ಮೈಸೂರು: ಖಾಸಗಿಯಾಗಿ ಪ್ರಾಕ್ಟೀಸ್ ಮಾಡುವ ಸರ್ಕಾರಿ ವೈದ್ಯರಿಗೆ ಕಡಿವಾಣ ಹಾಕಲು ಆಸ್ಪತ್ರೆಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡುವ ಬಗ್ಗೆ ಚಿಂತನೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿಯಾಗಿ ಪ್ರಾಕ್ಟೀಸ್ ಮಾಡುವ ವೈದ್ಯರಿಗೆ ಕಡಿವಾಣ ಹಾಕುವ ಆಲೋಚನೆ ಸರ್ಕಾರದ ಮಟ್ಟದಲ್ಲಿದೆ ಎಂದರು. ʻʻಬಯೋಮೆಟ್ರಿಕ್ ಅನುಷ್ಠಾನಕ್ಕೆ ತರುತ್ತೇವೆ. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೈದ್ಯರು ಬಯೋಮೆಟ್ರಿಕ್ ಮಾಡಬೇಕು. ಅವರಿಗೆ ಜಿಯೋ ಟ್ಯಾಗ್ ನೀಡಲು ಚಿಂತನೆ ನಡೆದಿದೆʼʼ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಇರಬೇಕಾದ ಅವಧಿಯಲ್ಲಿ ಅಲ್ಲಿರಬೇಕು ಎಂದ ಸುಧಾಕರ್, ಕರ್ತವ್ಯದ ಅವಧಿ ಮುಗಿದ ಬಳಿಕ ಪ್ರಾಕ್ಟೀಸ್ ಮಾಡಲು ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸುತ್ತೇವೆ ಎಂದು ವಿವರಿಸಿದರು.
ಕರ್ತವ್ಯದ ಅವಧಿಯಲ್ಲಿ ಖಾಸಗಿಯಾಗಿ ಪ್ರಾಕ್ಟೀಸ್ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ವೈದ್ಯರ ದಕ್ಷತೆ ಹಾಗೂ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ವೈದ್ಯರ ಖಾಸಗಿ ಪ್ರಾಕ್ಟೀಸನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಚಿಂತನೆಯಲ್ಲಿದ್ದೇವೆ ಎಂದು ಸುಧಾಕರ್ ಹೇಳಿದ್ದಾರೆ.
ವರ್ಷಾಂತ್ಯಕ್ಕೆ ಆರೋಗ್ಯ ಕಾರ್ಡ್
ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿ 4 ಕೋಟಿ 80 ಲಕ್ಷ ಫಲಾನುಭವಿಗಳಿಗೆ ಆರೋಗ್ಯ ಕಾರ್ಡನ್ನು ಡಿಸೆಂಬರ್ ವೇಳೆಗೆ ಗ್ರಾಮ ಒನ್ ಕೇಂದ್ರಗಳ ಮೂಲಕ ವಿತರಿಸುವ ಗುರಿ ಹೊಂದಿದ್ದೇವೆ ಎಂದು ಸುಧಾಕರ್ ತಿಳಿಸಿದರು.
2025ಕ್ಕೆ ಕ್ಷಯ ಮುಕ್ತ ಕರ್ನಾಟಕ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2030ರೊಳಗೆ ಭಾರತವನ್ನು ಕ್ಷಯ ಮುಕ್ತಗೊಳಿಸಲು ಅಭಿಯಾನ ಹಮ್ಮಿಕೊಂಡಿದ್ದಾರೆ. ಆದರೆ, ಕರ್ನಾಟಕದಲ್ಲಿ 2025ಕ್ಕೆ ಕ್ಷಯ ನಿರ್ಮೂಲನೆ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಹೊಸ ಕೋರ್ಸ್‌ಗಳ ಆರಂಭ
ಅರೆ ವೈದ್ಯಕೀಯ ಕೋರ್ಸ್‌ಗಳಾದ ಕ್ರಿಟಿಕಲ್ ಕೇರ್ ಹಾಗೂ ಡಯಾಲಿಸಿಸ್ ಟೆಕ್ನಿಷಿಯನ್ ಕೋರ್ಸ್‌ಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾರಂಭಿಸಲಾಗುವುದು. ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಹಾಗೂ ಅಂತಾರಾಷ್ಟ್ರೀಯ ಪ್ರಕಟಣೆಗಳಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು ಸುಧಾಕರ್. ಡಯಾಲಿಸಿಸ್ ಸೇವೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾರಂಭಿಸುವ ಕುರಿತು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವಂತೆ ಸಂಬಂಧಿಸಿದ ಕಾಲೇಜುಗಳ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಜಾರಿಯಲ್ಲಿರುವ ಟೆಲಿ ಸಮಾಲೋಚನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕುರಿತು ಗಂಭೀರ ಚಿಂತನೆ ಮಾಡಿದ್ದೇವೆ. ವೈದ್ಯಕೀಯ ಕಾಲೇಜುಗಳ ಎಲ್ಲ ವಿಭಾಗದ ಮುಖ್ಯಸ್ಥರೊಂದಿಗೆ ಪ್ರತಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸುವಂತೆ ತಿಳಿಸಲಾಗಿದೆ ಎಂದರು.
ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ಇಂದುಮತಿ, ವಿಭಾಗೀಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆೆ.ಎಚ್.ಪ್ರಸಾದ್ ಮುಂತಾದವರಿದ್ದರು.