ನವದೆಹಲಿ : ಕರ್ನಾಟಕದಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ (BJP Government Period) ನಡೆದ ಬಿಟ್ ಕಾಯಿನ್ ಹಗರಣದ (Bitcoin Scam) ಬಗ್ಗೆ ಕಾಂಗ್ರೆಸ್ ಸರ್ಕಾರ (Congress Government) ಎಸ್‌ಐಟಿ ತನಿಖೆಗೆ (SIT Investigation) ಆದೇಶ ನೀಡಿದ ಬೆನ್ನಿಗೇ ಜಾರಿ ನಿರ್ದೇಶನಾಲಯವೂ (Enforcement directorate) ಕಣಕ್ಕಿಳಿದಿದೆ. ಪ್ರಧಾನ ಆರೋಪಿ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ (Hacker Sriki) ಮತ್ತು 19 ಮಂದಿಯ ವಿರುದ್ಧ ಜಾರ್ಜ್‌ಶೀಟ್ (Chargesheet) ಸಲ್ಲಿಸಿದೆ. 2019ರಲ್ಲಿ ಕರ್ನಾಟಕ ಸರ್ಕಾರದ ಇ-ಗವರ್ನೆನ್ಸ್ ಘಟಕವನ್ನು (E-Governance Unit) ಹ್ಯಾಕ್ ಮಾಡಿ 11.5 ಕೋಟಿ ರೂ. ಕಳವು ಮಾಡಿದ ಪ್ರಕರಣದಲ್ಲಿ ಜಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಸೋಮವಾರ ಬೆಂಗಳೂರಿನ ನ್ಯಾಯಾಲಯದಲ್ಲಿ ಸಲ್ಲಿಕೆಯಾದ ಇ.ಡಿ ಚಾರ್ಜ್‌ಶೀಟ್‌ನಲ್ಲಿ ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋ ಕರೆನ್ಸಿ ವಿನಿಯಮಗಳು, ಆನ್‌ಲೈನ್ ಪೋಕರ್ ಸೈಟ್‌ಗಳು ಮತ್ತು ಸರ್ಕಾರಿ ಪೋರ್ಟಲ್‌ಗಳನ್ನು ಹ್ಯಾಕ್ ಮಾಡಿದ ಆರೋಪ ಹೊತ್ತಿರುವ ಶ್ರೀಕಿಯನ್ನು ನಂಬರ್ ಒನ್ ಆರೋಪಿ ಎಂದು ಹೆಸರಿಸಲಾಗಿದೆ.
ಶ್ರೀಕಿ ಮಾಡಿದ ಬಿಟ್ ಕಾಯಿನ್ ಮತ್ತಿತರ ವ್ಯವಹಾರಗಳಲ್ಲಿ ಪೊಲೀಸರು ಮತ್ತು ಕೆಲವು ರಾಜಕಾರಣಿಗಳೇ ಶಾಮೀಲಾಗಿದ್ದಾರೆ. 2019ರಿಂದ 2023ರವರೆಗೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಈ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಪ್ರಕರಣಗಳ ತನಿಖೆಗೆ ಮರುಜೀವ ನೀಡಿ ಹೊಸದಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು.
ನಾನಾ ಪೊಲೀಸ್ ಠಾಣೆಗಳಲ್ಲಿ ಶ್ರೀಕಿ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಐಡಿಯ ಅಡಿಯಲ್ಲೇ ಮೂವರು ಅಧಿಕಾರಿಗಳಿರುವ ವಿಶೇಷ ತನಿಖಾ ತಂಡದ ರಚನೆಯನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಅಲೋಕ್ ಮೋಹನ್ ಅವರು ಪ್ರಕಟಿಸಿದ್ದರು. ಇದರಲ್ಲಿ ಅತ್ಯಂತ ಮುಖ್ಯವಾಗಿರುವುದು 2020ರಲ್ಲಿ ಸಿಸಿಬಿಯು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಶ್ರೀಕಿ ಮತ್ತು ಆತನ ಸಹಚರರ ಮೇಲೆ ನೀಡಿರುವ ದೂರಿನ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಶ್ರೀಕಿ ಮತ್ತು ಟೀಮ್ ಅಂತಾರಾಷ್ಟ್ರೀಯ ಕ್ರಿಪ್ಟೋ ಎಕ್ಸ್‌ಚೇಂಜ್ ಗಳು ಮತ್ತು ಪೋಕರ್ ಗೇಮ್‌ಗಳನ್ನು ಹ್ಯಾಕ್ ಮಾಡಿ ಅಕ್ರಮ ಸಂಪತ್ತು ಗಳಿಸಲು ಯತ್ನಿಸಿತ್ತು ಎನ್ನುವುದು ಈ ಆರೋಪ.
ಜಾರಿ ನಿರ್ದೇಶನಾಲಯವು ಶ್ರೀಕಿ ಮತ್ತು ಇತರ 18 ಮಂದಿಯ ಮೇಲೆ ಸಲ್ಲಿಸಿರುವ ಚಾರ್ಜ್‌ಶೀಟ್‌ಗೂ 2020ರ ಸಿಸಿಬಿ ಪ್ರಕರಣಕ್ಕೂ ನೇರವಾದ ಸಂಬಂಧ ಇಲ್ಲವಾದರೂ ಕೆಲವೊಂದು ಅಂಶಗಳು ಎರಡೂ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತವೆ. 2020ರಲ್ಲಿ ಸಿಸಿಬಿ ಶ್ರೀಕಿಯನ್ನು ಬಂಧಿಸಿದ ಬಳಿಕವೇ 2019ರಲ್ಲಿ ನಡೆದ ರಾಜ್ಯದ ಇ-ಪ್ರೊಕ್ಯೂರ್‌ಮೆಂಟ್ ಸೆಲ್‌ನಲ್ಲಿ ನಡೆದ 11.5 ಕೋಟಿ ರೂ. ಕಳವು ಪ್ರಕರಣ ಬೆಳಕಿಗೆ ಬಂದಿತ್ತು.
ಜಾರಿ ನಿರ್ದೇಶನಾಲಯದ ಜಾರ್ಜ್‌ಶೀಟ್‌ನಲ್ಲೇನಿದೆ?
ರಾಜ್ಯದ ಸರ್ಕಾರ ಇ-ಪ್ರೊಕ್ಯೂರ್‌ಮೆಂಟ್ ವಿಭಾಗದಿಂದ 11.5 ಕೋಟಿ ರೂ. ಕಳವಾದ ಪ್ರಕರಣದಲ್ಲಿ ಹಣ ಲೇವಾದೇವಿ ವಿಚಾರದಲ್ಲಿ ತನಿಖೆ ಮಾಡಿದ ಜಾರಿ ನಿರ್ದೇಶಾಲಯವು ಹಲವು ಅಂಶಗಳನ್ನು ಗುರುತಿಸಿದೆ. ತನಿಖೆ ಆಂಭವಾಗುತ್ತಿದ್ದಂತೆಯೇ ಕಳವಾದ ಮೊತ್ತದಲ್ಲಿ 1.43 ಕೋಟಿ ರೂ. ವಶಪಡಿಸಿಕೊಳ್ಳಲಾಯಿತು. ಕಳವು ಮಾಡಿದ ಡಿಜಿಟಲ್ ನಿಧಿಯ ಬದಲಿಗೆ ನಗದು ಹಣವನ್ನು ಪಡೆಯಲು ಹ್ಯಾಕರ್‌ಗಳ ತಂಡ ಕೆಲವು ಉದ್ಯಮಿಗಳಿಗೆ ಕಮಿಷನ್ ರೂಪದಲ್ಲಿ ಹಣ ನೀಡಿದೆ ಎನ್ನುವುದು ತನಿಖೆ ವೇಳೆ ಬಯಲಾಗಿತ್ತು.
ಶ್ರೀಕಿ ಮತ್ತು ಅವನ ಸಹಚರರಾದ ಸುನೀಶ್ ಹೆಗ್ಡೆ, ಹೇಮಂತ್ ಮುದ್ದಪ್ಪ ಮತ್ತು ಪ್ರಸಿದ್ಧ್ ಶೆಟ್ಟಿ ಅವರು ನಿಧಿಯನ್ನು ವರ್ಗಾವಣೆ ಮಾಡಿ ಹಣವನ್ನು ಪಡೆಯುವ ಒಂದು ಲೇವಾದೇವಿ ವ್ಯವಸ್ಥೆಯನ್ನು ಸಿದ್ಧಪಡಿಸಿದ್ದರು. ಮೊದಲ ಹಂತದ ಹ್ಯಾಕಿಂಗ್ ಅಂದರೆ 1.05 ಕೋಟಿ ರೂ.ಯನ್ನು ತಾನೇ ಮಾಡಿದ್ದಾಗಿ ಶ್ರೀಕಿ ಒಪ್ಪಿಕೊಂಡಿದ್ದ. ಎರಡನೇ ಬಾರಿಗೆ ನಡೆದ 10.50 ಕೋಟಿ ರೂ. ಹ್ಯಾಕ್ ಮತ್ತು ಮುಂದಿನ ಹಂತದ 35 ಕೋಟಿ ರೈ ಹ್ಯಾಕಿಂಗ್‌ನ್ನು ಸಿವಿಲ್ ಕಾಂಟ್ರಾಕ್ಟರ್ ಮತ್ತು ಉದ್ಯಮಿಯಾಗಿರುವ ತನ್ನ ಸಹಚರ ಸುನೀಶ್ ಹೆಗ್ಡೆ ನೇತೃತ್ವದಲ್ಲಿ ನಡೆಸಲಾಯಿತು ಎಂದು ಶ್ರೀಕಿ ತಿಳಿಸಿದ್ದ. ಶ್ರೀಕಿಯ ಇನ್ನುಳಿದ ಸಹಚರರಾದ ವಿನಿತ್ ಕುಮಾರ್, ಸುಶೀಲ್ ಚಂದ್ರ, ಹರ್ವಿಂದರ್ ಸಿಂಗ್ ಅವರ ಹೆಸರು ಕೂಡಾ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.
2019ರ ಜುಲೈ 1ರಂದು ಇ-ಗವರ್ನೆನ್ಸ್ ಇಲಾಖೆಯ ಅಕೌಂಟನ್ನು ಹ್ಯಾಕ್ ಮಾಡಿ ಕಳವು ಮಾಡಲಾದ 1.05 ಕೋಟಿ ರೂಗಳಲ್ಲಿ 30.76 ಕೋಟಿ ರೂ.ಗಳನ್ನು ನಿಮ್ಮಿ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಯಿಂದ ವಶಪಡಿಸಿಕೊಳ್ಳಲಾಗಿತ್ತು. ಅಂದರೆ ಹ್ಯಾಕರ್‌ಗಳು ಈ ಪ್ರಮಾಣದ ಡಿಜಿಟಲ್ ಮೊತ್ತವನ್ನು ನಗದಾಗಿ ಪರಿವರ್ತಿಸಿ ಕೊಡುವಂತೆ ನಿಮ್ಮಿ ಎಂಟರ್‌ಪ್ರೈಸಸ್‌ಗೆ ಕೊಟ್ಟಿದ್ದರು.
2019ರ ಜುಲೈ 9ರಂದು 10.5 ಕೋಟಿ ರೂ. ಕಳವು ಮಾಡಲಾಗಿತ್ತು. ಇದರ ಬೆನ್ನು ಹತ್ತಿದ ಸಿಐಡಿ ಮತ್ತು ಇ.ಡಿ ಸಂಸ್ಥೆಗಳು ನಾಗಪುರ ಮೂಲದ ಉದಯ ಗ್ರಾಮ ವಿಕಾಸ ಸಂಸ್ಥೆ ಸೇರಿದಂತೆ ಇನ್ನೂ ಕೆಲವು ಸಂಸ್ಥೆಗಳ ಬಾಗಿಲಿಗೆ ಹೋಗಿ ನಿಂತಿದ್ದವು. ಇವು ಕಳವು ಮಾಡಿದ ನಿಧಿಯನ್ನು ಹವಾಲಾ ಹಣವಾಗಿ ಪರಿವರ್ತಿಸಿ ಹ್ಯಾಕರ್‌ಗಳಿಗೆ ನೀಡುವ ಕೆಲಸ ಮಾಡಿದ್ದವು.
ಗ್ರಾಮ ವಿಕಾಸ ಸಂಸ್ಥೆಯ ಇಬ್ಬರು ಮಾಲೀಕರಾದ ರತ್ನಾಕರ್ ವಾಲ್ಕೆ ಮತ್ತು ಅವನ ಪತ್ನಿ ರಣದೀಶ್ ಆಶರ್ ಅವರೇ ಈ ಪ್ರಕಣದಲ್ಲಿ ಹಣ ಲೇವಾದೇವಿ ನಡೆಸಿದವರು ಎಂದು ಪತ್ತೆಯಾಯಿತು. ಇವರ ವಿರುದ್ಧವೂ ಇ.ಡಿ. ಚಾರ್ಜ್‌ಶೀಟ್ ಹಾಕಿದೆ.
ಜುಲೈ 9ರಂದು ಕಳವಾದ 10.5 ಕೋಟಿ ರೂ.ಗಳ ಪೈಕಿ ಒಟ್ಟು 1.13 ಕೋಟಿ ರೂಯನ್ನು ಎನ್.ಜಿಒ ಮತ್ತು ಇನ್ನೊಬ್ಬ ಉದ್ಯಮಿ ರಾಜ್‌ಕುಮಾರ್ ಸಂಕ್ಲೇಚಾನ ಕೈಯಿಂದ ವಶಪಡಿಸಿಕೊಳ್ಳಲಾಗಿದೆ. ಎನ್‌ಜಿಒ ಖಾತೆಯಿಂದ 74 ಲಕ್ಷ ಹಾಗೂ ಸಂಕ್ಲೇಚ ಖಾತೆಯಿಂದ 21 ಲಕ್ಷ ವಶಪಡಿಸಿಕೊಳ್ಳಲಾಗಿದೆ. ವಯರ್ ಮತ್ತು ಕೇಬಲ್‌ಗಳ ಖರೀದಿ ಹೆಸರಿನಲ್ಲಿ ಎನ್‌ಜಿಒ ಸಂಕ್ಲೇಚಾಗೆ 2.7 ಕೋಟಿ ರೂ. ಹಣ ವರ್ಗಾವಣೆ ಮಾಡಿತ್ತು.
ಹಲವು ರಾಜಕಾರಣಿಗಳು, ಮಕ್ಕಳು, ಮೊಮ್ಮಕ್ಕಳ ವಿಚಾರಣೆ
ಈ ಇ-ಪ್ರೊಕ್ಯೂರ್‌ಮೆಂಟ್ ವಿಭಾಗದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿ ಪಕ್ಷ ಬೇಧವಿಲ್ಲದೆ ಹಲವು ರಾಜಕಾರಣಿಗಳು, ಅವರ ಪುತ್ರರು ಮತ್ತು ಮೊಮ್ಮಕ್ಕಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು
ಇ.ಡಿ. ಇಲಾಖೆಯು ಶ್ರೀಕಿಯ ಹಿರಿಯ ಸಹೋದರ ಸುದರ್ಶನ್ ರಮೇಶ್‌ನನ್ನು ವಿದೇಶಕ್ಕೆ ಹಾರಲು ಬಿಡದೆ ಆತನ ಎಲ್ಲ ವ್ಯವಹಾರಗಳನ್ನು ತನಿಖೆ ಮಾಡಿತ್ತು. ಸುದರ್ಶನ್ ರಮೇಶ್ ಖಾರೆಗೆ 50,000 ಬ್ರಿಟಿಷ್ ಪೌಂಡ್‌ಗಳಷ್ಟು ಹಣ ವರ್ಗವಾಗಿತ್ತು. ಅದನ್ನು 2021ರ ಮೇ ತಿಂಗಳಲ್ಲಿ ಆತ ಜಿಸಿಪಿ ಯುಕೆ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಬ್ರಿಟನ್ ನಿವಾಸಿ ಹನೀಶ್ ಪಟೇಲ್ ಎಂಬಾತನಿಗೆ ವರ್ಗಾವಣೆ ಮಾಡಿದ್ದ.
ಇದನ್ನೂ ಓದಿ: Bitcoin Scam : ಬಿಟ್ ಕಾಯಿನ್ ಹಗರಣ ಮರುತನಿಖೆಗೆ ಸರ್ಕಾರ ಆದೇಶ ; ಬಿಜೆಪಿಗೆ ನಡುಕ?
ಶ್ರೀಕಿ ಹ್ಯಾಕಿಂಗ್ ಮೂಲಕ ಕಳವು ಮಾಡಿದ ಹಣವನ್ನು ಲೇವಾದೇವಿ ಮಾಡುವ ವ್ಯವಹಾರದಲ್ಲಿ ತೊಡಗಿದ್ದ. ಹಣದ ವರ್ಗಾವಣೆಗೆ ಆತ ಬಿಟ್ ಕಾಯಿನ್ ಮತ್ತಿತರ ಕ್ರಿಪ್ಟೋಕರೆನ್ಸಿಗಳನ್ನು ಬಳಸುತ್ತಿದ್ದ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.