು ವಾಹನ ಕಾಯಿದೆಯಡಿ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರ್ಶನ್‌ನನ್ನು ಬಂಧಿಸಿದ್ದಾರೆ. ಬಿಡದಿಯ ಬಾನಂದೂರು ಗ್ರಾಮದವನಾದ ದರ್ಶನ್ ತಾನು ವೀಲಿಂಗ್‌ ಮಾಡುವ ಮೂಲಕ ಅಪಾಯಕ್ಕೆ ಒಡ್ಡುವುದಲ್ಲದೆ ಇತರ ವಾಹನಿಗರನ್ನು ತಬ್ಬಿಬ್ಬುಗೊಳಿಸುವ ಮೂಲಕ ಅಪಾಯ ಸೃಷ್ಟಿಸುತ್ತಿದ್ದಾನೆ ಎಂಬ ಆರೋಪವಿದೆ.

ಹಾಸನದಲ್ಲೂ ಇತ್ತೀಚೆಗೆ ಕೆಲವು ಯುವಕರು ವೀಲಿಂಗ್‌ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದರು.

ಕಾನೂನಿನ ಭಯವಿಲ್ಲ, ದಂಡವೂ ಅತ್ಯಲ್ಪ

ಬೈಕ್ ಸ್ಟಂಟ್ ಮಾಡಿದವರ ಮೇಲೆ ಐಪಿಸಿ ಸೆಕ್ಷನ್ 279ರ ಅಡಿಯಲ್ಲಿ 1000 ರೂಪಾಯಿ ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವೀಲಿಂಗ್ ಮಾಡಿದವರನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಬಿಟ್ಟುಕಳಿಸಲಾಗುತ್ತದೆ.‌ ಹೀಗಾಗಿ ವೀಲಿಂಗ್‌ ಮಾಡುವವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ.

ಇದನ್ನೂ ಓದಿ: Bike wheeling : ವೀಲಿಂಗ್‌ ಹುಚ್ಚಾಟಕ್ಕೆ ಮೈಸೂರಲ್ಲಿ ಬ್ರೇಕ್;‌ ನೋಡಿ Before – After!

Exit mobile version