ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಗೆ ಆಗಮಿಸಿದ್ದ ಚಿತ್ರದುರ್ಗ ಜಿಲ್ಲೆಯ ಕಾರ್ಯಕರ್ತ ಸಿದ್ದೇಶ್ ಯಾದವ್ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ.
ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಪ್ರಭಾರಿಗಳ ವಿಶೇಷ ಸಭೆ ಆಯೋಜನೆಯಾಗಿತ್ತು. ಈ ಸಭೆಯಲ್ಲಿ ಭಾಗವಹಿಸಲು ಸಿದ್ದೇಶ್ ಯಾದವ್ ಆಗಮಿಸಿದ್ದರು. ಸಭೆ ಮುಗಿಸಿ ಹೊರಬಂದಾಗ ಕುಸಿದು ಬಿದ್ದಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದವರು ಸಮೀಪದ ಕೆ.ಸಿ. ಜನರಲ್ ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದರೆ ಈ ವೇಳೆಗಾಗಲೆ ಸಿದ್ದೇಶ್ ಯಾದವ್ ಮೃತಪಟ್ಟಿದ್ದರು ಎನ್ನಲಾಗಿದೆ. ಸಿದ್ದೇಶ್ ಅವರಿಗೆ ಹೃದಯಾಘಾತವಾಗಿರಬಹುದು ಎನ್ನಲಾಗಿದ್ದು, ಮತ್ತಷ್ಟು ಹೆಚ್ಚಿನ ಮಾಹಿತಿ ಲಭಿಸಬೇಕಾಗಿದೆ.
ಇದನ್ನೂ ಓದಿ: Keep Your Heart Healthy: ಹೀಗೆ ಮಾಡಿ ಹೃದಯವನ್ನು ಭದ್ರವಾಗಿಟ್ಟುಕೊಳ್ಳಿ!
ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಸಿದ್ದೇಶ್ ಯಾದವ್, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಿಜೆಪಿ ಬಳ್ಳಾರಿ, ರಾಯಚೂರು ಸೇರಿ ನಾಲ್ಕು ವಿಭಾಗ ಪ್ರಭಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಇಂದು ನಮ್ಮ ಕಾರ್ಯಕರ್ತ ಸಿದ್ದೇಶ ಮೃತಪಟ್ಟಿದ್ದಾರೆ. ಬಳ್ಳಾರಿ, ರಾಯಚೂರು ಸೇರಿ ನಾಲ್ಕು ಜಿಲ್ಲೆಯ ವಿಭಾಗದ ಪ್ರಭಾರಿ ಆಗಿದ್ದರು. ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾದರು. ಲಘು ಹೃದಯಗಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕಟೀಲ್ ಸಂತಾಪ
ಬಿಜೆಪಿ ಬಳ್ಳಾರಿ ವಿಭಾಗ ಪ್ರಭಾರಿ ಸಿದ್ದೇಶ್ ಯಾದವ್ ಅವರ ಅಕಾಲಿಕ ನಿಧನ ಆಘಾತಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಈ ಹಿಂದೆ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾಗಿ ಅವರು ಬಿಜೆಪಿಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಪರಿವಾರದ ಸಂಘಟನೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದು, ಅವರ ನಿಧನ ಅತ್ಯಂತ ನೋವು ತಂದಿದೆ.
ದೇವರು ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.