ಬೆಂಗಳೂರು: ರಾಜ್ಯದಲ್ಲಿ ನಡೆದ ಬಿಟ್‌ಕಾಯಿನ್ ಹಗರಣಕ್ಕೆ (Bitcoin Scam) ಸಂಬಂಧಿಸಿದಂತೆ ಡಿವೈಎಸ್‌ಪಿ ಶ್ರೀಧರ್ ಪೂಜಾರ್ (Sridhar Pujar) ಅವರಿಗೆ ಹೈಕೋರ್ಟ್ (Karnataka High Court) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಶ್ರೀಧರ್ ಪೂಜಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, “ಪೊಲೀಸರು ತಮ್ಮ ಪ್ರತಿಷ್ಠೆಗಾಗಿ ಕೇಸ್ ದಾಖಲಿಸಿದ್ದಾರೆ. ಪ್ರಕರಣ ನಡೆದ 4 ವರ್ಷಗಳ ನಂತರ ಬಂಧಿಸಲು ಯತ್ನಿಸಿದ್ದಾರೆ. ಒಂದೇ ಕೇಸ್‌ಗೆ ಎರಡೆರಡು ಬಾರಿ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಿದ್ದಾರೆ” ಎಂದು ಹೇಳಿದರು. ಪೊಲೀಸರ ಕ್ರಮಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ. ಉಮಾ ಅಸಮಾಧಾನ ವ್ಯಕ್ತಪಡಿಸಿದರು. “ಜನರನ್ನು ಮೂರ್ಖರನ್ನಾಗಿಸಲು ಪೊಲೀಸರು ಯತ್ನಿಸಿದಂತಿದೆ” ಎಂದ ಅವರು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು.
ಬಿಟ್‌ಕಾಯಿನ್ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಸಿಸಿಬಿ ತಂಡದಲ್ಲಿ ಶ್ರೀಧರ್ ಪೂಜಾರ್ ಅವರು ಕೂಡ ಇದ್ದರು. ಬಿಟ್‌ಕಾಯಿನ್ ಪ್ರಕರಣದ ಆರೋಪಿಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡು ಹ್ಯಾಕಿಂಗ್, ಪಾಸ್‌ವರ್ಡ್ ಬದಲಾವಣೆ, ಬಿಟ್‌ಕಾಯಿನ್ ವರ್ಗಾವಣೆ ಸೇರಿ ಹಲವು ಅಕ್ರಮ ಎಸಗಿರುವ ಕುರಿತು ಶ್ರೀಧರ್ ಪೂಜಾರ್ ವಿರುದ್ಧ ಆರೋಪಿಗಳು ಕೇಳಿಬಂದಿದ್ದವು. ಅದರಂತೆ, ಎಸ್‌ಐಟಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕಳೆದ ಪೆಬ್ರವರಿಯಲ್ಲಿ ಶ್ರೀಧರ್ ಪೂಜಾರ್ ಅವರನ್ನು ಬಂಧಿಸಲು ತೆರಳಿದ್ದರು. ಇದೇ ವೇಳೆ, ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದ ಶ್ರೀಧರ್ ಪೂಜಾರ್, ಪರಾರಿಯಾಗಿದ್ದರು.
ಏನಿದು ಬಿಟ್ ಕಾಯಿನ್ ಹಗರಣ?
ನವೆಂಬರ್ 2020ರಲ್ಲಿ, ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಶ್ರೀಕೃಷ್ಣ ಮತ್ತು ಅವರ ಸಹಚರರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಿದರು. ಶ್ರೀಕಿ ಅವರು ಡಾರ್ಕ್‌ನೆಟ್ ಮೂಲಕ ಬಿಟ್‌ಕಾಯಿನ್‌ಗಳನ್ನು ಬಳಸಿಕೊಂಡು ಡ್ರಗ್‌ಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅದನ್ನು ತಮ್ಮ ಹೈ ಪ್ರೊಫೈಲ್ ಕ್ಲೈಂಟ್‌ಗಳಿಗೆ ಮಾರಾಟ ಮಾಡಿದ್ದಾರೆ ಎಂಬ ವಿಷಯ ಹೊರಬಂದಿತ್ತು. ಶ್ರೀಕಿ 2019ರಲ್ಲಿ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ನಡೆದ ಹ್ಯಾಕಿಂಗ್‌ನಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ.
2019ರ ಜುಲೈನಲ್ಲಿ 7.37 ಕೋಟಿ ಅನಧಿಕೃತ ನಿಧಿ ವರ್ಗಾವಣೆ ಬೆಳಕಿಗೆ ಬಂದಿತ್ತು. ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬ ಹ್ಯಾಕರ್ ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರದ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದಾನೆ ಮತ್ತು 10.5 ಕೋಟಿ ರೂಪಾಯಿ ಮತ್ತು 1.05 ಕೋಟಿ ರೂಪಾಯಿಗಳ ಹಣವನ್ನು ಬ್ಯಾಂಕ್ NGO, M/s. ಉದಯ್ ಗ್ರಾಮ ವಿಕಾಸ ಸಂಸ್ಥೆ, ನಾಗ್‌ಪುರ ಮತ್ತು ಮಾಲೀಕತ್ವ, M/s. ನಿಮ್ಮಿ ಎಂಟರ್‌ಪ್ರೈಸಸ್, ಬುಲಂದ್‌ಶಹರ್, ಉತ್ತರ ಪ್ರದೇಶ ಹೀಗೆ ವಿವರ ಇರುವ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ಅವರಿಂದ ನಗದು ಪಡೆದಿದ್ದ ಎಂದು ಹೇಳಲಾಗಿದೆ.
ಇದನ್ನೂ ಓದಿ: Actor Darshan: ಪರಪ್ಪನ ಅಗ್ರಹಾರದಿಂದ ದರ್ಶನ್ ಬೇರೆ ಜೈಲಿಗೆ ಶಿಫ್ಟ್?